ಧರ್ಮಸ್ಥಳ ಪ್ರಕರಣ | ಶೋಧ ಕಾರ್ಯಕ್ಕೆ ಬ್ರೇಕ್, V ವಿಚಾರಣೆ ತೀವ್ರ; ತನಿಖೆ ಚುರುಕುಗೊಳಿಸಿದ ಎಸ್ಐಟಿ
x

ಸಾಕ್ಷಿದಾರ

ಧರ್ಮಸ್ಥಳ ಪ್ರಕರಣ | ಶೋಧ ಕಾರ್ಯಕ್ಕೆ ಬ್ರೇಕ್, 'V' ವಿಚಾರಣೆ ತೀವ್ರ; ತನಿಖೆ ಚುರುಕುಗೊಳಿಸಿದ ಎಸ್ಐಟಿ

ವಿಶೇಷ ತನಿಖಾ ತಂಡದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಮೂರು ದಿನಗಳಿಂದ ಅನಾಮಿಕನ ಸತತ ವಿಚಾರಣೆ ನಡೆಯುತ್ತಿದೆ.


ಧರ್ಮಸ್ಥಳ ಪ್ರಕರಣದ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ದೂರು ಸಾಕ್ಷಿದಾರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೇಬರ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಎಸ್ಐಟಿ, ಶವಗಳನ್ನು ಹೂತು ಹಾಕಿರುವ ಕುರಿತಂತೆ ನೀಡಿರುವ ಹೇಳಿಕೆ ಆಧಾರದ ಮೇಲೆ ಸಾಕ್ಷಿದಾರ (ಆತನ ಸುರಕ್ಷತೆಗಾಗಿ ಆತನನ್ನು V ಎಂದು ನ್ಯಾಯಾಲಯ ಹೆಸರಿಸಿದೆ)ನನ್ನು‌ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ವಿಶೇಷ ತನಿಖಾ ತಂಡದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಮೂರು ದಿನಗಳಿಂದ ಸತತ ವಿಚಾರಣೆ ನಡೆಯುತ್ತಿದೆ. V ಹೇಳಿಕೆಯನ್ನು ಸಂಪೂರ್ಣ ವಿಡಿಯೋ ದಾಖಲು ಮಾಡಲಾಗುತ್ತಿದೆ. ಅಲ್ಲದೇ ಧರ್ಮಸ್ಥಳದಲ್ಲಿ ಈ ಹಿಂದೆ ಸಾಕ್ಷಿ ದೂರುದಾರನೊಂದಿಗೆ ಸಂಪರ್ಕದಲ್ಲಿದ್ದವರ ಮಾಹಿತಿ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಸಹಜ ಸಾವುಗಳ ಕುರಿತು ಕೆಲವು ದೂರುದಾರರನ್ನೂ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ 1995 ರಿಂದ 2014ರವರೆಗೆ ಕೆಲಸ ಮಾಡಿದ್ದ ಸಿಬ್ಬಂದಿಯನ್ನು ಕೂಡಾ ವಿಚಾರಣೆ‌ ನಡೆಸಲಾಗುತ್ತಿದೆ.

ಧರ್ಮಸ್ಥಳ ಪ್ರಕರಣ ಸಂಬಂಧ ಸದನಕ್ಕೆ ಗೃಹ ಸಚಿವರು ಉತ್ತರ ನೀಡಬೇಕಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಗೃಹ ಸಚಿವರಿಗೆ ಮಾಹಿತಿ ನೀಡಿದ್ದ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ವಾಪಸ್ ಬೆಳ್ತಂಗಡಿಗೆ ಮರಳಿದ್ದು, ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಶೋಧ ಕಾರ್ಯಕ್ಕೆ ಅನಾಮಿಕ ಒತ್ತಡ

17 ಸ್ಥಳಗಳ ಪೈಕಿ ಎರಡು ಪಾಯಿಂಟ್ ಹೊರತುಪಡಿಸಿ ಬೇರಾವ ಸ್ಥಳದಲ್ಲಿಯೂ ಕುರುಹು ಸಿಗದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಈ ಮಧ್ಯೆ, ಸಾಕ್ಷಿ ದೂರುದಾರ ಇನ್ನಷ್ಟು ಹೊಸ ಜಾಗಗಳ ಕುರಿತು ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಉತ್ಖನನಕ್ಕೆ ಒತ್ತಡ ಹೇರುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಹಲವು ಸ್ಥಳಗಳಲ್ಲಿ ಯಾವುದೇ ಕುರುಹು ಸಿಗದ ಕಾರಣ ಶೋಧಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೂ ಅನಾಮಿಕ ತೀವ್ರ ಒತ್ತಡ ಹಾಕುತ್ತಿರುವುದರಿಂದ ಪಂಚಾಯತಿಯಲ್ಲಿ 1995 ರಿಂದ 2015ರ ವರೆಗೆ ಹೂಳಲಾಗಿರುವ ಶವಗಳ ಮಾಹಿತಿ ಪಡೆಯುತ್ತಿದ್ದಾರೆ. ಒಂದು ವೇಳೆ ಅನಾಮಿಕ ಹೇಳಿದ ಹೊಸ ಜಾಗಗಳು ಪಂಚಾಯ್ತಿ ನೀಡಿರುವ ವಿವರದಲ್ಲಿದ್ದರೆ ಮತ್ತೆ ಉತ್ಖನನ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಆನೆ ಮಾವುತ-ಯಮುನಾ ಕೊಲೆಗೆ ತಿರುವು

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ SIT ಅಧಿಕಾರಿಗಳಿಗೆ ಆನೆ ಮಾವುತ ನಾರಾಯಣ ಸಫಲ್ಯ ಹಾಗೂ ಆತನ ಸಹೋದರಿ ಯಮುನಾ ಕೊಲೆ ಪ್ರಕರಣ ತನಿಖೆಗೆ ಒತ್ತಾಯಿಸಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಜೋಡಿ ಕೊಲೆಗೆ ಸಾಕಷ್ಟು ಪುರಾವೆಗಳಿದ್ದು, ಸೌಜನ್ಯ ಪ್ರಕರಣದಂತೆಯೇ ಇದು ತೀರಾ ಇತ್ತೀಚಿನದ್ದಾಗಿದೆ. ಆನೆ ಮಾವುತ ವಾಸವಿದ್ದ ಜಾಗವನ್ನು ಕಳೆದ 13 ವರ್ಷಗಳ ಹಿಂದೆಯೇ ದಾಖಲೆ ಬದಲಾಯಿಸಿ, ಹೊಸ ಕಟ್ಟಡ ನಿರ್ಮಿಸಲಾಗಿದೆ. ಆಸ್ತಿಗಾಗಿ ನಮ್ಮ ತಂದೆ ಹಾಗೂ ಅತ್ತೆಯವರನ್ನು ಕೊಲೆ ಮಾಡಲಾಗಿದೆ ಎಂದು ನಾರಾಯಣ ಅವರ ಪುತ್ರ ಗಣೇಶ್ ಎಸ್ಐಟಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಮೃತ ಆನೆ ಮಾವುತನ ಮಕ್ಕಳು ನೀಡಿರುವ ದೂರಿಗೆ ಬಲವಾದ ಸಾಕ್ಷ್ಯಗಳಿವೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಜೋಡಿ ಕೊಲೆಯನ್ನು 'ಪತ್ತೆಯಾಗದ ಪ್ರಕರಣ' ಎಂದು ಪೊಲೀಸರು ಷರಾ ಬರೆದಿದ್ದರು. ಈಗ ಮರು ತನಿಖೆಗೆ ಆಗ್ರಹಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಅದೇ ರೀತಿ 70ರ ದಶಕದಲ್ಲಿ ಕೊಲೆಯಾದ ಪದ್ಮಲತಾ ಪ್ರಕರಣದ ತನಿಖೆಗೂ ಒತ್ತಾಯಿಸಿ ದೂರೊಂದು ದಾಖಲಾಗಿದೆ.

ತಿಮರೋಡಿ ವಿರುದ್ಧ ಬ್ರಹ್ಮಾವರದಲ್ಲಿ ದೂರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಧರ್ಮಸ್ಥಳ ಪ್ರಕರಣ ಕುರಿತು ಮಾತನಾಡುವಾಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೀವ ಕುಲಾಲ್ ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆಯಲ್ಲಿ ಶರತ್ ಶೆಟ್ಟಿ ಎಂಬುವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ರಿ-ಪೋಸ್ಟ್ ಮಾಡಿರುವ ಆರೋಪದಲ್ಲಿ ದೂರು ದಾಖಲಾಗಿದೆ. ವಸಂತ ಗಿಳಿಯಾರ್ ಎಂಬುವರ ಪೋಸ್ಟ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ಪೋಸ್ಟ್ ರಿ-ಪೋಸ್ಟ್ ಮಾಡಿರುವ ಪ್ರಕರಣ ಇದಾಗಿದೆ.

Read More
Next Story