Invest Karnataka 2025: ರೈತರ ಭೂಮಿ ಒತ್ತುವರಿಗೆ ಲ್ಯಾಂಡ್‌ ಬ್ಯಾಂಕ್‌ ಎನ್ನುವ ಸಿದ್ಧಸೂತ್ರ? : ವಿಷಯ ತಜ್ಞರು ಏನೆನ್ನುತ್ತಾರೆ?
x
ಕೈಗಾರಿಕಾ ಇಲಾಖೆಯಿಂದ ಕೃಷಿ ಭೂಮಿ ಒತ್ತುವರಿ ವಿರೋಧಿಸಿ ನಡೆಯುತ್ತಿರುವ ದೇವನಹಳ್ಳಿ ರೈತರ ಸಾವಿರ ದಿನ ತಲುಪಿರುವ ಹೋರಾಟದ ಸಾಂದರ್ಭಿಕ ಚಿತ್ರ.

Invest Karnataka 2025: ರೈತರ ಭೂಮಿ ಒತ್ತುವರಿಗೆ ಲ್ಯಾಂಡ್‌ ಬ್ಯಾಂಕ್‌ ಎನ್ನುವ ಸಿದ್ಧಸೂತ್ರ? : ವಿಷಯ ತಜ್ಞರು ಏನೆನ್ನುತ್ತಾರೆ?

ಈ ವರೆಗೆ ಒಟ್ಟು 12 ಜಾಗತಿಕ ಹೂಡಿಕೆದಾರರ ಸಮಾವೇಶಗಳು ನಡೆದಿವೆ. ಈ ಎಲ್ಲ ಸಮಾವೇಶಗಳ ನಂತರ ರೈತರ ಭೂಮಿಯತ್ತ ಆಡಳಿತ ಕಣ್ಣು ಬೀಳುತ್ತದೆ ಎಂಬ ಆರೋಪವೂ ಇದೇ ಸಂದರ್ಭದಲ್ಲಿ ಕೇಳಿ ಬಂದಿದೆ.


ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2025 ಫೆ. 14 ರಂದು ಮುಕ್ತಾಯವಾಗಿದೆ. ಸುಮಾರು 10 ಲಕ್ಷ ಕೋಟಿ ರೂಪಾಯಿಗಳಷ್ಟು ಹೂಡಿಕೆ ಒಪ್ಪಂದಕ್ಕೆ ಜಾಗತಿಕ ಬಂಡವಾಳ ಹೂಡಿಕೆದಾರರು ಹಾಗೂ ರಾಜ್ಯ ಕೈಗಾರಿಕಾ ಇಲಾಖೆ ನಡುವೆ ಒಡಂಬಡಿಕೆಗಳಾಗಿವೆ.

ಈ ವರ್ಷ ನಡೆದ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶವೂ ಸೇರಿದಂತೆ ಈ ವರೆಗೆ ಒಟ್ಟು 12 ಜಾಗತಿಕ ಹೂಡಿಕೆದಾರರ ಸಮಾವೇಶಗಳು ನಡೆದಿವೆ. ಆದರೆ, ಈ ಎಲ್ಲ ಸಮಾವೇಶಗಳ ನಂತರ ರೈತರ ಭೂಮಿಯತ್ತ ಆಡಳಿತ ಕಣ್ಣು ಬೀಳುತ್ತದೆ ಎಂಬ ಆರೋಪವೂ ಇದೇ ಸಂದರ್ಭದಲ್ಲಿ ಕೇಳಿ ಬಂದಿದೆ.

'ದ ಫೆಡರಲ್ ಕರ್ನಾಟಕ'ದೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ವಿವಿಧ ಕ್ಷೇತ್ರಗಳ ತಜ್ಞರು ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೈಗಾರಿಗಳ ಅಭಿವೃದ್ಧಿ ಆಗದೆಯೇ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಆದರೂ ಕೂಡ ರೈತರಿಂದ ಸರ್ಕಾರ ವಶಪಡಿಸಿಕೊಳ್ಳುವ ಭೂಮಿ ನಿಗದಿತ ಉದ್ದೇಶಕ್ಕೆ ಬಳಕೆ ಆಗುತ್ತಿಲ್ಲ ಎಂಬುದು ತಜ್ಞರ ಅಭಿಮತವಾಗಿದೆ.

ಸರ್ಕಾರಗಳು ರೈತರನ್ನು ಒಕ್ಕಲೆಬ್ಬಿಸುತ್ತಿವೆ

ಎಲ್ಲಾ ಸರ್ಕಾರಗಳು ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ಕೈಗಾರಿಕೆಗಳಿಗೆ ಪ್ರತಿ ಎಕರೆಗೆ 2.5 ಕೋಟಿ ರೂಪಾಯಿಗಳಿಗೆ ಭೂಮಿಯನ್ನು ಕೊಡುತ್ತಾರೆ. ಆದರೆ ಭೂಮಿ ವಶಪಡಿಸಿಕೊಳ್ಳುವಾಗ ರೈತರಿಗೆ ಕೊಡುವ ಬೆಲೆ ಎಷ್ಟು? ಕೆಲವೇ ಕೆಲವು ಲಕ್ಷ ರೂಪಾಯಿಗಳಷ್ಟು. ಜೊತೆಗೆ ಈ ಸರ್ಕಾರ ಬರುವ ಮೊದಲು ಭೂಸ್ವಾಧೀನ ಕಾಯ್ದೆಯನ್ನು ರದ್ದು ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಆದರೆ ಸರ್ಕಾರ ಬಂದು ಒಂದುವರೆ ವರ್ಷಗಳಾಗಿವೆ. ಆದರೆ ಆ ಕಾನೂನನ್ನು ರದ್ದು ಮಾಡಿಲ್ಲ. ಬಂಡವಾಳ ಶಾಹಿಗಳು ರೈತರಿಂದ ಕಡಿಮೆ ಬೆಲೆ ಭೂಮಿ ಖರೀದಿ ಮಾಡಿ, ಅದನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ದ ಫೆಡರಲ್‌ ಕರ್ನಾಟಕದ ಚರ್ಚೆಯಲ್ಲಿ ಭಾಗವಹಿಸಿ ಗಂಭೀರ ಆರೋಪ ಮಾಡಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುವಂತಹ ಕೆಲಸವನ್ನು, ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಬೇಡಿ ಎಂದು ಕುರೂಬುರು ಶಾಂತಕುಮಾರ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಎಲ್ಲಾ ಸರ್ಕಾರಗಳು ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ. ಕೈಗಾರಿಕೆಗಳಿಗೆ ಪ್ರತಿ ಎಕರೆಗೆ 2.5 ಕೋಟಿ ರೂಪಾಯಿಗಳಿಗೆ ಭೂಮಿಯನ್ನು ಕೊಡುತ್ತಾರೆ. ಆದರೆ ಭೂಮಿ ವಶಪಡಿಸಿಕೊಳ್ಳುವಾಗ ರೈತರಿಗೆ ಕೊಡುವ ಬೆಲೆ ಎಷ್ಟು? ಕೆಲವೇ ಕೆಲವು ಲಕ್ಷ ರೂಪಾಯಿಗಳಷ್ಟು. ಜೊತೆಗೆ ಈ ಸರ್ಕಾರ ಬರುವ ಮೊದಲು ಭೂಸ್ವಾಧೀನ ಕಾಯ್ದೆಯನ್ನು ರದ್ದು ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಆದರೆ ಸರ್ಕಾರ ಬಂದು ಒಂದುವರೆ ವರ್ಷಗಳಾಗಿವೆ. ಆದರೆ ಆ ಕಾನೂನನ್ನು ರದ್ದು ಮಾಡಿಲ್ಲ. ಬಂಡವಾಳ ಶಾಹಿಗಳು ರೈತರಿಂದ ಕಡಿಮೆ ಬೆಲೆ ಭೂಮಿ ಖರೀದಿ ಮಾಡಿ, ಅದನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ ಎಂದು ಕುರುಬೂರು ಶಾಂತಕುಮಾರ ಆರೋಪಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಕೊಳ್ಳೆ ಹೊಡೆಯುವಂತಹ ಕೆಲಸವನ್ನು, ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಮಾಡಬೇಡಿ ಎಂದು ಕುರೂಬುರು ಶಾಂತಕುಮಾರ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

12 ಸಮಾವೇಶಗಳಿಂದ ಬಂದಿರುವ ಕೈಗಾರಿಕೆಗಳೆಷ್ಟು?

"ಈ ವರೆಗೆ ಒಟ್ಟು 12 ಹೂಡಿಕೆದಾರರ ಸಮಾವೇಶಗಳು ಕರ್ನಾಟಕದಲ್ಲಿ ನಡೆದಿವೆ. ಸರ್ಕಾರ ಹೇಳಿರುವಂತೆ ʼಅಷ್ಟು ಹೂಡಿಕೆಯಾಗಿದೆ, ಇಷ್ಟು ಹೂಡಿಕೆಯಾಗಿದೆʼ ಎಂಬಂತಾಗಿದ್ದರೆ, ರಾಜ್ಯದಲ್ಲಿ ಕೈಗಾರಿಕೆಗಳ ಸಂಖ್ಯೆ ಅತಿ ಹೆಚ್ಚು ಇರಬೇಕಾಗಿತ್ತು. ಯಾವುದೇ ಸರ್ಕಾರ ಬರಲಿ, ಕೈಗಾರಿಕೆಗಳನ್ನು ರಾಜ್ಯದತ್ತ ಸೆಳೆಯುತ್ತಿದ್ದೇವೆ ಎಂಬುದನ್ನು ಜನರಿಗೆ ತೋರಿಸಬೇಕು. ಅಷ್ಟಕ್ಕೆ ಮಾತ್ರ ಈ ಇನ್ವೆಸ್ಟ್​ ಮೀಟ್​ಗಳು ಆಗುತ್ತವೆ. ನನ್ನ ಪ್ರಕಾರ ಇವೆಲ್ಲವೂ 'ಗಿಮಿಕ್ ಇನ್ವೆಸ್ಟ್​ ಮೀಟ್​'ಗಳೇ ಹೊರತು, ಇವನ್ನು ಯಾರು ಫಾಲೋಅಪ್ ಮಾಡುತ್ತಾರೆ? ಇಲ್ಲಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಎಷ್ಟು ಕೈಗಾರಿಕೆಗಳಿಗೆ ಈ ಮೀಟ್​ಗಳಿಂದ ಉಪಯೋಗ ಆಗಿದೆ?. ಅವರಿಗೆ ಒತ್ತು ಕೊಡಿ, ಅವರಿಗೆ ಶಕ್ತಿ ಕೊಡಿ‌," ಎಂದು ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಸಿದ್ದರಾಜು ಅವರು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ಮತ್ತೊಂದು ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.

'ಭೂ ಬ್ಯಾಂಕ್' ಒಂದು ದಂಧೆ ಆಗಿದೆ

ಭೂ ಬ್ಯಾಂಕ್ ಎಂಬುದು ಒಂದು ದಂಧೆಯಾಗಿದೆ ಎಂಬ ಗಂಭೀರ ಆರೋಪವನ್ನು ಎಂ. ಸಿದ್ದರಾಜು ಮಾಡಿದ್ದಾರೆ. ಕೈಗಾರಿಕೆಗಳ ಹೆದಸರಿನಲ್ಲಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವುದು. ನಂತರ ಕೈಗಾರಿಕೋದ್ಯಮಿಗಳು ಆ ಭೂಮಿಯನ್ನು ಇಟ್ಟುಕೊಳ್ಳುವುದು.

ರೈತರಿಂದ ಒಂದು ಬಾರಿ ಭೂಸ್ವಾಧೀನ ಮಾಡಿಕೊಂಡ ನಂತರ ರೈತರು ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಸುಲಭದ ಮಾತಲ್ಲ. ಬೆಂಗಳೂರು-ಮೈಸೂರು ನೈಸ್ ಹೆದ್ದಾರಿಗೆ ರೈತರಿಂದ ಅತಿ ಕಡಿಮೆ ಬೆಲೆಗೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಜೊತೆಗೆ ಅದೇ ಭೂಮಿಯ ಮೇಲೆ ಬ್ಯಾಂಕ್​ನಿಂದ 150 ಕೋಟಿ ರೂ. ಸಾಲ ಪಡೆಯುತ್ತಾರೆ. ಆ ಭೂಮಿ ರೈತರದ್ದಾದರೂ ಅವರಿಗೆ ಸಾಲ ಸಿಗುತ್ತದೆ. ಹೀಗೆ ವಶಪಡಿಸಿಕೊಳ್ಳುವ ಭೂಮಿಯನ್ನು ಕೈಗಾರಿಕಾ ಸಂಸ್ಥೆಗಳು ಮಾರಾಟ ಮಾಡಿರುವುದೂ ಇದೆ ಎಂದು ಸಿದ್ದರಾಜು ಆರೋಪಿಸಿದ್ದಾರೆ.

ವಾಸ್ತವವಾಗಿ ಹೂಡಿಕೆ ಆಗಿರುವುದೆಷ್ಟು?

2010 ರಿಂದಲೇ ಜಾಗತಿಕ ಹೂಡಿಕೆದಾರರ ಸಮಾವೇಶಗಳು ನಡೆಯುತ್ತಿವೆ. 2010, 2012ರಲ್ಲಿಯೂ ಜಿಮ್ (GIM-Global Investorsʼ Meet) ಮಾಡಲಾಗಿತ್ತು. ಅದರ ನಂತರ ಲೋಕಲ್ ಇನ್ವೆಸ್ಟರ್ಸ್​ ಮೀಟ್ ಅಂತಾ ಕಾರವಾರದಲ್ಲಿ, ಮಂಗಳೂರಿನಲ್ಲಿ ಮಾಡಲಾಯಿತು. 2010ರಲ್ಲಿ ಸುಮಾರು 4.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಒಡಂಬಡಿಕೆ ಆಗಿತ್ತು. ಆದರೆ ಅದರಲ್ಲಿ ಬಂದಿರುವುದು ಕೇವಲ ಶೇಕಡಾ 8ರಷ್ಟು ಮಾತ್ರ. 2012ರಲ್ಲಿ ನಡೆದ ಜಿಮ್​ನಿಂದ 8 ಲಕ್ಷ ಕೋಟಿ ರೂ. ಹೂಡಿಕೆಗೆ ಎಂಒಯು (ಒಪ್ಪಂದ) ಮಾಡಿಕೊಳ್ಳಲಾಗಿತ್ತು. ವಾಸ್ತವವಾಗಿ ಅದರಲ್ಲಿ ಹೂಡಿಕೆ ಆಗಿರುವುದು ಕೇವಲ ಶೇಕಡಾ 18ರಷ್ಟು ಮಾತ್ರ.

ಈ ಸಮಾವೇಶಗಳಿಂದ ಭೂಮಿ ಖರೀದಿ ಮಾಡುವುದನ್ನು ಮಾತ್ರ ಕರ್ನಾಟಕ ಸರ್ಕಾರ ಮಾಡುತ್ತದೆ. ಆ ಭೂಮಿಗೆ ಬೆಂಗಳೂರು ಹೊರವಲಯದಲ್ಲಿ 1 ಎಕರೆಗೆ 2 ರಿಂದ 2.5 ಕೋಟಿ ರೂಪಾಯಿಗಳಷ್ಟು ದರ ನಿಗದಿ ಮಾಡಲಾಗುತ್ತದೆ. ಹೆಚ್ಚಿನ ಆದಾಯ ತರುವ ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳಿಗೆ, ಅಷ್ಟು ಹಣವನ್ನು ಭರಿಸಿ ಭೂಮಿಯನ್ನು ಕೊಂಡುಕೊಳ್ಳುವುದು ಹೇಗಾಗುತ್ತದೆ? ಎಂದು ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷ ಜಾಕಬ್ ಕ್ರಾಸ್ಟಾ ಅಭಿಪ್ರಾಯ ಪಟ್ಟಿದ್ದಾರೆ.

"ಭೂಮಿಗೆ ಅಷ್ಟು ಹೂಡಿಕೆ ಮಾಡಿ ಸೂಕ್ಷ್ಮ ಕೈಗಾರಿಕೆಗಳಿಗೆ ಕೈಗಾರಿಕೆ ಬೆಳೆಸಲು ಆಗುತ್ತದೆಯೆ? ಬೃಹತ್ ಕೈಗಾರಿಕೆಗಳಿಗೆ ಅದರಿಂದ ಲಾಭವಾಗುತ್ತದೆ. ಬೃಹತ್ ಕೈಗಾರಿಕೆಗಳಿಗೆ ಭೂಮಿಯನ್ನು ಕೊಡಿ. ಆದರೆ ಅದರ ಪಕ್ಕದಲ್ಲಿ ಶೇ. 30 ರಷ್ಟು ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಿ," ಎಂದು ಕ್ರಾಸ್ಟಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೀಗಾಗಿ ಜಾಗತಿಕ ಹೂಡಿಕೆದಾರರ ಸಮಾವೇಶಗಳಿಂದ ನಿಜವಾದ ಕೈಗಾರಿಕೆಗಳು ಬರಲಿ. ಆದರೆ ಕೇವಲ ರೈತರಿಂದ ಭೂಮಿಯನ್ನು ಕಿತ್ತುಕೊಂಡು ಒಕ್ಕಲೆಬ್ಬಿಸುವುದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಆಗುವುದಿಲ್ಲ ಎಂದು ಸಂದರ್ಶನದಲ್ಲಿ ಭಾಗವಹಿಸಿದ್ದ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...


Read More
Next Story