Day and night sit-in demanding implementation of internal reservation
x

ಸಾಂದರ್ಭಿಕ ಚಿತ್ರ

Internal Reservation | ಒಳ ಮೀಸಲಾತಿ ಜಾರಿಗೆ ಪ್ರವರ್ಗ ಸೃಷ್ಟಿಯೇ ಕಗ್ಗಂಟು; ಮೀಸಲು ದುರುಪಯೋಗವೆಂದು ಎಡಗೈ ಹೋರಾಟ

ಸರ್ಕಾರವು ಸುಪ್ರೀಂಕೋರ್ಟ್ ಆಶಯದಂತೆ ಮೀಸಲಾತಿ ಒದಗಿಸುವಲ್ಲಿ ವಿಫಲವಾಗಿದೆ. ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಸಮುದಾಯ ಉಪಜಾತಿಗಳನ್ನು ನಮೂದಿಸದ ಕಾರಣ ಎಡಗೈ ಹಾಗೂ ಬಲಗೈ ಇಬ್ಬರಿಗೂ ಮೀಸಲಾತಿಯಲ್ಲಿ ಅನ್ಯಾಯವಾಗಿದೆ.


ಮೂರುವರೆ ದಶಕದಿಂದ ಪರಿಶಿಷ್ಟ ಜಾತಿಗಳು ನಡೆಸಿದ ಹೋರಾಟದ ಫಲವಾಗಿ ಕೊನೆಗೂ ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಆದರೆ, ಈ ಹಿಂದಿನಿಂದಲೂ ಮೀಸಲಾತಿ ಜಾರಿಗೆ ತೊಡಕಾಗಿದ್ದ ಉಪಜಾತಿಗಳ ಸಮಸ್ಯೆ ಇತ್ಯರ್ಥ ಆಗದಿರುವುದು ಬಲಗೈ ಹಾಗೂ ಎಡಗೈ ಸಮುದಾಯಗಳ ಮಧ್ಯೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ.
ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿ ಸೂಚಕಗಳ ಬಿಕ್ಕಟ್ಟು ಬಗೆಹರಿಸಲು ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿದರೂ ಪರಿಹಾರ ಸಾಧ್ಯವಾಗಿಲ್ಲ.
2011ರ ಜಾತಿಗಣತಿಯಲ್ಲಿ 7.29 ಲಕ್ಷ ಜನರು ಉಪಜಾತಿಗಳನ್ನು ಉಲ್ಲೇಖಿಸದ ಪರಿಣಾಮ ಒಳ ಮೀಸಲಾತಿ ಕಗ್ಗಂಟಾಗಿತ್ತು. ಸದಾಶಿವ ಆಯೋಗದ ವರದಿಯಲ್ಲೂ ಎಕೆ, ಎಡಿ ಹಾಗೂ ಎಎ ಸಮಸ್ಯೆ ಮುಂದುವರಿದಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ನ್ಯಾ. ನಾಗಮೋಹನ್ ದಾಸ್ ಆಯೋಗ ಸಮೀಕ್ಷೆ ನಡೆಸಿದ ಹೊರತಾಗಿಯೂ ಸುಮಾರು 4.5 ಜನಸಂಖ್ಯೆಯು ಉಪಜಾತಿಗಳು ನಮೂದಿಸಿರಲಿಲ್ಲ.
ಉಪಜಾತಿ ತಿಳಿಸದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿಗಳಿಗಾಗಿ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶೇ 1 ರಷ್ಟು ಮೀಸಲಾತಿ ಕಲ್ಪಿಸಿತ್ತು. ವಿಪರ್ಯಾಸವೆಂದರೆ ರಾಜ್ಯ ಸರ್ಕಾರ ಈ ವರದಿಯ ಶಿಫಾರಸನ್ನು ಕಡೆಗಣಿಸುವ ಮೂಲಕ ಒಳ‌ಮೀಸಲಾತಿ ಆಶಯವನ್ನೇ ಪೆಟ್ಟು ನೀಡಿತು ಎಂಬ ಆರೋಪಗಳು ಕೇಳಿ ಬರುತ್ತಿವೆ.

ಒಳ ಮೀಸಲಾತಿ ವರದಿಗೆ ಆಕ್ಷೇಪವೇನು?

ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿಗಳು ಪ್ರಾದೇಶಿಕವಾಗಿ ಭಿನ್ನವಾಗಿವೆ. ಒಂದು ಭಾಗದಲ್ಲಿ ಹೊಲೆಯ ಸಮುದಾಯ ಆದಿ ಕರ್ನಾಟಕದಲ್ಲಿ ಮೀಸಲಾತಿ ಸೌಲಭ್ಯ ಪಡೆದರೆ, ಮತ್ತೊಂದು ಭಾಗದಲ್ಲಿ ಆದಿ ದ್ರಾವಿಡ ಹೆಸರಿನಲ್ಲಿ ಪಡೆಯುತ್ತಿದೆ.

ರಾಜ್ಯ ಸರ್ಕಾರ ಇದೀಗ ಜಾತಿ ಪ್ರಮಾಣ ಪತ್ರದಲ್ಲಿಯೂ ಇದೇ ರೀತಿ ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಟ್ಟಿರುವುದು ಎಡಗೈ ಸಮುದಾಯದ ಆಕ್ಷೇಪಕ್ಕೆ ಕಾರಣವಾಗಿದೆ.

ಆದಿ ದ್ರಾವಿಡ ಜಾತಿ ಪ್ರವರ್ಗ 'ಎ' ಅಡಿ, ಆದಿ ಕರ್ನಾಟಕ ಜಾತಿ ಪ್ರವರ್ಗ 'ಬಿ' ಅಡಿ ಪ್ರಮಾಣಪತ್ರ ಪಡೆಯಲಿವೆ. ಇನ್ನೂ ಕೆಲ ಭಾಗಗಳಲ್ಲಿ ಆದಿ ದ್ರಾವಿಡ ಸಮುದಾಯ ಪ್ರವರ್ಗ ಬಿ ನಲ್ಲಿ, ಆದಿ ಕರ್ನಾಟಕ ಸಮುದಾಯ ಪ್ರವರ್ಗ ಎ ನಲ್ಲಿ ಮೀಸಲಾತಿ ಪಡೆಯುತ್ತಿವೆ. ಇದರಿಂದ ಒಳ ಮೀಸಲಾತಿ ಸಂಪೂರ್ಣ ದುರುಪಯೋಗ ಆಗುತ್ತಿದೆ. ಸರ್ಕಾರ ಈ ಗೊಂದಲವನ್ನು ತಕ್ಷಣವೇ ಬಗೆಹರಿಸಬೇಕು. ಇಲ್ಲದಿದ್ದರೆ, ಸಚಿವ ಎಚ್.ಸಿ. ಮಹದೇವಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‌ ಎಂದು "ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮಿತಿ ಆಗ್ರಹಿಸಿದೆ.

ಸರ್ಕಾರವು ಸುಪ್ರೀಂಕೋರ್ಟ್ ಆಶಯದಂತೆ ಮೀಸಲಾತಿ ಒದಗಿಸುವಲ್ಲಿ ವಿಫಲವಾಗಿದೆ. ಆದಿ ದ್ರಾವಿಡ ಹಾಗೂ ಆದಿ ಕರ್ನಾಟಕ ಸಮುದಾಯ ಉಪಜಾತಿಗಳನ್ನು ನಮೂದಿಸದ ಕಾರಣ ಎಡಗೈ ಹಾಗೂ ಬಲಗೈ ಇಬ್ಬರಿಗೂ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಉಪಜಾತಿಗಳ ವಿವರ ಸಿಗದಿರುವ ಕಾರಣ ಮೊದಲು ಆಯಾ ಜಾತಿಗಳಿಗೆ ಅವರು ಇಚ್ಛಿಸಿದ ಉಪಜಾತಿಗಳಲ್ಲೇ ಪ್ರಮಾಣ ಪತ್ರ ನೀಡು, ಆನಂತರ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದೆ.

ಮಾದಿಗ ಸಮುದಾಯವು ಮೂರೂವರೆ ದಶಕದಿಂದ ಒಳ ಮೀಸಲಾತಿಗಾಗಿ ಹೋರಾಡುತ್ತಿದೆ. ನ್ಯಾ. ನಾಗಮೋಹನ್‌ದಾಸ್ ಆಯೋಗದ ವರದಿ ಜಾರಿ ಮಾಡದೇ ಸರ್ಕಾರ ಅಲೆಮಾರಿಗಳಿಗೂ ಅನ್ಯಾಯ ಮಾಡಿದೆ. ಇದರ ಜತೆಗೆ ಮಾದಿಗ ಸಮುದಾಯಕ್ಕೂ‌ ಅನ್ಯಾಯವೆಸಗಿದೆ ಎಂದು ದೂರಿದೆ.

"ಕೆಲವೆಡೆ ಆದಿ ದ್ರಾವಿಡ ಸಮುದಾಯ ಪ್ರವರ್ಗ 'ಎ' ನಲ್ಲಿ ಇದ್ದರೆ, ಮತ್ತೆ ಕೆಲವೆಡೆ ಆದಿ ಕರ್ನಾಟಕ ಸಮುದಾಯ ಪ್ರವರ್ಗ 'ಬಿ' ಎಂದು ಪ್ರಮಾಣಪತ್ರ ಪಡೆದು ಮೀಸಲಾತಿ ಪಡೆಯುತ್ತಿವೆ. ಯಾವ ಪ್ರವರ್ಗದಲ್ಲಿ ಯಾರು ಎಷ್ಟು ಮೀಸಲಾತಿ ಪಡೆಯುತ್ತಿದ್ದಾರೆ ಎಂಬ ಗೊಂದಲ ನಿರ್ಮಾಣವಾಗಿದೆ. ಸರ್ಕಾರ ಈ ಗೊಂದಲ ಬಗೆಹರಿಸಬೇಕು. ಸಚಿವ ಎಚ್.ಸಿ. ಮಹದೇವಪ್ಪ ಅವರಿಂದಲೇ ಗೊಂದಲ ಮುಂದುವರಿದಿದೆ ಎಂದು ಒಳ ಮೀಸಲಾತಿ ಹೋರಾಟಗಾರ ಬಸವರಾಜ್ ಕೌತಾಳ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ನಾಗಮೋಹನ್ ದಾಸ್ ವರದಿ ಯಥಾವತ್ ಜಾರಿಗೆ ಒತ್ತಾಯ

ಒಂದೆಡೆ ಮೀಸಲಾತಿ ಹೋರಾಟಗಾರರು ಎಕೆ, ಎಡಿ, ಎಎಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸಿದರೆ, ಮತ್ತೊಂದೆಡೆ ಉಪಜಾತಿ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಕೊಡಿ ಎನ್ನುತ್ತಿದ್ದಾರೆ. ಇನ್ನು ಅಲೆಮಾರಿಗಳನ್ನು ಎಲ್ಲರೂ ಮರೆತಂತಿದೆ. ಇದಕ್ಕೆಲ್ಲಾ ಪರಿಹಾರ ಸಿಗಬೇಕಾದರೆ ನ್ಯಾ. ನಾಗಮೋಹನ್ ದಾಸ್‌ ಆಯೋಗದ ಶಿಫಾರಸುಗಳನ್ನು ಯಥಾವತ್‌ ಜಾರಿ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಪರಯ್ಯಾ- ಮೊಗೇರರನ್ನು ಈಗಿನಂತೆ ಬಲಗೈ ಗುಂಪಿನಲ್ಲೇ ಉಳಿಯುವಂತೆ ಮಾಡಿ ನಾಗಮೋಹನ್ ದಾಸ್ ಆಯೋಗದ ಉಳಿದ ಎಲ್ಲ ಶಿಫಾರಸುಗಳನ್ನು ಯಥಾವತ್‌ ಜಾರಿಗೆ ತರಬೇಕು. ಆ ನಂತರ ಒಳಮೀಸಲು ವಿರೋಧಿಸುವವರು ಯಾವ ಕೋರ್ಟ್ ಗೆ ಬೇಕಾದರೂ ಹೋಗಲಿ ಎಂದು ದಲಿತ ಹೋರಾಟಗಾರ ಸಂತೋಷ್ ಕೋಡಿಹಳ್ಳಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಸಮೀಕ್ಷೆ ಸಮಯದಲ್ಲಿ ಮಾದಿಗ ಮತ್ತು ಹೊಲಯ ಉಪಜಾತಿಗಳ ಹೆಸರನ್ನು ದುಂಬಾಲು ಬಿದ್ದು ಬರೆಸಿದ್ದಷ್ಟೇ ಭಾಗ್ಯ ಎನ್ನುವಂತಾಗಿದೆ ಈಗಿನ ಪರಿಸ್ಥಿತಿ.

ರಾಜ್ಯ ಸರ್ಕಾರಕ್ಕೆ ಎಕೆ, ಎಡಿ ಹಾಗೂ ಎಎ ಗಳನ್ನು ಕೈ ಬಿಡಲು ಅಧಿಕಾರವಿಲ್ಲ. ಆದ್ದರಿಂದಲೇ ನಾಗಮೋಹನ್ ದಾಸ್ ಆಯೋಗವು ಈ ಜಾತಿಗಳಿಗೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶೇ 1 ರಷ್ಟು ಮೀಸಲಾತಿ ನೀಡಿತ್ತು. ಬಲಗೈ ಸಮುದಾಯದ ಸಚಿವರ ಲೆಕ್ಕಾಚಾರದ ಮೀಸಲು ಜಾರಿಯ'ಒಳ' ಆಟ ಹಾಗೂ ಎಎ, ಎಕೆ, ಎಡಿ ಗಳನ್ನು ಪ್ರವರ್ಗ ಎ ಹಾಗೂ ಬಿ ಗಳಲ್ಲಿ ಮೀಸಲಾತಿ ಪಡೆಯಲು ರಹದಾರಿ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದಾರೆ.

ಈಡೇರದ ಒಳ ಮೀಸಲಾತಿ ಆಶಯ

ಒಳ ಮೀಸಲಾತಿಯು ದಾಖಲೆಗಳಲ್ಲಷ್ಟೇ ಜಾರಿಯಾದರೂ ಆಂತರ್ಯದಲ್ಲಿ ಅದರ ಆಶಯ ಈಡೇರಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರ, ಕೋಲಾರ, ಆನೇಕಲ್, ಮೈಸೂರು ಭಾಗ ಹಾಗೂ ತಮಿಳುಗರು ಹೆಚ್ಚು ವಾಸಿಸುವ ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ಆದಿ ದ್ರಾವಿಡ ಜನಾಂಗವಿದೆ.
ತೆಲುಗು ಭಾಷಿಕರಾದ ಆದಿ ಆಂಧ್ರ ಸಮುದಾಯವು ಚಿಕ್ಕಬಳ್ಳಾಪುರ, ಬಳ್ಳಾರಿ, ಪಾವಗಡ ಹಾಗೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಾಸವಿದೆ. ಕನ್ನಡ ಭಾಷೆ ಮಾತನಾಡುವ ಆದಿ ಕರ್ನಾಟಕ ಸಮುದಾಯ ಹಳೆ ಮೈಸೂರು ಭಾಗ, ಮಧ್ಯಕರ್ನಾಟಕದ ಜಿಲ್ಲೆಗಳಲ್ಲಿ ನೆಲೆಯೂರಿದೆ.
ಆದರೆ, ಈ‌ ಮೂರು ಜಾತಿಗಳು ಪ್ರದೇಶವಾರು ಭಿನ್ನವಾಗಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾದಿಗ ಸಮುದಾಯವು ಆದಿ ಕರ್ನಾಟಕ ಹೆಸರಿನಲ್ಲಿ ಗುರುತಿಸಿಕೊಂಡಿದೆ. ಹೊಲೆಯ ಹಾಗೂ ಛಲವಾದಿ ಸಮುದಾಯವು ಆದಿ ದ್ರಾವಿಡ ಜಾತಿಯಲ್ಲಿದೆ.
ಮಂಡ್ಯ, ಕೊಡಗು, ಮೈಸೂರು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಹೊಲೆಯ ಹಾಗೂ ಮಾದಿಗ ಸಮುದಾಯಗಳು ಆದಿ ಕರ್ನಾಟಕ ಜಾತಿಯಲ್ಲಿ ಗುರುತಿಸಿಕೊಂಡಿವೆ.

ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಾದಿಗ ಸಮುದಾಯ ಆದಿ ದ್ರಾವಿಡದಲ್ಲಿದ್ದರೆ, ಹೊಲೆಯ ಮತ್ತು ಛಲವಾದಿ ಸಮುದಾಯ ಆದಿ ಕರ್ನಾಟಕದಲ್ಲಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮೊಗೆರ್ ಸಮುದಾಯವು ಆದಿ ದ್ರಾವಿಡ ಹೆಸರಿನಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ.

ಕೋಲಾರ(ಕೆಜಿಎಫ್), ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ತಮಿಳು ಮೂಲದ ಪರಯ್ಯ ಸಮುದಾಯ, ಆದಿ ದ್ರಾವಿಡದಲ್ಲಿದೆ. ಕೆ.ಜಿ.ಎಫ್ ನ ಕೆಲ ಭಾಗದಲ್ಲಿ ಆಂಧ್ರ ಮೂಲದ ಮಾದಿಗ ಸಮುದಾಯವು ಆದಿ ದ್ರಾವಿಡ ಜಾತಿ ಹೆಸರಿನಲ್ಲಿದೆ. ಅದೇ ಆಂಧ್ರ ಮೂಲದ ಮಾದಿಗ ಸಮುದಾಯ ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಆದಿ ದ್ರಾವಿಡ ಹೆಸರಿನಲ್ಲಿ ಗುರುತಿಸಿಕೊಂಡಿದೆ.

ಜಾತಿ ಪ್ರಮಾಣ ಪತ್ರ ಪಡೆಯಲು ಆದೇಶ

ಒಳಮಿಸಲಾತಿ ಜಾರಿ ಸಂಬಂಧ ಜಸ್ಟೀಸ್ ಎಚ್‌.ಎನ್‌. ನಾಗಮೋಹನ್‌ ದಾಸ್ ಆಯೋಗಕ್ಕೆ ಸಮೀಕ್ಷೆ ಸಂದರ್ಭದಲ್ಲಿ ಮೂಲ ಜಾತಿ ತಿಳಿಸದೆ, ‘ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ’ ಎಂದು ಬರೆಸಿರುವವರು ಜಾತಿ ಪ್ರಮಾಣ ಪತ್ರ ಪಡೆಯುವಾಗ ‘ಪ್ರವರ್ಗ’ ನಮೂದಿಸಬೇಕು ಮತ್ತು ಒಮ್ಮೆ ಒಂದು ಗುಂಪಿನಲ್ಲಿ ಮೀಸಲಾತಿ ಸೌಲಭ್ಯ ಪಡೆದರೆ, ಅವರ ಇಡೀ ಕುಟುಂಬ ಮುಂದೆ ಅದೇ ಗುಂಪಿನಲ್ಲಿ ಮುಂದುವರಿಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು.

“ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳನ್ನು ಒಳಮೀಸಲಾತಿಗಾಗಿ ಸಂವಿಧಾನದ ಅನುಚ್ಛೇಧ 15 ಮತ್ತು ಅನುಚ್ಛೇಧ 16 ರನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಪ್ರವರ್ಗ- ಎ ರಲ್ಲಿ 16 ಜಾತಿಗಳು, ಪ್ರವರ್ಗ-ಬಿ ನಲ್ಲಿ 19 ಜಾತಿಗಳು ಮತ್ತು ಪ್ರವರ್ಗ-ಸಿ ನಲ್ಲಿ 63 ಜಾತಿಗಳನ್ನು ಸೇರಿಸಿ, ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ, ಆದೇಶ ಹೊರಡಿಸಲಾಗಿದೆ. ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಪ್ರವರ್ಗ-ಎ ಮತ್ತು ಪ್ರವರ್ಗ-ಬಿ ನಲ್ಲಿ ಮೀಸಲಾತಿ ಸೌಲಭ್ಯ ಪಡೆಯಬಹುದೆಂದು ತಿಳಿಸಿತ್ತು.

“ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಹೊರತುಪಡಿಸಿ ಉಳಿದ 98 ಜಾತಿಗಳನ್ನು ಪ್ರವರ್ಗ- ಎ, ಪ್ರವರ್ಗ-ಬಿ ಮತ್ತು ಪ್ರವರ್ಗ -ಸಿ ಗಳಲ್ಲಿ ವರ್ಗೀಕರಿಸಲಾಗಿದೆ. ಈಗಾಗಲೇ 98 ಸಮುದಾಯದವರು ತಮ್ಮ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ಈ 98 ಜಾತಿಗಳು ತಮ್ಮ ಜಾತಿಯನ್ನು ಸ್ಪಷ್ಟವಾಗಿ ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದರಿಂದ ಅವರು ಅದೇ ಜಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪ್ರವರ್ಗದೊಂದಿಗೆ ಮೀಸಲಾತಿ ಸೌಲಭ್ಯ ಪಡೆಯಲು ಉಪಯೋಗಿಸಬಹುದು. ಜಾತಿ ಪ್ರಮಾಣ ಪತ್ರದಲ್ಲಿ ಜಾತಿ ನಮೂದಿಸುವ ಬಗ್ಗೆ ಅಗತ್ಯ ಕ್ರಮವಹಿಸಬೇಕು” ಎಂದು ಸರ್ಕಾರ ಆದೇಶದಲ್ಲಿ ಹೇಳಿತ್ತು.

ಈಗಾಗಲೇ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರು ಪ್ರವರ್ಗ ʼಎʼ ಅಥವಾ ಪ್ರವರ್ಗ ʼಬಿʼ ರಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕಾದರೆ ತಮ್ಮ ಮೂಲ ಜಾತಿ ಹಾಗೂ ಪ್ರವರ್ಗವನ್ನು ʼಅರ್ಜಿ ನಮೂನೆ -1ʼ ರಲ್ಲಿ ನಮೂದಿಸಿ, ಪ್ರಸ್ತುತ ಜಾರಿಯಲ್ಲಿರುವ ಪದ್ಧತಿಯಂತೆ ಆನ್‌ಲೈನ್‌ ಮೂಲಕ ಜಾತಿ ಪ್ರಮಾಣ ಪತ್ರ ಪಡೆಯಬೇಕು.

ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು, ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ರ ತಿದ್ದುಪಡಿ ಅಧಿನಿಯಮ 2024ರಂತೆ ನಿಯಮಗಳನ್ನು ಪರಿಶೀಲಿಸಬೇಕು. ಅಭ್ಯರ್ಥಿಗಳ ಮೂಲ ಜಾತಿ ಕುರಿತು ಸ್ಥಳೀಯವಾಗಿ ವಿಚಾರಣೆ ನಡೆಸಿ, ಖಾತರಿಪಡಿಸಿಕೊಳ್ಳಬೇಕು. ಇದರ ಆಧಾರದ ಮೇಲೆ ಪ್ರವರ್ಗ ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಲಾಗಿತ್ತು.

ಉದಾಹರಣೆಗೆ ಯಾವುದೇ ಒಬ್ಬ ಅಭ್ಯರ್ಥಿಯು ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ಪಡೆದಿದ್ದು, ಮೂಲ ಜಾತಿ ಹೊಲೆಯ ಎಂದು ಇದ್ದಲ್ಲಿ ಹೊಸದಾಗಿ ಪಡೆಯುವ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಹೊಲೆಯ, ಪ್ರವರ್ಗ-ಬಿ) ಎಂದು ಉಲ್ಲೇಖಿಸಿ, ಜಾತಿ ಪ್ರಮಾಣ ಪತ್ರ ಪಡೆಯಬೇಕು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಕಲಾವತಿ ಎಸ್‌.ವಿ ಆದೇಶಿಸಿದ್ದರು.

Read More
Next Story