ಇನ್ವೆಸ್ಟ್ ಕರ್ನಾಟಕ 2025ಕ್ಕೆ ತೆರೆ: 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ನಿರೀಕ್ಷೆ
x
ಇನ್ವೆಸ್ಟ್ ಕರ್ನಾಟಕ 2025 ಸಮಾರೋಪ ಕಾರ್ಯಕ್ರಮ

ಇನ್ವೆಸ್ಟ್ ಕರ್ನಾಟಕ 2025ಕ್ಕೆ ತೆರೆ: 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ನಿರೀಕ್ಷೆ

ಇನ್ವೆಸ್ಟ್​ ಕರ್ನಾಟಕ 2025ಕ್ಕೆ ತೆರೆ ಬಿದ್ದಿದೆ. ಸಮಾವೇಶದಿಂದ 10 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯ ನಿರೀಕ್ಷೆ ಇದ್ದು, 6 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.


ಬೆಂಗಳೂರಿನ ಅರಮನೆ ಮೈದಾನದಲ್ಲಿ 4 ದಿನಗಳ ಕಾಲ ನಡೆದ ಜಾಗತಿಕ ಜಾಗತಿಕ ಹೂಡಿಕೆದಾರರ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶಕ್ಕೆ ತೆರೆ ಬಿದ್ದಿದೆ.

5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣತರು ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಟ್ಟದ ನೀತಿ ನಿರೂಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಜೊತೆಗೆ ಸಮಾವೇಶವು ಬಂಡವಾಳ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ತಾಣ ಎನ್ನುವ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂಬ ಮಾಹಿತಿಯನ್ನು ರಾಜ್ಯ ಬೃಹತ್ ಕೈಗಾರಿಕಾ ಇಲಾಖೆ ಕೊಟ್ಟಿದೆ.

ಈ ಸಂದರ್ಭದಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉದ್ಯಮ ಸಂಸ್ಥೆಗಳಿಗೆ `ವೆಂಚುರೈಸ್ ಚಾಲೆಂಜ್’ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಜೊತೆಗೆ ಇದೇ ಮೊದಲ ಸಲ ಸಾಧಕ ಕಂಪನಿಗಳಿಗೆ `ಇನ್ವೆಸ್ಟ್ ಕರ್ನಾಟಕ’, ಎಸ್ಎಂಇ ಕನೆಕ್ಟ್, ವೆಂಚುರೈಸ್ ಚಾಲೆಂಜ್ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.


ಗ್ರೀಸ್​ನ ಮಾಜಿ ಪ್ರಧಾನಿ ಭಾಗಿ

ಸಮಾವೇಶದಲ್ಲಿ 75 ಗೋಷ್ಠಿಗಳು ನಡೆದವು. ಜತೆಗೆ 19 ದೇಶಗಳ ರಾಯಭಾರಿಗಳು, ಕಾನ್ಸುಲ್ ಜನರಲ್​ಗಳು, ಉದ್ಯಮ ಸಂಘಟನೆಗಳ ಪ್ರತಿನಿಧಿಗಳು, ಜಾಗತಿಕ ಮಟ್ಟದ ಕಂಪನಿಗಳ ಸಿಇಒ ಮತ್ತು ಅಧ್ಯಕ್ಷರ ಜತೆ ರಾಜ್ಯ ಸರ್ಕಾರದ ಪ್ರತಿನಿಧಿಗಳ ಚರ್ಚೆ ನಡೆದಿದೆ. 9 ದೇಶಗಳಿಗೆ ಸಮಾವೇಶದಲ್ಲಿ ಪ್ರತ್ಯೇಕ ಪೆವಿಲಿಯನ್ ನೀಡಲಾಗಿತ್ತು. ಜೊತೆಗೆ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ವಾಗ್ದಾನ ಮಾಡಿಕೊಳ್ಳಲು ಸಮಾವೇಶ ಸವಕಾಶ ಕಲ್ಪಿಸಿತು.

ಸಮಾರೋಪ ಕಾರ್ಯಕ್ರಮದಲ್ಲಿ ಗ್ರೀಸ್​ನ ಮಾಜಿ ಪ್ರಧಾನಿ ಜಾರ್ಜ್ ಪ್ರಪೆರಾಂಡೋ, ಸಂಸದ ಶಶಿ ತರೂರ್ ಭಾಗವಹಿಸಿದ್ದರು.

ಹರಿದು ಬಂದ ಬಂಡವಾಳವೆಷ್ಟು?

ಇನ್ವೆಸ್ಟ್ ಕರ್ನಾಟಕದ ಮೂಲಕ ರಾಜ್ಯಕ್ಕೆ 10,27,378 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿ ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರಕಟಿಸಿದರು. ಸಮಾವೇಶದ ನಂತರ ಮಾಧ್ಯಮಗೋಷ್ಠಿಯಲ್ಲಿ ವಲಯವಾರು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು.

ಹೂಡಿಕೆದಾರರ ಸಮಾವೇಶದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ ಎಂ.ಬಿ. ಪಾಟೀಲ್, `ಇನ್ನೂ ಕೆಲವು ಪ್ರತಿಷ್ಠಿತ ಕಂಪನಿಗಳು ಭಾರೀ ಹೂಡಿಕೆಗೆ ಆಸಕ್ತಿ ತೋರಿಸಿವೆ. ಹೀಗಾಗಿ ಒಡಂಬಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೂಡಿಕೆಯ ಮೊತ್ತ ಇನ್ನೂ ಗಮನಾರ್ಹವಾಗಿ ಹೆಚ್ಚಾಗಲಿದೆ. ಈಗ ಖಾತ್ರಿಯಾಗಿರುವ ಹೂಡಿಕೆಯಲ್ಲಿ ಶೇಕಡ 75ರಷ್ಟು ಬೆಂಗಳೂರಿನ ಆಚೆ ಇರುವ ಪ್ರದೇಶಗಳಿಗೆ ಹೋಗಲಿವೆ. ಅದರಲ್ಲಿಯೂ ಶೇಕಡ 45ರಷ್ಟು ಬಂಡವಾಳವು ಉತ್ತರ ಕರ್ನಾಟಕದ ಪ್ರದೇಶಗಳಿಗೆ ಹರಿಯಲಿದೆ’ ಎಂದರು.


6 ಲಕ್ಷ ಉದ್ಯೋಗಗಳ ಸೃಷ್ಟಿ

ಈ ಹೂಡಿಕೆಯಿಂದ ಕೈಗಾರಿಕೆಗಳಿಂದ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಪ್ರಮುಖವಾಗಿ ತಯಾರಿಕೆ ಹಾಗೂ ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಸೇರಿವೆ. ಜಿಂದಾಲ್ ಸಮೂಹವು ಇಂಧನ, ಸಿಮೆಂಟ್, ಉಕ್ಕು ಮತ್ತು ಪೂರಕ ಉದ್ಯಮಗಳಲ್ಲಿ 1.2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಬಲ್ದೋಟಾ ಸಮೂಹವು ಕೊಪ್ಪಳದಲ್ಲಿ 54 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ. ಲ್ಯಾಮ್ ರೀಸರ್ಚ್ ಕಂಪನಿಯು ತಯಾರಿಕೆ ಮತ್ತು ಸಂಶೋಧನೆಗೆ 10 ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಬಂಡವಾಳ ತೊಡಗಿಸುತ್ತಿದೆ.

ಸ್ನೀಡರ್ ಎಲೆಕ್ಟ್ರಿಕ್ ಸಂಸ್ಥೆಯು ವಿದ್ಯುತ್ ಸಾಧನಗಳ ತಯಾರಿಕೆ ಮತ್ತು ಸಂಶೋಧನೆಗೆ 2,247 ಕೋಟಿ ರೂ, ವೋಲ್ವೊ ಕಂಪನಿಯು ವಿದ್ಯುಚ್ಚಾಲಿತ ಬಸ್/ಟ್ರಕ್ ತಯಾರಿಕೆಗೆ 1,400 ಕೋಟಿ ರೂ, ಹೋಂಡಾ ಕಂಪನಿಯು ಇ.ವಿ. ವಾಹನಗಳ ತಯಾರಿಕೆಗೆ 600 ಕೋಟಿ ರೂ. ಮತ್ತು ಸ್ಯಾಫ್ರಾನ್ ಕಂಪನಿಯು ಏವಿಯಾನಿಕ್ಸ್ ಉತ್ಪಾದನೆಗೆ 225 ಕೋಟಿ ರೂ. ಹೂಡುತ್ತಿವೆ. 2025-30ರವರೆಗಿನ ನೂತನ ಕೈಗಾರಿಕಾ ನೀತಿಯಡಿ ಒಟ್ಟಾರೆಯಾಗಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸ್ಟಾರ್ಟ್​ಅಪ್ ಪಾರ್ಕ್​

ಹೊಸ ನೀತಿಯಡಿ ತುಮಕೂರು ಮತ್ತು ವಿಜಯಪುರದಲ್ಲಿ ಕೈಗಾರಿಕಾ ಪಾರ್ಕ್, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಪಾರ್ಕ್, ಉಳಿದ ಭಾಗಗಳಲ್ಲಿ ಡೀಪ್-ಟೆಕ್ ಪಾರ್ಕ್ ಮತ್ತು ಸ್ವಿಫ್ಟ್ ಸಿಟಿ ಮುಂತಾದವು ಅಸ್ತಿತ್ವಕ್ಕೆ ಬರಲಿವೆ. ಡೀಪ್ ಟೆಕ್ ಮತ್ತು ಸ್ವಿಫ್ಟ್ ಸಿಟಿ ಯೋಜನೆಗಳು ತಲಾ 1 ಲಕ್ಷ ಕೋಟಿ ರೂ. ಹೂಡಿಕೆ ಸೆಳೆಯುವ ಮತ್ತು ತಲಾ 1 ಲಕ್ಷ ಉದ್ಯೋಗ ಸೃಷ್ಟಿಸುವಂತಹ ಧಾರಣಾಶಕ್ತಿ ಹೊಂದಿವೆ. ಕ್ವಿನ್ ಸಿಟಿ ಅಭಿವೃದ್ಧಿಗೆ ಸಂಬಂಧಿಸಿದಂತೆ 10 ವಿ.ವಿ.ಗಳೊಂದಿಗೆ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ.


ಕ್ವಿನ್ ಸಿಟಿ: 10 ಒಪ್ಪಂದಕ್ಕೆ ಸಹಿ

ಮಹತ್ವಾಕಾಂಕ್ಷೆಯ ಕ್ವಿನ್ ಸಿಟಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೈಗಾರಿಕಾ ಇಲಾಖೆ ಮಾಹಿತಿ ಕೊಟ್ಟಿದೆ. ಒಟ್ಟು 10 ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದರಲ್ಲಿ ಅಮೆರಿಕಾದ ನ್ಯೂಯಾರ್ಕ್ ನ ಸೇಂಟ್ ಜಾನ್ಸ್ ಯೂನಿವರ್ಸಿಟಿ ಹಾಗೂ ಯೂನಿವರ್ಸಿಟಿ ಆಫ್ ಲಿವರ್ ಪೂಲ್ ಜತೆಗೂ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ 42 ಸಾವಿರ ಕೋಟಿ ಹೂಡಿಕೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೂ ಕೆಲವು ಒಪ್ಪಂದ ಆಗುವುದರಲ್ಲಿ ಇದ್ದು, ಉತ್ತರ ಕರ್ನಾಟಕಕ್ಕೆ ಒಳ್ಳೆಯ ಅವಕಾಶಗಳು ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆಯಿದೆ.

ಬಿಯಾಂಡ್ ಬೆಂಗಳೂರು

ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.10 ಲಕ್ಷ ನೋಂದಾಯಿತ ವಾಹನಗಳಿವೆ. ಇದು ನಗರದ ಜನಜೀವನದ ಮೇಲೆ ವಿಪರೀತ ಒತ್ತಡ ಸೃಷ್ಟಿಸಿದೆ. ಆದ್ದರಿಂದ ಕೈಗಾರಿಕೆಗಳು ಬೆಂಗಳೂರಿನಿಂದ ಹೊರಗಿರುವ ಪ್ರದೇಶಗಳಿಗೆ ಹೋಗುವುದನ್ನು ಉತ್ತೇಜಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಪ್ರೋತ್ಸಾಹವನ್ನೇ ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೂ ಹೊಸ ನೀತಿ ತರಲಾಗಿದೆ. ವಿಶೇಷವಾಗಿ ರಾಜ್ಯದ 300 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಗಮನ ಹರಿಸಲಿದ್ದೇವೆ. ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೆರವಿಗೆ ಪೋರ್ಟಲ್ ಆರಂಭಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಭೂಮಿಯ ಬೆಲೆ ಜಾಸ್ತಿ ಇದೆ. ಹೀಗಾಗಿ ಉದ್ಯಮಿಗಳಿಗೆ ನೆರವು ನೀಡುವ ಬೇರೆಬೇರೆ ಕ್ರಮಗಳತ್ತ ಚಿಂತಿಸಲಾಗುತ್ತಿದೆ. ನಾವು ಹೂಡಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆಯೇ ವಿನಾ ನೆರೆಹೊರೆಯ ರಾಜ್ಯಗಳ ಜತೆಯಲ್ಲ. ಭೂಮಿಯ ಬೆಲೆ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ ಎಂದರು.

Read More
Next Story