The Federal Exclusive | ಶನಿವಾರ ಆರ್‌ಸಿಬಿ ನಿರ್ಣಾಯಕ ಪಂದ್ಯ: ಶ್ರೇಯಾಂಕಾ ಪಾಟೀಲ್ ಪ್ರತಿಕ್ರಿಯೆ ಏನು?
x

The Federal Exclusive | ಶನಿವಾರ ಆರ್‌ಸಿಬಿ ನಿರ್ಣಾಯಕ ಪಂದ್ಯ: ಶ್ರೇಯಾಂಕಾ ಪಾಟೀಲ್ ಪ್ರತಿಕ್ರಿಯೆ ಏನು?

ʻಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಲಿದೆ. ನಾವು ಪ್ಲೇ ಆಫ್ ತಲುಪಲು ಎಷ್ಟು ರನ್ ಅಂತರದಲ್ಲಿ ಗೆಲ್ಲಬೇಕು ಎಂದು ಯಾರಾದರೂ ಹೇಳಿ. ಓಹ್, ಭರವಸೆ ಇದೆ.. ಕಮಾನ್‌ ಆರ್‌ಸಿಬಿʼʼ ಎಂದು ಹೇಳಿದ್ದರು.‌


ಶನಿವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಅಕ್ಷರಶಃ ರಣಾಂಗಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 2024ನೇ ಐಪಿಎಲ್‌ ಆವೃತ್ತಿಯ ಪ್ಲೇ ಆಫ್‌ ಗೆ ಪ್ರವೇಶ ಮಾಡಲು ರಾಯಲ್‌ ಚಾಲೇಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಚೆನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಸೆಣಸಾಟ ನಡೆಸಲಿವೆ. ಆದರೆ ಮಳೆಯ ಕಾಟ ಎದುರಾಗಲಿದೆ ಎನ್ನುವ ಸುದ್ಧಿಯು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅದೇ ರೀತಿ ಆರ್ ಸಿಬಿ ಮಹಿಳಾ ತಂಡದ ಸ್ಟಾರ್ ಪ್ಲೇಯರ್ ಆಲ್‌ರೌಂಡರ್‌ ಶ್ರೇಯಾಂಕಾ ಪಾಟೀಲ್ ಕೂಡ ಮಳೆಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ʻದ ಫೆಡೆರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಶ್ರೇಯಾಂಕಾ, ʻʻನಾನು ಚಿಕ್ಕವಳಿದ್ದಾಗಿನಿಂದ ನಮ್ಮ ಆರ್‌ಸಿಬಿ ಪುರುಷರ ತಂಡ ಆಟವಾಡುವುದನ್ನು ನೋಡುತ್ತಾ ಬಂದಿದ್ದೇನೆ. ನಾನು ಕೂಡ ಅಸಂಖ್ಯಾತ ಆರ್‌ಸಿಬಿ ಅಭಿಮಾನಿಗಳಲ್ಲಿ ಒಬ್ಬಳು. ಈ ಬಾರಿ ನಮ್ಮ ತಂಡ ಕಪ್‌ ಗೆಲ್ಲಲು ಸದೃಢವಾಗಿದೆ. ಸತತ ಐದು ಪಂದ್ಯಗಳನ್ನು ಗೆಲ್ಲುವುದು ಸುಲಭದ ಮಾತಲ್ಲ, ಆ ಸಾಧನೆಯನ್ನು ನಮ್ಮ ಆರ್‌ಸಿಬಿ ತಂಡ ಮಾಡಿದೆ. ನಾಳೆ ಚೆನೈ ವಿರುದ್ಧದ ಪಂದ್ಯದಲ್ಲೂ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಅದೇ ರೀತಿ ಫೈನಲ್‌ ವರೆಗೂ ಹೋಗಿ ಕಪ್ ಗೆದ್ದೇ ಗೆಲ್ಲುತ್ತಾರೆ. ಒಂದೇ ವರ್ಷದಲ್ಲಿ ಆರ್‌ಸಿಬಿ ಎರಡೂ (ಮಹಿಳಾ ಹಾಗೂ ಪರುಷರ) ತಂಡಗಳು ಕಪ್‌ ಗೆಲ್ಲುವುದು ವಿಶೇಷವಾಗಿರುತ್ತದೆ. ನಾವು ಈಗಾಗಲೇ ಕಪ್‌ ಗೆದ್ದಿದೀವಿ, ಇದೀಗ ಆರ್‌ಸಿಬಿ ಪುರುಷ ತಂಡದ ಸರದಿ.. ಅವರೂ ಕೂಡ ಕಪ್‌ ಗೆಲ್ಲುತ್ತಾರೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"16 ವರ್ಷಗಳಿಂದ ಆರ್‌ಸಿಬಿ ತಂಡದ ಅಭಿಮಾನಿಗಳು ʼಈ ಸಲ ಕಪ್‌ ನಮ್ದೇʼ ಎಂದು ಆವೃತ್ತಿ ಆರಂಭಕ್ಕೂ ಮುನ್ನವೇ ಕ್ರೇಜ್‌ ಹುಟ್ಟುಹಾಕುತ್ತಾ ಬಂದಿದ್ದರು. ನಾವು ಕಪ್‌ ಗೆದ್ದು, ʼಈ ಸಲ ಕಪ್‌ ನಮ್ದುʼಎಂದು ಹೇಳಿದ್ದಾಗಿದೆ. ಇದೀಗ ಆರ್‌ಸಿಬಿ ಪುರುಷರು "ಈ ಸಲ ಕಪ್ ನಮ್ದು" ಎಂದು ಹೇಳುವ ಸಮಯ ಬಂದೇ ಬರುತ್ತದೆ. All the best RCB " ಎಂದು ಶುಭಾಶಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು ಎಂಬ ಬಗ್ಗೆ ಪ್ರತಿಕ್ರಿಯಿಸಿ, ʻʻಹೌದು ಮಳೆ ಅಡ್ಡಿಯಾಗುತ್ತದೆ ಎನ್ನುವ ಆತಂಕ ಇದೆ. ಆದರೆ ನಾವು ಮಳೆ ಬರಬಾರದು ಅಂತಲೇ ಬೇಡಿಕೊಳ್ಳುವುದು.. ಮಳೆ ಬಂದರೆ ಕೊಟ್ಯಾಂತರ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಆಗಲಿದೆ, ಅದರಲ್ಲಿ ನಾನು ಒಬ್ಬಳಾಗಿರುತ್ತೇನೆʼʼ ಎಂದು ಶ್ರೇಯಾಂಕಾ ಆತಂಕ ವ್ಯಕ್ತಪಡಿಸಿದರು.

ಕಳೆದ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ‌47 ರನ್‌ಗಳಿಂದ ಗೆಲುವು ಸಾಧಿಸಿದ ಬಳಿಕ ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿದ್ದ ಶ್ರೇಯಾಂಕಾ ಪಾಟೀಲ್‌, ʻʻಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಲಿದೆ. ನಾವು ಪ್ಲೇ ಆಫ್ ತಲುಪಲು ಎಷ್ಟು ರನ್ ಅಂತರದಲ್ಲಿ ಗೆಲ್ಲಬೇಕು ಎಂದು ಯಾರಾದರೂ ಹೇಳಿ. ಓಹ್, ಭರವಸೆ ಇದೆ.. ಕಮಾನ್‌ ಆರ್‌ಸಿಬಿʼʼ ಎಂದು ಹೇಳಿದ್ದರು.‌

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕೂಡ ಸತತ ಸೋಲುಗಳ ಬಳಿಕ ಫಿನಿಕ್ಸ್‌ನಂತೆ ಎದ್ದು ಬಂದಿದ್ದ ಆರ್‌ಸಿಬಿ ಬಳಿಕ ಎಲ್ಲಾ ಪಂದ್ಯಗಳನ್ನು ಗೆದ್ದು, ಕಪ್ ಎತ್ತಿ ಹಿಡಿದಿತ್ತು. ಅದೇ ರೀತಿಯ ಘಟನೆ ಪುರುಷರ ಐಪಿಎಲ್‌ನಲ್ಲಿಯೂ ಮರುಕಳಿಸುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ.

ಆರ್‌ಸಿಬಿ-ಸಿಎಸ್‌ಕೆ ಎರಡೂ ತಂಡ ಪ್ಲೇಆಫ್‌ ಪ್ರವೇಶ ಸಾಧ್ಯ!

ಪ್ರಮುಖವಾಗಿ ಆರ್‌ಸಿಬಿ ಅದ್ಬುತ ಪ್ರದರ್ಶನದ ಮೂಲಕ ಸತತ ಐದು ಪಂದ್ಯ ಗೆದ್ದು ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ಇದೀಗ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಪ್ ಸುತ್ತು ಪ್ರವೇಶಿಸಲು ಆರ್‌ಸಿಬಿ ಸಜ್ಜಾಗಿದೆ. ಚೆನ್ನೈ ವಿರುದ್ದ ಉತ್ತಮ ರನ್‌ರೇಟ್ ನೊಂದಿಗೆ ಗೆಲುವು ಸಾಧಿಸಿದರೆ ಆರ್‌ಸಿಬಿ ಪ್ಲೇ ಆಫ್ ಸ್ಥಾನಕ್ಕೇರಲಿದೆ. ಆದರೆ ಸಿಎಸ್‌ಕೆ ಹಾಗೂ ಆರ್‌ಸಿಬಿ ಎರಡೂ ತಂಡಗಳು ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಿದೆ. ಹೌದು, ಸನ್‌ರೈಸರ್ಸ್ ಹೈದರಾಬಾದ್ ತಂಡ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಕೇವಲ ಸೋಲುವುದಲ್ಲ, ಹೀನಾಯವಾಗಿ ಸೋಲು ಕಾಣಬೇಕಿದೆ. ಆಗ ಅಂತಹ ಅವಕಾಶವಿದೆ.

ಸದ್ಯ ಅಂಕಪಟ್ಟಿಯಲ್ಲಿ ಆರ್‌ಸಿಬಿ 6ನೇ ಸ್ಥಾನದಲ್ಲಿದೆ. 13 ಪಂದ್ಯಗಳಿಂದ 12 ಅಂಕ ಸಂಪಾದಿಸಿದೆ. ಅಂಕಪಟ್ಟಿಯ ಟಾಪ್ ನಾಲ್ಕು ಸ್ಥಾನದಲ್ಲಿ ಕೋಲ್ಕತಾ ಹಾಗೂ ರಾಜಸ್ಥಾನ ಈಗಾಗಲೇ ಅಧಿಕತವಾಗಿ ಪ್ಲೇ ಆಫ್ ಸ್ಥಾನಕ್ಕೇರಿವೆ. ಇನ್ನುಳಿದ 2 ಸ್ಥಾನಕ್ಕಾಗಿ ಚೆನ್ನೈ, ಹೈದರಾಬಾದ್ ಹಾಗೂ ಆರ್‌ಸಿಬಿ ಹೋರಾಟ ನಡೆಸುತ್ತಿವೆ.

ಪ್ಲೇ ಆಫ್ ಅವಕಾಶಕ್ಕೆ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಉತ್ತಮ ರನ್‌ರೇಟ್‌ನಿಂದ ಗೆಲ್ಲಬೇಕು. ಈ ವಿಚಾರದಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ. ಹೀಗಾದರೆ ಆರ್‌ಸಿಬಿ ಹಾಗೂ ಚೆನ್ನೈ ಅಂಕ 14 ಆಗಲಿದೆ. ರನ್‌ರೇಟ್ ಆಧಾರದಲ್ಲಿ ಆರ್‌ಸಿಬಿ ಕ್ವಾಲಿಫೈ ಆಗಲಿದೆ. ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ 12 ಪಂದ್ಯದಲ್ಲಿ 14 ಅಂಕ ಸಂಪಾದಿಸಿದೆ. ಇನ್ನುಳಿದ 2 ಪಂದ್ಯದಲ್ಲಿ ಹೈದಾಬಾದ್ ಹೀನಾಯವಾಗಿ ಸೋಲು ಕಾಣಬೇಕಿದೆ. ಇತ್ತ ಚೆನ್ನೈ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದರೆ, ಹೊಸ ಪ್ಲೇ ಆಫ್ ಲೆಕ್ಕಾಚಾರ ತೆರೆದುಕೊಳ್ಳಲಿದೆ. ಹೀಗಾದರೆ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಗಳೂ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಸ್ಥಾನದಿಂದ ಹೊರಗುಳಿಯಲಿದೆ.

Read More
Next Story