
Internal Reservation| ನೆಲೆಯೂರದ ಅಲೆಮಾರಿಗಳ ದತ್ತಾಂಶ ಸಂಗ್ರಹ ಸವಾಲು; ದಕ್ಕಲಿದೆಯೇ ಒಳ ಮೀಸಲಾತಿಯ ಪಾಲು
ದಕ್ಕಲಿಗ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂದಿಜೋಗಿ, ಸೋಲಿಗರು, ಇರುಳಿಗರು ಹಾಗೂ ಯರವರು ಅಲೆಮಾರಿ ಜೀವನ ನಡೆಸುತ್ತಿದ್ದು, ಒಂದೆಡೆ ನೆಲೆಯೂರಿರುವುದಿಲ್ಲ. ಹೀಗಿರುವಾಗ ಇಂತಹ ಜಾತಿಗಳು ಸಮೀಕ್ಷೆಯಿಂದ ಬಿಟ್ಟು ಹೋಗುವ ಆತಂಕ ಕಾಡುತ್ತಿದೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಹಂಚಿಕೆಗೆ ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗ ನಡೆಸುತ್ತಿರುವ ದತ್ತಾಂಶ ಸಂಗ್ರಹ ಸಮೀಕ್ಷೆಗೆ ಹೊಸ ಸವಾಲೊಂದು ಎದುರುಗೊಂಡಿದೆ.
ದಲಿತರಲ್ಲೇ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳ ದತ್ತಾಂಶ ಸಂಗ್ರಹ ಕ್ಲಿಷ್ಟಕರವಾಗಿದೆ. ದಕ್ಕಲಿಗ, ಬುಡಬುಡಿಕೆ, ಮೊಂಡರು, ಡೊಂಬರು, ಹಾವಾಡಿಗರು, ಶಿಳ್ಳೆಕ್ಯಾತ, ಹಂದಿಜೋಗಿ, ಸೋಲಿಗರು, ಇರುಳಿಗರು ಹಾಗೂ ಯರವರು ಅಲೆಮಾರಿ ಜೀವನ ನಡೆಸುತ್ತಿದ್ದು, ಒಂದೆಡೆ ನೆಲೆಯೂರಿರುವುದಿಲ್ಲ. ಹೀಗಿರುವಾಗ ಇಂತಹ ಜಾತಿಗಳು ಸಮೀಕ್ಷೆಯಿಂದ ಬಿಟ್ಟು ಹೋಗುವ ಆತಂಕ ಕಾಡುತ್ತಿದೆ.
ಅಲೆಮಾರಿ ಜನಾಂಗದವರಲ್ಲಿ ಅಕ್ಷರಜ್ಞಾನ ಹಾಗೂ ಸಂಘಟನೆ ಕೊರತೆ ಇರುವುದು ಕೂಡ ಹಿಂದುಳಿದಿರುವಿಕೆಗೆ ಕಾರಣ ಎನ್ನಬಹುದು. ಊರಿಂದ ಊರಿಗೆ ವಲಸೆ ಹೋಗುವುದರಲ್ಲೇ ಜೀವನ ಸವೆಸುವ ಈ ಅಲೆಮಾರಿಗಳು ಸರ್ಕಾರದ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ.
ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಒಳಮೀಸಲಾತಿಗೆ ಈ ಜಾತಿಗಳ ನಿಖರ ದತ್ತಾಂಶವನ್ನು ಆಯೋಗ ಹೇಗೆ ಸಂಗ್ರಹಿಸಲಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಸೌಲಭ್ಯ ಕಲ್ಪಿಸಿದರೂ ನಿಲ್ಲದ ಅಲೆಮಾರಿಗಳು
ರಾಜ್ಯದಲ್ಲಿ ದಶಕಗಳಿಂದ ಲಂಬಾಣಿ, ಮಣ್ಣು ವಡ್ಡರು, ಕೊರಚ ಹಾಗೂ ಕೊರಮರು ಅಲೆಮಾರಿ ಜೀವನ ನಡೆಸುತ್ತಿದ್ದರು. ಆದರೆ, ಈಚೆಗೆ ಈ ಸಮುದಾಯಗಳು ಒಂದೆಡೆ ನೆಲೆ ನಿಂತಿವೆ. ಆದರೆ, ದಕ್ಕಲಿಗ ಸೇರಿ ಹಲವು ಜಾತಿಗಳಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿದರೂ ಅಲೆಮಾರಿ ಜೀವನ ಸಂಪೂರ್ಣ ನಿಂತಿಲ್ಲ.
ಡೊಂಬರು ಊರೂರುಗಳಲ್ಲಿ ದೊಂಬರಾಟದ ಮೂಲಕ ಪ್ರದರ್ಶನ ನೀಡುತ್ತಾ ಜೀವನ ಪೊರೆಯುತ್ತಿದ್ದಾರೆ.
ಅದೇ ರೀತಿ ಹಾವಾಡಿಗರು, ಶಿಳ್ಳೇಕ್ಯಾತರು (ಶಿಳ್ಳೆಕ್ಯಾತ) ಬೊಂಬೆಯಾಟ, ಬಯಲಾಟಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೀಗೆ ಬೇರೆ ಬೇರೆ ಊರುಗಳಲ್ಲಿ ಅಲೆಮಾರಿ ಜೀವನ ನಡೆಸುವ ಈ ಸಮುದಾಯಗಳು ಸಮೀಕ್ಷೆಯಿಂದ ವಂಚಿತವಾಗುವ ಸಾಧ್ಯತೆ ಇರಲಿದೆ.
ಹಂದಿಜೋಗರು ಹಂದಿ ಮಂದೆಯೊಡನೆ ಊರೂರಿಗೆ ಅಲೆಯುತ್ತಾ, ಕೆಲವೊಮ್ಮೆ ಭಿಕ್ಷೆ ಬೇಡುತ್ತಾರೆ. ನಾರು ಬೇರುಗಳಿಂದ ಕಷಾಯ ಮತ್ತು ಔಷಧ ತಯಾರಿಸಿ ಮಾರುತ್ತಾರೆ. ಬುಡುಬುಡಿಕೆ ಜನಾಂಗದ ಪುರುಷರು ಶಕುನ ಹೇಳುತ್ತಾ ಅಲೆದಾಡುತ್ತಾರೆ. ಇನ್ನು ರಾಜ್ಯದಲ್ಲಿ 15ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕೊರಚ ಹಾಗೂ ಕೊರಮ ಸಮುದಾಯದಲ್ಲಿ ಇಂದಿಗೂ ಹಲವಾರು ವಲಸೆ ಹೋಗುವುದು ಸಾಮಾನ್ಯ. ಹೆಚ್ಚು ಸುಶಿಕ್ಷಿತರಲ್ಲದ ಈ ಸಮುದಾಯಗಳಿಗೆ ಸೂಕ್ತ ಮಾಹಿತಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಜವಾಬ್ದಾರಿ ಆಯೋಗದ ಮೇಲಿದೆ.
ಅಲೆಮಾರಿ ಸಮುದಾಯಗಳು ಜೀವನೋಪಾಯಕ್ಕೆ ವಲಸೆ ಹೋಗುತ್ತವೆ. ಅಂತಹ ಜಾತಿಗಳಲ್ಲಿ ಒಳ ಮೀಸಲಾತಿಯ ಜಾಗೃತಿ ಮೂಡಿಸಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಪರಿಶಿಷ್ಟ ಜಾತಿಗಳ ಜವಾಬ್ದಾರಿ ಆಗಿದೆ. ಆ ಮೂಲಕ ತೀವ್ರ ತುಳಿತಕ್ಕೆ ಒಳಗಾಗಿರುವ ಸಮುದಾಯಗಳಿಗೆ ಮೀಸಲಾತಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ದಲಿತ ಹೋರಾಟಗಾರ ಹಾಗೂ ಪತ್ರಕರ್ತ ರಾಜು ಸಣ್ಣಕ್ಕಿ ಅವರು ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಸಮೀಕ್ಷೆಗೆ ತಂತ್ರಾಂಶದ ತೊಡಕು
ಪರಿಶಿಷ್ಟ ಜಾತಿಯ ಮೂಲ ಜಾತಿಗಳ ನಿಖರ ದತ್ತಾಂಶ ಸಂಗ್ರಹಿಸಲು ನ್ಯಾ. ನಾಗಮೋಹನ ದಾಸ್ ನೇತೃತ್ವದ ಆಯೋಗ ಅಭಿವೃದ್ದಿಪಡಿಸಿರುವ ಎಪಿಕೆ ತಂತ್ರಾಂಶ ಪದೇ ಪದೇ ಸಮಸ್ಯೆ ಸೃಷ್ಟಿಸುತ್ತಿದ್ದು, ಸಮೀಕ್ಷೆ ವಿಳಂಬಕ್ಕೆ ಕಾರಣವಾಗಲಿದೆ ಎನ್ನಲಾಗಿದೆ.
ರಾಜ್ಯದ ಕೆಲ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯೂ ಎದುರಾಗಿದ್ದು, ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸುವುದು ಅನುಮಾನವಾಗಿದೆ.
ಮೊದಲ ಹಂತದ ಮನೆ ಮನೆ ಸಮೀಕ್ಷೆ ಮೇ 17ಕ್ಕೆ ಮುಗಿಯಲಿದೆ. ಎರಡನೇ ಹಂತದ ಸಮೀಕ್ಷೆ ಮೇ19 ರಿಂದ 21ರವರೆಗೆ ವಿಶೇಷ ಶಿಬಿರಗಳ ಮೂಲಕ ನಡೆಯಲಿದೆ. ಮೂರನೇ ಹಂತದ ಸಮೀಕ್ಷೆಯು ಮೊದಲಿನ ಎರಡೂ ಹಂತಗಳಲ್ಲಿ ಬಿಟ್ಟುಹೋದವರಿಗಾಗಿ ಆನ್ಲೈನ್ ಮೂಲಕ ನಡೆಯಲಿದೆ. ಅದು ಮೇ 19 ರಿಂದ 22ರವರೆಗೆ ನಡೆಯಲಿದೆ.
ಗಡುವು ವಿಸ್ತರಣೆ ಸಾಧ್ಯತೆ
ಪರಿಶಿಷ್ಟ ಜಾತಿಯೊಳಗಿನ ಮೂಲ ಜಾತಿಗಳ ಸಮೀಕ್ಷೆಯನ್ನು 60 ದಿನದಲ್ಲಿ ಪೂರ್ಣಗೊಳಿಸಿ ಸಲ್ಲಿಸಬೇಕೆಂದು ಸರ್ಕಾರ ನೀಡಿರುವ ಗಡುವನ್ನು ವಿಸ್ತರಿಸುವಂತೆ ಆಯೋಗ ಕೋರಲಿದೆ ಎಂದು ಮೂಲಗಳು ತಿಳಿಸಿವೆ
ರಾಜ್ಯಾದ್ಯಂತ ಪರಿಶಿಷ್ಟ ಜಾತಿಯ ಮೂಲಜಾತಿಗಳ ಸಮೀಕ್ಷೆ ನಡೆಸಿ ನಿಖರ ದತ್ತಾಂಶ ಸಂಗ್ರಹಿಸಲು ಇನ್ನಷ್ಟು ಕಾಲಾವಕಾಶ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಣತಿಯಲ್ಲಿ ಸುಮಾರು 65ಸಾವಿರ ಶಿಕ್ಷಕರು ಪಾಲ್ಗೊಂಡಿದ್ದಾರೆ. ಆದರೆ, ಮೊಬೈಲ್ ತಂತ್ರಾಂಶ ಹಾಗೂ ನೆಟ್ ವರ್ಕ್ ಲೋಪಗಳಿಂದ ಸಮೀಕ್ಷೆ ವಿಳಂಬವಾಗಲಿದೆ ಎನ್ನಲಾಗಿದೆ.
ಹಲವು ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ
ಆಯೋಗ ಅಭಿವೃದ್ದಿಪಡಿಸಿರುವ ಎಪಿಕೆ ತಂತ್ರಾಂಶದಲ್ಲಿ ಸರ್ವರ್ ಸಮಸ್ಯೆ ಸಾಮಾನ್ಯವಾಗಿದೆ. ಸಮೀಕ್ಷೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮೊದಲ ದಿನ ಕಲಬುರಗಿಯಲ್ಲಿ ಸರ್ವರ್ ಸಮಸ್ಯೆ ಎದುರಾಗಿತ್ತು. ನಂತರದ ದಿನಗಳಲ್ಲಿ ರಾಯಚೂರು, ಚಿತ್ರದುರ್ಗ, ಮೈಸೂರು, ತುಮಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಂತ್ರಾಂಶದ ಸರ್ವರ್ ಸಮಸ್ಯೆ ಮುಂದುವರಿದಿತ್ತು. ಇದರಿಂದ ಗಣತಿದಾರರು ಸೂಕ್ತ ದಾಖಲೆಗಳನ್ನು ಅಪ್‌ಲೋಡ್ ಮಾಡಲು ತ್ರಾಸ ಅನುಭವಿಸುತ್ತಿದ್ದಾರೆ.
ಕರಾವಳಿ ಹಾಗೂ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಈ ಸಮಸ್ಯೆ ವಿಪರೀತವಾಗಿದೆ.
ಗಣತಿದಾರರ ಸರ್ಕಸ್
ಮಲೆನಾಡಿನ ಪ್ರದೇಶಗಳಲ್ಲಿ ನೆಟ್ಸಿ ವರ್ಕ್ಗು ಸಮಸ್ಯೆಯಿಂದ ಗಣತಿದಾರರು ಜನರನ್ನು ನೆಟ್ವ ವರ್ಕ್ ಸಿಗುವ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಾಹಿತಿ ಅಪ್‌ಲೋಡ್ ಮಾಡುವ ಸರ್ಕಸ್ ನಡೆಸುತ್ತಿದ್ದಾರೆ. ಕೆಲವೊಮ್ಮೆ ಎಪಿಕೆ ತಂತ್ರಾಂಶದಲ್ಲಿ ಸರ್ವರ್ ಸಮಸ್ಯೆ ಉಂಟಾದರೆ, ಇನ್ನೊಮ್ಮೆ ದಿನಕ್ಕೆ ಕನಿಷ್ಠ ಹತ್ತು ಕುಟುಂಬಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೆಸರೇಳಲಿಚ್ಛಿಸದ ಗಣತಿದಾರರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿಸಲು ಮನವಿ
ದತ್ತಾಂಶ ಸಂಗ್ರಹಣೆ ಸಮೀಕ್ಷೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು ಶೀಘ್ರವೇ ಬಗೆಹರಿಸಬೇಕೆಂದು ಪರಿಶಿಷ್ಟ ಜಾತಿಯ ಎಡ ಹಾಗೂ ಬಲ ಸಮುದಾಯದ ನಾಯಕರಾದ ಮಾಜಿ ಸಚಿವ ಎಚ್. ಆಂಜನೇಯ, ಸಾಹಿತಿ ಎಲ್. ಹನುಮಂತಯ್ಯ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸಾಗರ್, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಸೇರಿದಂತೆ ಹಲವರು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರನ್ನು ಭೇಟಿಯಾಗಿ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.
ಕೆಲ ಗಣತಿದಾರರು ಉದ್ದೇಶಪೂರ್ವಕವಾಗಿ ಹಾಗೂ ಕಾಟಾಚಾರಕ್ಕೆ ತಪ್ಪು ಮಾಹಿತಿಗಳನ್ನು ನಮೂದಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಇಂತಹ ದೂರುಗಳ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದರು. ಪಡಿತರ ಚೀಟಿಯಲ್ಲಿ ಹೆಸರಿಲ್ಲದಿದ್ದರೆ ಒಂದು ಕುಟುಂಬಕ್ಕೆ ಇಬ್ಬರನ್ನಷ್ಟೇ ಸೇರಿಸುವ ಅವಕಾಶವಿದೆ. ಆದರೆ ಮದುವೆಯಾಗಿ ಬಂದ ಮಹಿಳೆಯರು ಹಾಗೂ ಸಣ್ಣ ಮಕ್ಕಳನ್ನು ಪಡಿತರ ಚೀಟಿಗಳಲ್ಲಿ ಸೇರಿಸಿಲ್ಲ. ಅಂತವರ ದತ್ತಾಂಶ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇದು ಗಂಭೀರ ಸಮಸ್ಯೆಯಾಗಿದ್ದು ತಕ್ಷಣವೇ ಸರಿಪಡಿಸಬೇಕು ಎಂದೂ ಕೋರಿದ್ದರು.
ಒಳಮೀಸಲಾತಿ ಸಮೀಕ್ಷೆ ಗೊಂದಲ ಬೇಡ: ಸಿಎಂ
ರಾಜ್ಯದಲ್ಲಿ ನಡೆಯುತ್ತಿರುವ ಒಳಮೀಸಲಾತಿ ದತ್ತಾಂಶ ಸಮೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿ ಬಲಗೈ, ಎಡಗೈ, ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿದಂತೆ ಯಾವ ಜಾತಿಯವರು ಎಷ್ಟು ಜನರಿದ್ದಾರೆ. ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳೇನು ಎಂಬುದರ ನಿಖರ ಸಮೀಕ್ಷೆ ನಡೆಸಲಾಗುತ್ತಿದೆ.ಸಾಮಾಜಿಕ ನ್ಯಾಯದ ಅಡಿಯಲ್ಲಿ ಒಳ ಮೀಸಲಾತಿ ನೀಡಲಾಗುವುದು. ಇದರ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಒಳಮೀಸಲು ವಿಳಂಬ ಸಾಧ್ಯತೆ
ಮೇ5 ರಿಂದ ಆರಂಭವಾಗಿದ್ದ ಒಳಮೀಸಲಾತಿ ದತ್ತಾಂಶ ಸಂಗ್ರಹಣೆ ಮೇ 23ಕ್ಕೆ ಪೂರ್ಣಗೊಳ್ಳಬೇಕಿದೆ. ಆದರೆ ಗಣತಿ ಆರಂಭವಾದ ನಂತರ ಹಲವಾರು ಸಮಸ್ಯೆಗಳು ಉಂಟಾಗಿದ್ದು ನಿರ್ದಿಷ್ಟ ಸಮಯದಲ್ಲಿ ಗಣತಿ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಸಮೀಕ್ಷೆಗೆ ಇನ್ನು ಹೆಚ್ಚಿನ ಸಮಯ ಬೇಕೆಂದು ಆಯೋಗವು ಕೇಳಲಿದೆ ಎನ್ನಲಾಗಿದೆ ಹಾಗಾಗಿ ಒಳ ಮೀಸಲು ಜಾರಿಯಾಗುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.