Invest Karnataka 2025 | ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಏರ್ ಟ್ಯಾಕ್ಸಿ ಪರಿಹಾರ?
x
ಇನ್ವೆಸ್ಟ್​ ಕರ್ನಾಟಕ ಎಕ್ಸ್​ಪೋ ಉದ್ಘಾಟಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್

Invest Karnataka 2025 | ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ 'ಏರ್ ಟ್ಯಾಕ್ಸಿ' ಪರಿಹಾರ?

ಇನ್ವೆಸ್ಟ್​ ಕರ್ನಾಟಕ ಎಕ್ಸ್​ಪೋದಲ್ಲಿ ʼಏರ್ ಟ್ಯಾಕ್ಸಿʼ ಗಮನ ಸೆಳೆಯುತ್ತಿದೆ. ಎಕ್ಸ್​ಪೋ ಉದ್ಘಾಟಿಸಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಏರ್ ಟ್ಯಾಕ್ಸಿಯಲ್ಲಿ ಕುಳಿತು ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.


ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಏರ್ ಟ್ಯಾಕ್ಸಿ ಪರಿಹಾರ ಒದಗಿಸಬಲ್ಲದೇ? ಹೌದು, ಇನ್ವೆಸ್ಟ್ ಕರ್ನಾಟಕ-2025 ಹೂಡಿಕೆದಾರರ ಸಮಾವೇಶದಲ್ಲಿ ಬೆಂಗಳೂರು ಮೂಲದ ಏರೋಸ್ಪೇಸ್ ಸ್ಟಾರ್ಟ್ಅಪ್ ಸರಳಾ ಎವಿಯೇಶನ್ ತನ್ನ ಏರ್ ಟ್ಯಾಕ್ಸಿ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಇನ್ವೆಸ್ಟ್ ಕರ್ನಾಟಕದ `ಫ್ಯೂಚರ್ ಆಫ್ ಇನ್ನೋವೇಶನ್’ ಎಕ್ಸ್-ಪೋದಲ್ಲಿ ಪ್ರಮುಖ ಆಕರ್ಷಣೆಯಾಗಿದೆ.

ಇದರೊಂದಿಗೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಯುವಜನರ ಗಮನ ಸೆಳೆಯುತ್ತಿರುವುದೆಂದರೆ, ನಾಳಿನ ನಮ್ಮ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ನಾವೀನ್ಯತೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಏರ್ಪಡಿಸಿರುವ `ಫ್ಯೂಚರ್ ಆಫ್ ಇನ್ನೋವೇಶನ್’ ಎಕ್ಸ್-ಪೋಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಜೊತೆಯಾಗಿ ಬುಧವಾರ ಚಾಲನೆ ನೀಡಿದರು.


ಬಳಿಕ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ್ ಇಬ್ಬರೂ ಕರ್ನಾಟಕ ಪೆವಿಲಿಯನ್, ಟೊಯೋಟಾ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ, ಡ್ರೋನ್ ತಂತ್ರಜ್ಞಾನದ ವೈಶಿಷ್ಟ್ಯಪೂರ್ಣ ಮಜಲುಗಳನ್ನು ಕುತೂಹಲದಿಂದ ವೀಕ್ಷಿಸಿ, ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜತೆಗೆ ಕೃಷಿಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಹೊತ್ತು ತರಲಿವೆ ಎನ್ನಲಾಗುತ್ತಿರುವ ಅಗ್ರಿ-ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆಗಳನ್ನು ಸುಲಭವಾಗಿಸುವ ಆರೋಗ್ಯಸೇವೆಗಳ ತಂತ್ರಜ್ಞಾನಗಳ ಕುರಿತು ತಿಳಿದುಕೊಂಡರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, `ಇದರಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಈ ಪೈಕಿ ಜಾಗತಿಕ ಮಟ್ಟದ ಕಂಪನಿಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳೆರಡೂ ಇವೆ. ಡ್ರೋನ್, ಬಾಹ್ಯಾಕಾಶ, ಕೃಷಿ, ಆರೋಗ್ಯ, ಉತ್ಪಾದನಾ ವಲಯ, ವೈಮಾಂತರಿಕ್ಷ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಿರುವ ಆಧುನಿಕ ತಂತ್ರಜ್ಞಾನ ಧಾರೆಗಳನ್ನು ಇಲ್ಲಿ ನೋಡಬಹುದು’ ಎಂದರು.


ಕರ್ನಾಟಕ ಪೆವಿಲಿಯನ್

ಪ್ರಮುಖವಾಗಿ ಇಲ್ಲಿ ಮರುಬಳಕೆ ಇಂಧನ, ಸೆಮಿಕಂಡಕ್ಟರ್, ವಿದ್ಯುಚ್ಚಾಲಿತ ವಾಹನಗಳು ಮತ್ತು ಸುಸ್ಥಿರ ಉತ್ಪಾದನೆಗೆ ಹೆಸರಾದ ಕಂಪನಿಗಳು ಪಾಲ್ಗೊಂಡಿವೆ. ಜೊತೆಗೆ ರಾಜ್ಯದ ಸಾಧನೆಗಳನ್ನು ಬಿಂಬಿಸುವ ಪ್ರತ್ಯೇಕ `ಕರ್ನಾಟಕ ಪೆವಿಲಿಯನ್’ ಕೂಡ ಇದೆ. ಪಾಲ್ಗೊಂಡಿರುವ ಕಂಪನಿಗಳಲ್ಲಿ ಜಿ.ಇ ಹೆಲ್ತ್ ಕೇರ್, ಹೀರೋ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಪ್ರಮುಖವಾಗಿವೆ. `ಕರ್ನಾಟಕ ಪೆವಿಲಿಯನ್’ನಲ್ಲಿ ಕ್ವಿನ್ ಸಿಟಿ, ಫ್ಲೈಯಿಂಗ್ ವೆಡ್ಜ್, ಬೆಲ್ಲಾಟ್ರಿಕ್ಸ್, ಸ್ಕೀಸರ್ವ್, ಫ್ಲಕ್ಸ್ ಆಟೋ ಮುಂತಾದ ಉದ್ಯಮಗಳಿವೆ.

ಸರಳಾ ಏವಿಯೇಶನ್

ಇದು ಫ್ಯೂಚರ್ ಆಫ್ ಇನ್ನೋವೇಶನ್ ಎಕ್ಸ್​​-ಪೋದ ಪ್ರಮುಖ ಆಕರ್ಷಣೆಯಾಗಿದೆ. 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಸರಳಾ ಎವಿಯೇಶನ್ ಫೌಂಡರ್ ಸಿಟಿಒ ರಾಕೇಶ್ ಗಾಂವ್ಕರ್, 'ಸರಳಾ ಎವಿಯೇಶನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಏರ್ ಟ್ಯಾಕ್ಸಿ ಮುಂದಿನ 3 ವರ್ಷಗಳಲ್ಲಿ ಬೆಂಗಳೂರಿಗರಿಗೆ ಸೇವೆ ಆರಂಭಿಸಲಿದೆ. 2029 ರಲ್ಲಿ ವಿವಿಧ ಪ್ರದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸೇವೆ ನೀಡಲಿದೆ. ನಾವು ಏರ್ ಆಂಬುಲೆನ್ಸ್ ಸೇವೆಯನ್ನೂ ಕೂಡ ಒದಗಿಸಲಿದ್ದೇವೆ' ಎಂದು ವಿವರಿಸಿದರು.

ಇದೇ ವೇಳೆ ಎಕ್ಸ್​-ಪೋಕ್ಕೆ ಚಾಲನೆ ಕೊಟ್ಟ ಬಳಿಕ ವಿವಿಧ ಕಂಪನಿಗಳು ಹಾಕಿರುವ ಸ್ಟಾಲ್​ಗಳನ್ನು ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಮೂಲದ ಏರೋಸ್ಪೇಸ್ ಸ್ಟಾರ್ಟ್ಅಪ್ ಸರಳಾ ಎವಿಯೇಶನ್ ಏರ್ ಟ್ಯಾಕ್ಸಿಯಲ್ಲಿ ಕುಳಿತು ಪರಿಶೀಲಿಸಿದರು.

Read More
Next Story