Congress Infighting | ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟು ಏಕಾಂಗಿಯಾದರೆ ಡಿಕೆಶಿ?
x
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

Congress Infighting | ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟು ಏಕಾಂಗಿಯಾದರೆ ಡಿಕೆಶಿ?

Congress Infighting | ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸಿಎಂ, ಆಯ್ದ ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಏರ್ಪಡಿಸಿದ ನಂತರ ಬೆಳವಣಿಗೆಗಳಿಂದಾಗಿ ಡಿ.ಕೆ.ಶಿವಕುಮಾರ್‌ ಏಕಾಂಗಿಯಂತಾಗಿದ್ದಾರೆ.


ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ʼಅಧಿಕಾರ ಹಂಚಿಕೆʼಯ ದಾಳ ಉರುಳಿಸಿದ ಬಳಿಕ ಪಕ್ಷದಲ್ಲಿ ಬಣ ರಾಜಕಾರಣ ಜೋರಾಗಿದೆ.

ಸಿಎಂ ಸ್ಥಾನಕ್ಕಾಗಿ ಹೈಕಮಾಂಡ್‌ ಮಟ್ಟದಲ್ಲಿ ಲಾಬಿಗೆ ಇಳಿದಿರುವ ಡಿ.ಕೆ.ಶಿವಕುಮಾರ್‌ ನಡೆಗೆ ರಾಜ್ಯ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಡಿ.ಕೆ. ಶಿವಕುಮಾರ್‌ ಅವರಿಗೆ ಯಾವುದೇ ಕಾರಣಕ್ಕೂ ಸಿಎಂ ಕುರ್ಚಿ ಬಿಟ್ಟುಕೊಡದಂತೆ ಶಾಸಕರು, ಸಚಿವರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಡಿ.ಕೆ. ಶಿವಕುಮಾರ್‌ ಅವರು ಅಕ್ಷರಶಃ ಏಕಾಂಗಿಯಂತಾಗಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಹತಾಶರಾಗಿ ಮಾತನಾಡಿರುವ ಶಿವಕುಮಾರ್‌ ಅವರು, ನನಗೆ ಯಾವ ಶಾಸಕರ ಬೆಂಬಲವೂ ಬೇಡ. ನಾನುಂಟು, ಕಾಂಗ್ರೆಸ್‌ ಪಕ್ಷವುಂಟು ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ.

ತಮಿಳುನಾಡಿನ ಕುಂಭಕೋಣಂನಲ್ಲಿರುವ ಅಯ್ಯವಾಡಿ ಪ್ರತ್ಯಂಗಿರಾ ದೇವಿಯ ಮೊರೆ ಹೋಗಿ ಹೋಮ ನಡೆಸಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾದರೆ ಅಹಿಂದ ಸಮುದಾಯದ ನಾಯಕರಿಗೆ ಉಳಿಗಾಲ ಇರುವುದಿಲ್ಲ ಎಂಬ ಆತಂಕದಿಂದ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿದ್ದು, ಔತಣಕೂಟ ಸಭೆಗಳನ್ನು ಆಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಧಿಕಾರ ಹಂಚಿಕೆ ಕುರಿತ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ ಪರಮೇಶ್ವರ್, ಕೆ.ಎನ್.ರಾಜಣ್ಣ ಹಾಗೂ ಇತರೆ ಸಚಿವರು ಬಹಿರಂಗವಾಗಿ ತಿರುಗೇಟು ನೀಡುತ್ತಿರುವುದು ಕುತೂಹಲ ಮೂಡಿಸಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಔತಣಕೂಟಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಈ ಔತಣಕೂಟ ನಡೆಸದಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೂಚಿಸಿದ್ದರು. ಹೀಗಾಗಿ ಔತಣಕೂಟ ರದ್ದಾಗಿತ್ತು. ಔತಣಕೂಟ ನಡೆಸುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ಅವರೇ ಹೈಕಮಾಂಡ್ ಮೂಲಕ ತಡೆದಿದ್ದಾರೆ ಎಂದು ಡಾ.ಜಿ. ಪರಮೇಶ್ವರ್‌, ಕೆ.ಎನ್‌. ರಾಜಣ್ಣ ಅವರು ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಹೊಸ ವರ್ಷದ ನೆಪದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಆಯ್ದ ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿಯೇ ನಡೆದಿದ್ದ ಈ ಔತಣಕೂಟ ತೀವ್ರ ಕುತೂಹಲ ಕೆರಳಿಸಿತ್ತು. ಸಿಎಂ ಸಿದ್ದರಾಮಯ್ಯ ಕೂಡ ಔತಣಕೂಟದಲ್ಲಿ ಭಾಗವಹಿಸಿದ್ದರು.

ಆಂತರಿಕ ಕಚ್ಚಾಟಕ್ಕೆ ಕಾರಣವೇನು?

ʼಅಧಿಕಾರ ಸುಮ್ಮನೆ ಸಿಗುವುದಿಲ್ಲ, ಅದನ್ನು ದಕ್ಕಿಸಿಕೊಳ್ಳಬೇಕು. ಇಲ್ಲವಾದರೆ ಒದ್ದು ಕಿತ್ತುಕೊಳ್ಳಬೇಕುʼ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಯೇ ಆಂತರಿಕ ಕಚ್ಚಾಟಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡುವ ವೇಳೆ ಡಿ.ಕೆ. ಶಿವಕುಮಾರ್‌ ಈ ಮೇಲಿನಂತೆ ಹೇಳಿದ್ದರು. ಇದು ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಹೇಳಿದ ಮಾತು ಎಂದು ಪ್ರತಿಪಕ್ಷಗಳ ನಾಯಕರು ವ್ಯಂಗ್ಯವಾಡಿದ್ದರು. ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೂ ಮುಂಚೆ ಬೆಂಗಳೂರಿನಲ್ಲಿ ಅಧಿಕಾರ ಹಂಚಿಕೆಯ ಕುರಿತು ಮಾಧ್ಯಮಗಳ ಮುಂದೆ ಡಿ.ಕೆ. ಶಿವಕುಮಾರ್‌ ಹೇಳಿಕೆ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಡಾ.ಜಿ.ಪರಮೇಶ್ವರ್‌ ಅವರು, ಅಧಿಕಾರ ಹಂಚಿಕೆ ಬಗ್ಗೆ ಸಿಎಂ, ಡಿಸಿಎಂ ಇಬ್ಬರೇ ಮಾತನಾಡಿಕೊಂಡರೆ ನಾವೆಲ್ಲ ಇರುವುದು ಏನಕ್ಕೆ ಎಂದು ಟಾಂಗ್‌ ಕೊಟ್ಟಿದ್ದರು. ಸತೀಶ್‌ ಜಾರಕಿಹೊಳಿ ಕೂಡ ಹೆಚ್ಚು ಸಕ್ರಿಯರಾಗಿ ಆಪ್ತರೊಂದಿಗೆ ಮಾತುಕತೆ ಆರಂಭಿಸಿದ್ದರು.

ವೈರಾಗ್ಯ ಮೂಡಿಸಿದ ಬೆಳವಣಿಗೆ

ಔತಣಕೂಟದ ಮೂಲಕ ಶಕ್ತಿ ಪ್ರದರ್ಶನ, ಸಚಿವರ ಬಹಿರಂಗ ಟೀಕೆಗಳಿಂದ ಏಕಾಂಗಿಯಂತಾಗಿರುವ ಡಿ.ಕೆ.ಶಿವಕುಮಾರ್ ಅವರು ಅಧಿಕಾರದ ಬಗ್ಗೆ ವೈರಾಗ್ಯದ ಮಾತುಗಳನ್ನಾಡಿರುವುದು ಕಳವಳ ಮೂಡಿಸಿದೆ.

ʼಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನʼ( ನಿನ್ನ ಹಕ್ಕಿರುವುದು ನಿನ್ನ ಕರ್ಮದ ಮೇಲೆಯೇ ಹೊರತು ಅದರ ಫಲಗಳಲ್ಲಿ ಅಲ್ಲ. ಫಲದ ನಿರೀಕ್ಷೆಯಲ್ಲಿ ನೀನು ಕರ್ಮದಲ್ಲಿ ತೊಡಗಬೇಡ) ಎಂಬ ಶ್ಲೋಕ ಉಲ್ಲೇಖಿಸಿ, ನಾನು ಪಕ್ಷದ ನಾಯಕರು ಹೇಳಿದಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ನಾನುಂಟು, ಕಾಂಗ್ರೆಸ್‌ ಪಕ್ಷವುಂಟು, ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ, ನನಗೆ ಯಾವ ಶಾಸಕರ ಬೆಂಬಲವೂ ಬೇಡ ಎಂದು ಹೇಳಿದ್ದರು.

ಹಿರಿಯ ನಾಯಕರ ಬೇಸರ

ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಪಕ್ಷ ಸಂಘಟನೆಗೆ ಹಾನಿಯಾಗಲಿದೆ ಎಂದು ಪಕ್ಷದ ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ನಾಯಕರ ಬಹಿರಂಗ ಹೇಳಿಕೆಗಳಿಂದ ಪ್ರತಿಪಕ್ಷಗಳ ಟೀಕೆಗೆ ನಾವೇ ಅಸ್ತ್ರ ಕೊಟ್ಟಂತೆ ಆಗುತ್ತಿದೆ. ಹೈಕಮಾಂಡ್ ಇದಕ್ಕೆ ಕಡಿವಾಣ ಹಾಕದೇ ಹೋದರೆ ಸರ್ಕಾರದ ವರ್ಚಸ್ಸಿಗೆ ಹಾನಿ ಆಗಲಿದೆ ಎಂದು ಈಚೆಗೆ ಡಿಸಿಎಂ ಜೊತೆ ನಡೆದ ಸಭೆಯಲ್ಲಿ ಕೆಲ ಹಿರಿಯ ನಾಯಕರು ಬೇಸರ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ನಾಯಕರು ಜ.16ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಾಯಕರ ಬಹಿರಂಗ ಟೀಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಸಭೆಯಲ್ಲಿ ಚರ್ಚೆ ಸಾಧ್ಯತೆ

ಜ.12(ಭಾನುವಾರ) ರಂದು ಭಾನುವಾರ ಸಂಜೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಸಭೆಯಲ್ಲಿ ಭಿನ್ನಮತದ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಣದೀಪ್ ಸಿಂಗ್ ಸುರ್ಜೆವಾಲ ಅವರು ಶನಿವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಶಾಸಕಾಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್‌ ನಿಧನ ಹಿನ್ನೆಲೆಯಲ್ಲಿ ರದ್ದಾಗಿದ್ದ ಗಾಂಧಿ ಭಾರತ ಕಾರ್ಯಕ್ರಮವನ್ನು ಜ.21 ರಂದು ನಡೆಸಲಿದ್ದು, ಸಿದ್ಧತೆಗಳ ಕುರಿತು ಚರ್ಚೆ ನಡೆಯಲಿದೆ.ಡಿಸಿಎಂ ಗೈರುಹಾಜರಿಯಲ್ಲಿ ಕೆಲ ಸಚಿವರು ಹಾಗೂ ಶಾಸಕರು ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಔತಣಕೂಟ, ಸಿ.ಟಿ. ರವಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್‌ ಪ್ರಕರಣ ನಿರ್ವಹಿಸಿದ ರೀತಿಯ ಬಗ್ಗೆಯೂ ಪ್ರಸ್ತಾಪವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಸ್ಥಾನ ತ್ಯಜಿಸಬಾರದು. ಒಂದು ವೇಳೆ ಒಪ್ಪಂದದ ಹೆಸರಿನಲ್ಲಿ ಸಿಎಂ ಸ್ಥಾನ ತ್ಯಜಿಸಿದರೆ, ಶಾಸಕಾಂಗ ಸಭೆಯಲ್ಲೇ ನೂತನ ಸಿಎಂ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಸಿಎಂ ಆಪ್ತರು ಒತ್ತಾಯಿಸಿದ್ದರು ಎಂಬುದು ತಿಳಿದುಬಂದಿದೆ.

ಕುತೂಹಲ ಮೂಡಿಸಿದ್ದ ಗುರೂಜಿ ಹೇಳಿಕೆ

ಡಿ.ಕೆ. ಶಿವಕುಮಾರ್‌ ಅವರ ಸಿಎಂ ಆಗುವುದು ನಿಶ್ಚಿತ ಎಂಬ ಗೌರಿಗದ್ದೆಯ ವಿನಯ್ ಗುರೂಜಿ ಹೇಳಿಕೆ ಕೂಡ ಚರ್ಚೆಗೆ ಕಾರಣವಾಗಿತ್ತು. ಗುರೂಜಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್‌ ಅವರು, ಸ್ವಾಮೀಜಿಗಳು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿದ್ದರು.

ನನಗೆ ಗುರೂಜಿಯ ಮೇಲೆ ವಿಶೇಷ ನಂಬಿಕೆ, ಭಕ್ತಿ ಇದೆ. ಗೌರಿಗದ್ದೆ ಮಠವು ಬೆಂಗಳೂರಿನಲ್ಲಿ ಮಕ್ಕಳಿಗೆ ಜ್ಞಾನದ ದೀಪ ಬೆಳಗುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದು ಬೇಡ ಎಂದು ಹೇಳಿದ್ದರು.

Read More
Next Story