Internal Reservation |18.96 ಲಕ್ಷ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ಪೂರ್ಣ; ಯಾವ ಜಿಲ್ಲೆಯಲ್ಲಿ ಎಷ್ಟು ಗಣತಿ ?
x

Internal Reservation |18.96 ಲಕ್ಷ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ಪೂರ್ಣ; ಯಾವ ಜಿಲ್ಲೆಯಲ್ಲಿ ಎಷ್ಟು ಗಣತಿ ?

2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗದ ಸಮೀಕ್ಷೆಗೆ ಒಟ್ಟು 25,72,050 ಕುಟುಂಬಗಳನ್ನು ಅಂದಾಜಿಸಿದ್ದು, ಇದರ ಪೈಕಿ ಶೇ 73.72 ರಷ್ಟು ಕುಟುಂಬಗಳ ಸಮೀಕ್ಷೆ ಮುಗಿಸಿದೆ.


ಪರಿಶಿಷ್ಟ ಜಾತಿಯ ಒಳಮೀಸಲಾತಿ ಹಂಚಿಕೆ ಸಂಬಂಧ ನಿವೃತ್ತ ನ್ಯಾ.ನಾಗಮೋಹನದಾಸ್ ನೇತೃತ್ವದ ಏಕಸದಸ್ಯ ಆಯೋಗ ನಡೆಸುತ್ತಿರುವ ಪರಿಶಿಷ್ಟ ಜಾತಿ , ಉಪಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಮೇ 15 ರವರೆಗೆ 73.72 ರಷ್ಟು ಕುಟುಂಬಗಳ ಮನೆ ಮನೆ ಸಮೀಕ್ಷೆ ಪೂರ್ಣಗೊಂಡಿದೆ.

2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಜಾತಿಯ ಕುಟುಂಬಗಳಿವೆ. ನ್ಯಾ.ನಾಗಮೋಹನದಾಸ್ ನೇತೃತ್ವದ ಆಯೋಗದ ಸಮೀಕ್ಷೆಗೆ ಒಟ್ಟು 25,72,050 ಕುಟುಂಬಗಳನ್ನು ಅಂದಾಜಿಸಿದ್ದು, ಇದರ ಪೈಕಿ ಶೇ 73.72 ರಷ್ಟು ಕುಟುಂಬಗಳ ಸಮೀಕ್ಷೆ ಮುಗಿಸಲಾಗಿದೆ.

ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯಲ್ಲಿ ರಾಜ್ಯಾದ್ಯಂತ ಪರಿಶಿಷ್ಟ ಜಾತಿಯ ಜನಸಂಖ್ಯೆ 1,09,29,347 ಇದೆ. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡಲು ಮೂಲ ಜಾತಿಗಳ ದತ್ತಾಂಶ ಲಭ್ಯವಿರಲಿಲ್ಲ. ಹಾಗಾಗಿ ಪರಿಶಿಷ್ಟ ಜಾತಿಯಲ್ಲಿ ಮೂಲ ಅಥವಾ ಉಪ ಜಾತಿಗಳ ಗಣತಿ ನಡೆಸಲಾಗುತ್ತಿದೆ.

ಸಮೀಕ್ಷೆ ಅವಧಿ ವಿಸ್ತರಣೆ

ಪರಿಶಿಷ್ಟ ಜಾತಿಗಳ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲು ನಡೆಸುತ್ತಿರುವ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಮೇ 5 ರಿಂದ ಆರಂಭವಾಗಿದ್ದ ಮನೆ ಮನೆ ಸಮೀಕ್ಷೆ ಮೇ 17ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ, ಗಣತಿಯಲ್ಲಿ ಸಾಕಷ್ಟು ಲೋಪಗಳು ಎದುರಾದ ಹಿನ್ನೆಲೆಯಲ್ಲಿ ಸಮೀಕ್ಷೆ ಅವಧಿಯನ್ನು ಮೇ 25ರವರೆಗೆ ವಿಸ್ತರಿಸಲಾಗಿದೆ. ಎರಡನೇ ಹಂತದ ಸಮೀಕ್ಷೆಯ ಭಾಗವಾದ ವಿಶೇಷ ಶಿಬಿರಗಳ ದಿನಾಂಕವನ್ನೂ ಪರಿಷ್ಕರಿಸಲಾಗಿದೆ. ಮೇ 26ರಿಂದ 28ರ ವರೆಗೆ ವಿಶೇಷ ಶಿಬಿರಗಳ ಮೂಲಕ ದತ್ತಾಂಶ ಸಂಗ್ರಹ ನಡೆಯಲಿದೆ.

ಸಮೀಕ್ಷೆಯಿಂದ ಹೊರಗುಳಿದವರಿಗಾಗಿ ಆನ್ಲೈನ್ನಲ್ಲಿ ಮಾಹಿತಿ ಘೋಷಿಸಿಕೊಳ್ಳುವವರಿಗೆ ಮೇ 19ರಿಂದ 28ರ ರವರೆಗೆ ಅವಕಾಶ ನೀಡಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಪರಿಶಿಷ್ಟರ ಕುಟುಂಬ?

ಮೇ15 ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 18,41,258 ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಸಮೀಕ್ಷೆ ನಡೆಸಲಾಗಿದೆ. ಆ ಪ್ರಕಾರ ಸಮೀಕ್ಷೆಗೆ ಒಳಪಟ್ಟ ಜಿಲ್ಲಾವಾರು ಪರಿಶಿಷ್ಟ ಜಾತಿಯ ಕುಟುಂಬಗಳ ಮಾಹಿತಿ ಈ ಕೆಳಕಂಡಂತಿದೆ.

ಬಾಗಲಕೋಟೆ-61,758, ಬಳ್ಳಾರಿ-46,774, ಬೆಂಗಳೂರು ಗ್ರಾಮಾಂತರ ಜಿಲ್ಲೆ-43,536, ಬಿಬಿಎಂಪಿ ವ್ಯಾಪ್ತಿ-55,027, ಬೆಳಗಾವಿ-1,15,686, ಬೆಂಗಳೂರು-38,769,ಬೀದರ್-61,139, ಚಾಮರಾಜನಗರ-

52,860, ಚಿಕ್ಕಬಳ್ಳಾಪುರ-63,879, ಚಿಕ್ಕಮಗಳೂರು-47,527, ಚಿತ್ರದುರ್ಗ-79,313, ದಾವಣಗೆರೆ-74,557, ದಕ್ಷಿಣ ಕನ್ನಡ-26,262, ಧಾರವಾಡ-35,171, ಗದಗ-34,759, ಹಾಸನ-73,910, ಹಾವೇರಿ-49,748, ಕಲಬುರಗಿ-1,15,940, ಕೊಡಗು-15,494, ಕೋಲಾರ-80,355, ಕೊಪ್ಪಳ-47,766,ಮಂಡ್ಯ-61,481, ಮೈಸೂರು-1,04,939, ರಾಯಚೂರು-79,194, ರಾಮನಗರ-42,044, ಶಿವಮೊಗ್ಗ-54,209, ತುಮಕೂರು-1,10,235, ಉಡುಪಿ-14,631, ಉತ್ತರ ಕನ್ನಡ-23,965, ವಿಜಯನಗರ-57,363,ವಿಜಯಪುರ-77,449, ಯಾದಗಿರಿ-50,545 ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿದೆ.

2011 ರ ಜನಗಣತಿ ಹಾಗೂ ಇಲ್ಲಿಯವರೆಗೆ ನಡೆದಿರುವ ಸಮೀಕ್ಷೆಯಲ್ಲಿ ಶೇ 43 ರಷ್ಟು ಪರಿಶಿಷ್ಟ ಜಾತಿಯ ಸಮುದಾಯದವರು ಆದಿ ಆಂಧ್ರ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಎಂದು ಬರೆಸಿದ್ದರು. ಈ ಮೂರು ಗುಂಪುಗಳಲ್ಲಿ ಅನೇಕ ಮೂಲ ಜಾತಿಗಳು ಸೇರಿಕೊಂಡಿರುವುದರಿಂದ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ಉಪ ವರ್ಗೀಕರಣ ಅಗತ್ಯವಾಗಿತ್ತು.

ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕಾಗಿ ಹೊಸ ಸಮೀಕ್ಷೆ ನಡೆಸಲು ಮಾ.27 ರಂದು ನ್ಯಾ. ನಾಗಮೋಹನದಾಸ್ ಆಯೋಗದ ಮಧ್ಯಂತರ ವರದಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಪರಿಶಿಷ್ಟ ಜಾತಿಯ ಮೂಲಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ ಹಾಗೂ ಅವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಸೌಲಭ್ಯಗಳು ಮುಂತಾದ ಸಾಮಾನ್ಯ ಹಾಗೂ ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ.

ಹಲವು ಜಿಲ್ಲೆಗಳಲ್ಲಿ ಸರ್ವರ್‌ ಸಮಸ್ಯೆ

ಆಯೋಗ ಅಭಿವೃದ್ದಿಪಡಿಸಿರುವ ಎಪಿಕೆ ತಂತ್ರಾಂಶದಲ್ಲಿ ಸರ್ವರ್‌ ಸಮಸ್ಯೆ ಸಾಮಾನ್ಯವಾಗಿದೆ. ಸಮೀಕ್ಷೆ ಆರಂಭವಾದ ದಿನದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮೊದಲ ದಿನ ಕಲಬುರಗಿಯಲ್ಲಿ ಸರ್ವರ್‌ ಸಮಸ್ಯೆ ಎದುರಾಗಿತ್ತು. ನಂತರದ ದಿನಗಳಲ್ಲಿ ರಾಯಚೂರು, ಚಿತ್ರದುರ್ಗ, ಮೈಸೂರು, ತುಮಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಂತ್ರಾಂಶದ ಸರ್ವರ್‌ ಸಮಸ್ಯೆ ಮುಂದುವರಿದಿತ್ತು. ಇದರಿಂದ ಗಣತಿದಾರರು ಸೂಕ್ತ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ತ್ರಾಸ ಅನುಭವಿಸುತ್ತಿದ್ದಾರೆ.

ಕರಾವಳಿ ಹಾಗೂ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಈ ಸಮಸ್ಯೆ ವಿಪರೀತವಾಗಿದೆ.

ಗಣತಿದಾರರ ಸರ್ಕಸ್

ಮಲೆನಾಡಿನ ಪ್ರದೇಶಗಳಲ್ಲಿ ನೆಟ್ಸಿ ವರ್ಕ್ಗು ಸಮಸ್ಯೆಯಿಂದ ಗಣತಿದಾರರು ಜನರನ್ನು ನೆಟ್ವ ವರ್ಕ್ ಸಿಗುವ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಾಹಿತಿ ಅಪ್‌ಲೋಡ್‌ ಮಾಡುವ ಸರ್ಕಸ್ ನಡೆಸುತ್ತಿದ್ದಾರೆ. ಕೆಲವೊಮ್ಮೆ ಎಪಿಕೆ ತಂತ್ರಾಂಶದಲ್ಲಿ ಸರ್ವರ್‌ ಸಮಸ್ಯೆ ಉಂಟಾದರೆ, ಇನ್ನೊಮ್ಮೆ ದಿನಕ್ಕೆ ಕನಿಷ್ಠ ಹತ್ತು ಕುಟುಂಬಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೆಸರೇಳಲಿಚ್ಛಿಸದ ಗಣತಿದಾರರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

Read More
Next Story