
ಸಾಂದರ್ಭಿಕ ಚಿತ್ರ
ಒಳ ಮೀಸಲಾತಿ ಜಾರಿಯ ಕಗ್ಗಂಟು: ತಂತ್ರಾಂಶವಿಲ್ಲದೆ ತತ್ತರಿಸಿದ ಪರಿಶಿಷ್ಟ ಸಮುದಾಯ
ತಂತ್ರಾಂಶ ಅಭಿವೃದ್ಧಿ ಪಡಿಸದೆ ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರಿಶಿಷ್ಟ ಸಮುದಾಯದ ಜನರು ಸರ್ಕಾರದಿಂದ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಐತಿಹಾಸಿಕ ಒಳ ಮೀಸಲಾತಿಯನ್ನು ಘೋಷಿಸಿ ಆದೇಶ ಹೊರಡಿಸಿದ್ದರೂ, ಅದರ ಅನುಷ್ಠಾನದ ಹಾದಿ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಮೀಸಲಾತಿ ಹಂಚಿಕೆಯ ಗೊಂದಲಗಳು, ಜಾತಿ ಪ್ರಮಾಣಪತ್ರ ವಿತರಣೆಗೆ ತಂತ್ರಾಂಶದ ಕೊರತೆ ಮತ್ತು ರೋಸ್ಟರ್ ವ್ಯವಸ್ಥೆಯ ಅಸ್ಪಷ್ಟತೆಯಿಂದಾಗಿ, ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಳಂಬ ನೀತಿಯು ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಮತ್ತು ಸರ್ಕಾರಿ ನೌಕರರಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕವನ್ನು ಸೃಷ್ಟಿಸಿದೆ.
ಒಳ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಉದ್ದೇಶದಿಂದ, ಕಳೆದ ಒಂದು ವರ್ಷದಿಂದ ಸರ್ಕಾರವು ಯಾವುದೇ ಪ್ರಮುಖ ನೇಮಕಾತಿಗಳನ್ನು ನಡೆಸಿಲ್ಲ. ಆದರೆ, ಮೀಸಲಾತಿ ಹಂಚಿಕೆಯ ನಂತರವೂ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಬೇಕಾದ ತಂತ್ರಾಂಶವನ್ನೇ (Software) ಇದುವರೆಗೂ ಅಭಿವೃದ್ಧಿಪಡಿಸಿಲ್ಲ. ಇದರಿಂದಾಗಿ, ಪರಿಶಿಷ್ಟ ಸಮುದಾಯದ ಜನರು ಶಿಕ್ಷಣ, ಉದ್ಯೋಗ ಮತ್ತು ಸರ್ಕಾರದ ಇತರ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಮುದಾಯದ ನಾಯಕರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸರ್ಕಾರ ಕೇವಲ ಆದೇಶ ಹೊರಡಿಸಿ ಕೈತೊಳೆದುಕೊಂಡಿದೆ. ಆದರೆ, ಅದರ ಅನುಷ್ಠಾನಕ್ಕೆ ಬೇಕಾದ ಮೂಲಸೌಕರ್ಯವನ್ನು ಒದಗಿಸುವಲ್ಲಿ ವಿಫಲವಾಗಿದೆ. ಈ ವಿಳಂಬದಿಂದಾಗಿ ಸಮುದಾಯದ ಉಪ-ಪಂಗಡಗಳ ನಡುವೆ ಮತ್ತಷ್ಟು ಗೊಂದಲ ಮತ್ತು ಮನಸ್ತಾಪಗಳು ಸೃಷ್ಟಿಯಾಗುತ್ತಿವೆ" ಎಂದು ದಲಿತ ಸಂಘಟನೆಗಳು ಆರೋಪಿಸಿವೆ.
ರೋಸ್ಟರ್ ಗೊಂದಲ ನಿವಾರಣೆಗೆ ಆಗ್ರಹ
ಎಸ್‌ಸಿ ಹಾಗೂ ಎಸ್‌ಟಿ ನೌಕರರ ಸಂಘದ ಅಧ್ಯಕ್ಷರಾದ ಡಿ. ಚಂದ್ರಶೇಖರಯ್ಯ ಅವರು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡುತ್ತಾ, "ಸರ್ಕಾರ ಒಳ ಮೀಸಲಾತಿ ಘೋಷಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ಮೀಸಲಾತಿಯ ಅನ್ವಯ ನಡೆದ ನೇಮಕಾತಿಗಳಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತಡೆಯಾಜ್ಞೆ ನೀಡಿದೆ. ಸರ್ಕಾರ ಇದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇಲ್ಲಿ ಪ್ರಮುಖವಾಗಿ, ತಂತ್ರಾಂಶ ಅಭಿವೃದ್ಧಿಪಡಿಸುವ ಮೊದಲು, ಸರ್ಕಾರ ರೋಸ್ಟರ್ ವ್ಯವಸ್ಥೆಯ ಗೊಂದಲವನ್ನು ನಿವಾರಿಸಿ, ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಯಾವುದೇ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ, ಹುದ್ದೆಗಳನ್ನು ಮೀಸಲಾತಿ ನಿಯಮದಂತೆ ವೈಜ್ಞಾನಿಕವಾಗಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ, ಯಾವುದೋ ಒಂದು ವರ್ಗಕ್ಕೆ ಮಾತ್ರ ಅನುಕೂಲವಾಗುವ ಅಪಾಯವಿದೆ. ಆದ್ದರಿಂದ, ಸರ್ಕಾರವು ಶೀಘ್ರವಾಗಿ ರೋಸ್ಟರ್ ಗೊಂದಲವನ್ನು ಬಗೆಹರಿಸಿ, ಹೊಸ ತಂತ್ರಾಂಶವನ್ನು ರೂಪಿಸಿ, ಜಾತಿ ಪ್ರಮಾಣಪತ್ರಗಳನ್ನು ವಿತರಿಸಬೇಕು. ಇದರಿಂದ ಶಾಲಾ-ಕಾಲೇಜು ಪ್ರವೇಶ, ನೇಮಕಾತಿ ಮತ್ತು ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಮುದಾಯಕ್ಕೆ ಆಗುತ್ತಿರುವ ತೊಂದರೆ ನಿವಾರಣೆಯಾಗುತ್ತದೆ" ಎಂದು ಅವರು ಹೇಳಿದರು.
ನಿರುದ್ಯೋಗದ ಸುಳಿಯಲ್ಲಿ ಯುವಕರು
ಒಳ ಮೀಸಲಾತಿ ಪ್ರಕ್ರಿಯೆಯಿಂದಾಗಿ ನೇಮಕಾತಿ ಮತ್ತು ಬಡ್ತಿಗಳಿಗೆ ತಡೆ ನೀಡಿದ್ದ ಸರ್ಕಾರ, ಮೀಸಲಾತಿ ಘೋಷಣೆಯ ನಂತರ ನೇಮಕಾತಿಗಳಿಗೆ ಚಾಲನೆ ನೀಡಿತ್ತು. ಆದರೆ, ಸರ್ಕಾರದ ಗೊಂದಲದ ನೀತಿಗಳಿಂದಾಗಿ ಹೊಸ ಅಧಿಸೂಚನೆಗಳನ್ನು ಹೊರಡಿಸಲು ಅಥವಾ ನೇಮಕಾತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
"ಕೋವಿಡ್ ಮತ್ತು ಒಳ ಮೀಸಲಾತಿ ಜಾರಿ ಪ್ರಕ್ರಿಯೆಯಿಂದ ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ. ಈಗ ಮತ್ತೆ ರೋಸ್ಟರ್ ಗೊಂದಲದಿಂದಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯ ತ್ರಿಶಂಕು ಸ್ಥಿತಿಯಲ್ಲಿದೆ. ಒಂದು ವೇಳೆ ನೇಮಕಾತಿಗಳು ಆರಂಭವಾದರೂ, ಜಾತಿ ಪ್ರಮಾಣಪತ್ರ ಸಿಗದೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್ ಮರೂರು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಂತ್ರಾಂಶ ಜಾರಿಗೆ ಸರ್ಕಾರದ ಸಿದ್ಧತೆ?
ಈ ಎಲ್ಲಾ ಗೊಂದಲಗಳ ನಡುವೆ, ಅಟಲ್ ಜೀ ಜನಸ್ನೇಹಿ ಕೇಂದ್ರದ ತಂಡವು ರಾಜ್ಯದ ಎಲ್ಲಾ ತಹಶೀಲ್ದಾರ್‌ಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ತಂತ್ರಾಂಶ ಬಳಕೆ ಮತ್ತು ಪ್ರಮಾಣಪತ್ರ ವಿತರಣೆಯ ಬಗ್ಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (NIC) ತಂತ್ರಾಂಶವು ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು.
ಏನಿದು ಒಳ ಮೀಸಲಾತಿ ಗೊಂದಲ?
ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಕುರಿತು ಅಧ್ಯಯನ ಮಾಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಆಯೋಗವು ವೈಜ್ಞಾನಿಕ ಸಮೀಕ್ಷೆ ನಡೆಸಿ, ತನ್ನ ವರದಿಯಲ್ಲಿ ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 5, ಸ್ಪೃಶ್ಯ ಸಮುದಾಯಕ್ಕೆ ಶೇ. 4, ಮತ್ತು ಅಲೆಮಾರಿ ಸಮುದಾಯಗಳಿಗೆ ಶೇ. 1 ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು.
ಆದರೆ, ರಾಜ್ಯ ಸರ್ಕಾರವು ಸಚಿವ ಸಂಪುಟದ ನಿರ್ಣಯದಂತೆ ಈ ಶಿಫಾರಸನ್ನು ಮಾರ್ಪಾಡು ಮಾಡಿ, ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 6, ಹಾಗೂ ಸ್ಪೃಶ್ಯ ಮತ್ತು ಅಲೆಮಾರಿ ಸಮುದಾಯಗಳನ್ನು ಒಟ್ಟಾಗಿಸಿ ಶೇ. 5 ರಷ್ಟು ಮೀಸಲಾತಿಯನ್ನು ನೀಡಿ ಆದೇಶ ಹೊರಡಿಸಿತು.
ಸರ್ಕಾರದ ಈ ನಿರ್ಧಾರದಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಅಲೆಮಾರಿ ಸಮುದಾಯದ ಮುಖಂಡರು ಹೈಕೋರ್ಟ್ ಮೊರೆ ಹೋಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಸರ್ಕಾರದ ಮೀಸಲಾತಿ ಹಂಚಿಕೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಂತಿಮ ತೀರ್ಪು ಬಂದ ನಂತರವೇ ಮೀಸಲಾತಿಯ ಅಂತಿಮ ಸ್ವರೂಪ ನಿರ್ಧಾರವಾಗಲಿದ್ದು, ಈ ಕಾನೂನಾತ್ಮಕ ಅನಿಶ್ಚಿತತೆಯು ತಂತ್ರಾಂಶ ಅಭಿವೃದ್ಧಿಗೆ ಮತ್ತಷ್ಟು ಹಿನ್ನಡೆಯನ್ನುಂಟುಮಾಡಿದೆ.

