
ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ
ಒಳ ಮೀಸಲಾತಿ ಜಾರಿಯಲ್ಲಿ ಅಲೆಮಾರಿಗಳಿಗೆ ಅನ್ಯಾಯ: ಸಿ.ಟಿ. ರವಿ ವಾಗ್ದಾಳಿ
ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಬಿಜೆಪಿ ಸರ್ಕಾರ ಶೇ. 4.5 ಮೀಸಲಾತಿ ನೀಡಿತ್ತು. ಆದರೆ ಅದನ್ನು ಸರ್ಕಾರ ಕಡಿತಗೊಳಿಸಿದೆ. ಅಲೆಮಾರಿ ಜನಾಂಗದವರಿಗೆ ಶೇ.1 ಮೀಸಲಾತಿ ಕೊಡಲಾಗಿತ್ತು ಎಂದು ಸಿ.ಟಿ. ರವಿ ತಿಳಿಸಿದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿ ನೀತಿಯು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರವಾಗಿ ಟೀಕಿಸಿದ್ದಾರೆ. ಕೆಲವೇ ನಾಯಕರನ್ನು ತೃಪ್ತಿಪಡಿಸಲು ಸರ್ಕಾರವು ಯಾವುದೇ ವರದಿಗಳನ್ನು ಪರಿಗಣಿಸದೆ, ಸಂವಿಧಾನ ಬಾಹಿರವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಆರೋಪಿಸಿದರು.
ಶುಕ್ರವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ನೀತಿಯ ವಿರುದ್ಧ ಹರಿಹಾಯ್ದರು.
ವರದಿಗಳನ್ನು ಕಡೆಗಣಿಸಿದ ಸರ್ಕಾರ
ಒಳ ಮೀಸಲಾತಿಯ ಮೂಲ ಉದ್ದೇಶವೇ ಸೌಲಭ್ಯ, ವಿದ್ಯೆ, ಸಂಪತ್ತು ಮತ್ತು ನೌಕರಿಯಿಂದ ವಂಚಿತರಾದ ಜನಾಂಗಕ್ಕೆ ಅವಕಾಶ ನೀಡುವುದು. ಆದರೆ, ಸರ್ಕಾರವು ಬಲಾಢ್ಯ ಸಮುದಾಯಗಳ ಜೊತೆ ಅಲೆಮಾರಿಗಳನ್ನು ಸೇರಿಸುವ ಮೂಲಕ ಸಾಮಾಜಿಕ ಅನ್ಯಾಯ ಮಾಡಿದೆ ಎಂದು ಸಿ.ಟಿ. ರವಿ ದೂರಿದರು. "ನ್ಯಾಯಮೂರ್ತಿ ಸದಾಶಿವ, ನ್ಯಾಯಮೂರ್ತಿ ನಾಗಮೋಹನ್ದಾಸ್ ಹಾಗೂ ಮಾಜಿ ಸಚಿವ ಮಾಧುಸ್ವಾಮಿ ಅವರ ವರದಿಗಳನ್ನೂ ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ," ಎಂದು ಅವರು ಟೀಕಿಸಿದರು.
'ಮಾರ್ಜಾಲ ನ್ಯಾಯ', ಇತಿಹಾಸ ಕ್ಷಮಿಸಲ್ಲ
"ನಮ್ಮ ಬಿಜೆಪಿ ಸರ್ಕಾರವು ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ. 4.5ರಷ್ಟು ಮತ್ತು ಅಲೆಮಾರಿ ಜನಾಂಗದವರಿಗೆ ಶೇ.1ರಷ್ಟು ಮೀಸಲಾತಿಯನ್ನು ನ್ಯಾಯಯುತವಾಗಿ ನೀಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಕಡಿತಗೊಳಿಸಿ ಅನ್ಯಾಯ ಮಾಡಿದೆ. ಇದು 'ಮಾರ್ಜಾಲ ನ್ಯಾಯ'ದ ಮೂಲಕ ಸಂವಿಧಾನಕ್ಕೆ ವಿರುದ್ಧವಾಗಿ ತೆಗೆದುಕೊಂಡ ಕ್ರಮ. ಇದನ್ನು ತಕ್ಷಣ ಸರಿಪಡಿಸಿ ಧ್ವನಿ ಇಲ್ಲದ ಅಲೆಮಾರಿ ಜನಾಂಗದವರಿಗೆ ಧ್ವನಿ ಕೊಡಬೇಕು, ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ," ಎಂದು ಸಿ.ಟಿ. ರವಿ ಎಚ್ಚರಿಸಿದರು.
2 ಗಂಟೆಗಳ ಸಭೆಯಲ್ಲಿ ನಿರ್ಧಾರ, ಇವರೇನು ಸರ್ವಜ್ಞರೇ?
ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸಿದ ಅವರು, "ಕೇವಲ ಎರಡು ಗಂಟೆಗಳ ಸಭೆಯಲ್ಲಿ ಯಾವ ಆಧಾರದ ಮೇಲೆ ಮೂರು ವರ್ಗಗಳಾಗಿ ವಿಂಗಡಿಸಿದರು? ಜನಗಣತಿ, ಜಾತಿಗಣತಿ ಅಥವಾ ಸಾಮಾಜಿಕ-ಆರ್ಥಿಕ ಸಮೀಕ್ಷೆಯಂತಹ ಯಾವುದೇ ವೈಜ್ಞಾನಿಕ ಆಧಾರವಿದೆಯೇ? ಇವರೇನು ಸರ್ವಜ್ಞರೇ?" ಎಂದು ಖಾರವಾಗಿ ಪ್ರಶ್ನಿಸಿದರು.
ಕೆಲವರನ್ನು ತೃಪ್ತಿಪಡಿಸಲು ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ
"ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ಮಾಜಿ ಶಾಸಕ ಆಂಜನೇಯ ಅವರನ್ನು ತೃಪ್ತಿಪಡಿಸಿದರೆ ಸಾಕೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೀತಿಯು ಸಾಮಾಜಿಕ ನ್ಯಾಯ ನೀಡುವುದಾಗಿರಲಿಲ್ಲ, ಬದಲಿಗೆ ಕೆಲವರನ್ನು ಓಲೈಸುವುದಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ," ಎಂದು ಸಿ.ಟಿ. ರವಿ ಆರೋಪಿಸಿದರು. "2012ರಲ್ಲಿ ನ್ಯಾ. ಸದಾಶಿವ ಆಯೋಗ ವರದಿ ನೀಡಿದ್ದರೂ, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅದನ್ನು ಜಾರಿ ಮಾಡಲಿಲ್ಲ. ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿ 13 ತಿಂಗಳಾದರೂ, ಅದರ ಆಶಯವನ್ನೂ ಮೂಲೆಗುಂಪು ಮಾಡಿದ್ದಾರೆ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.