The Federal Interview | ಒಳ ಮೀಸಲಾತಿ ಸಮೀಕ್ಷೆ :  ಸುಳ್ಳು ಮಾಹಿತಿ ಕೊಟ್ಟರೆ, ಕ್ರೈಸ್ತರಾಗಿ ಮತಾಂತರವಾದರೆ ಮೀಸಲಾತಿ ಇಲ್ಲ; ನ್ಯಾ. ನಾಗಮೋಹನ್‌ ದಾಸ್‌
x
ಜಸ್ಟೀಸ್‌ ನಾಗಮೋಹನ್‌ ದಾಸ್‌

The Federal Interview | ಒಳ ಮೀಸಲಾತಿ ಸಮೀಕ್ಷೆ : ಸುಳ್ಳು ಮಾಹಿತಿ ಕೊಟ್ಟರೆ, ಕ್ರೈಸ್ತರಾಗಿ ಮತಾಂತರವಾದರೆ ಮೀಸಲಾತಿ ಇಲ್ಲ; ನ್ಯಾ. ನಾಗಮೋಹನ್‌ ದಾಸ್‌

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಆಗಿರುವ ಪ್ರಗತಿ, ನಿಖರ ದತ್ತಾಂಶ ಸಂಗ್ರಹಿಸಲು ಕೈಗೊಂಡ ಕ್ರಮಗಳು, ಸಮೀಕ್ಷೆಗೆ ಕೇಳಿಬಂದಿರುವ ಅಪಸ್ವರಗಳಿಗೆ ನ್ಯಾ. ನಾಗ ಮೋಹನ್ ದಾಸ್ ಅವರೇ 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.


ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ಭರದಿಂದ ಸಾಗುತ್ತಿದೆ. ನಿಖರ ಸಮೀಕ್ಷೆಗೆ ಒತ್ತು ನೀಡಿರುವ ನ್ಯಾ. ನಾಗಮೋಹನ್‌ ದಾಸ್‌ ನೇತೃತ್ವದ ಏಕಸದಸ್ಯ ಆಯೋಗವು ವೈಜ್ಞಾನಿಕ ಹಾಗೂ ಕರಾರುವಾಕ್‌ ದತ್ತಾಂಶ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದೆ.

ಬೆಂಗಳೂರಿನಲ್ಲಿ ಹಲವೆಡೆ ಒಳ ಮೀಸಲಾತಿ ಸಮೀಕ್ಷೆಗೆ ಕೆಲವರು ಅಡ್ಡಿಪಡಿಸುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಆಯೋಗ ಖಡಕ್‌ ಸಂದೇಶವನ್ನೂ ರವಾನಿಸಿದೆ. ಸಮೀಕ್ಷೆಗೆ ಅಡ್ಡಿಪಡಿಸಿದರೆ ಅಂತವರ ಮನೆಗಳಿಗೆ ವಿದ್ಯುತ್‌, ನೀರು ಏಕೆ ಸ್ಥಗಿತಗೊಳಿಸಬಾರದು ಎಂದು ನೋಟಿಸ್ ನೀಡಿದೆ.

ಇನ್ನು ಸಮೀಕ್ಷೆಯಲ್ಲಿ ʼಎಡ-ಬಲʼ ಶಕ್ತಿ ಪ್ರದರ್ಶನದ ಉಮೇದಿನಲ್ಲಿ ಸುಳ್ಳು ಮಾಹಿತಿ ನೀಡಿದರೆ ಮೀಸಲಾತಿ ನೀಡದಿರಲು ನಿರ್ಧರಿಸಿದೆ.

ಆಯೋಗ ಸಿದ್ಧಪಡಿಸಿರುವ ತಂತ್ರಾಂಶವನ್ನು ಜಾತಿವಾರು ಜನಗಣತಿಗೂ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಒಳ ಮೀಸಲಾತಿ ಸಮೀಕ್ಷೆಯ ನಿಖರ ಹಾಗೂ ವೈಜ್ಞಾನಿಕ ದತ್ತಾಂಶ ಸಂಗ್ರಹಕ್ಕೆ ಸಾಕ್ಷಿಯಾಗಿದೆ ಎಂಬುದು ನ್ಯಾ. ನಾಗಮೋಹನ್‌ದಾಸ್‌ ಅವರ ಹೆಗ್ಗಳಿಕೆಯ ನುಡಿಗಳು.

ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಒಳ ಮೀಸಲಾತಿ ಸಮೀಕ್ಷೆಯ ಪ್ರಗತಿ, ಕರಾರುವಾಕ್‌ ಸಮೀಕ್ಷೆಗೆ ಕೈಗೊಂಡಿರುವ ಕ್ರಮಗಳು, ಸಮೀಕ್ಷೆಗೆ ಎದ್ದಿರುವ ಅಪಸ್ವರಗಳ ಕುರಿತು ನ್ಯಾ. ನಾಗಮೋಹನ್‌ದಾಸ್‌ ಅವರು ವಿವರಿಸಿದ್ದಾರೆ. ಅವರ ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

ಒಳ ಮೀಸಲಾತಿ ಸಮೀಕ್ಷೆ ಯಾವ ಹಂತದಲ್ಲಿದೆ?

-ಒಳ ಮೀಸಲಾತಿ ಸಮೀಕ್ಷೆ ಚುರುಕಾಗಿ ನಡೆಯುತ್ತಿದೆ. ಮೇ 16 ಸಂಜೆಯ ವೇಳೆಗೆ 20 ಲಕ್ಷ ಪರಿಶಿಷ್ಟ ಜಾತಿಯ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಈಗ ಶೇ 75 ರಷ್ಟು ಪ್ರಗತಿಯಾಗಿದೆ. ನೂರಕ್ಕೆ ನೂರರಷ್ಟು ಸಮೀಕ್ಷೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು.

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಎಷ್ಟು ಸಿಬ್ಬಂದಿ ಪಾಲ್ಗೊಂಡಿದ್ದಾರೆ, ನಿಖರ ಸಮೀಕ್ಷೆಗೆ ನೀಡಿರುವ ಸೂಚನೆಗಳೇನು?

-ಸಮೀಕ್ಷೆಗೆ ಒಟ್ಟು 59 ಸಾವಿರ ಶಿಕ್ಷಕರನ್ನು ಗಣತಿಗೆ ನಿಯೋಜಿಸಲಾಗಿದೆ. ಗಣತಿದಾರರು ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಿದ್ದಾರೆ. ಜೊತೆಗೆ ಶೇ 10 ರಷ್ಟು ಹೆಚ್ಚುವರಿ ಸಿಬ್ಬಂದಿಯೂ ಇರಲಿದ್ದಾರೆ. ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಅಥವಾ ಗಣತಿಗೆ ಗೈರಾದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಒಂದೇ ಒಂದು ಪರಿಶಿಷ್ಟ ಜಾತಿಯ ಕುಟುಂಬವೂ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.

ಗಣತಿದಾರರು ಪ್ರತಿ ಮನೆಗೂ ಹೋಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡುವುದು ಹೇಗೆ?

-ಗಣತಿದಾರರು ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸುವಾಗ ಕುಟುಂಬದ ಮುಖ್ಯಸ್ಥರ ಅಥವಾ ಸದಸ್ಯರ ಭಾವಚಿತ್ರ ತೆಗೆದುಕೊಳ್ಳಲಾಗುವುದು. ಮಾಹಿತಿ ಸಂಗ್ರಹವಾದ ಬಳಿಕ ಮನೆಯವರಿಂದ ದೃಡೀಕರಣ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗುವುದು. ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಲಾಗುವುದು. ಒಂದು ವೇಳೆ ಯಾರಾದರೂ ಗಣತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಮನೆಗಳು ಬಿಟ್ಟು ಹೋಗಿರುವ ಕುರಿತು ಪ್ರಸ್ತಾಪಿಸಿದಾಗ ನಮ್ಮಲ್ಲಿ ನಮೂದಾಗಿರುವ ದಾಖಲೆಗಳನ್ನು ನೀಡುತ್ತೇವೆ. ಇದು ಶೇ 100 ರಷ್ಟು ನಿಖರತೆಗೆ ಸಾಕ್ಷಿಯಾಗಿರಲಿದೆ.

ಕೇಂದ್ರ ಸರ್ಕಾರ ನೀವು ಸಮೀಕ್ಷೆಗೆ ಬಳಸಿರುವ ಆ್ಯಪ್ ಬಗ್ಗೆ ಮಾಹಿತಿ ಕೇಳಿದೆಯಾ?

-ಒಳ ಮೀಸಲಾತಿ ಸಮೀಕ್ಷೆಗೆ ಬಳಸಿರುವ ಆ್ಯಪ್ ಬಗ್ಗೆ ಕೇಂದ್ರ ಸರ್ಕಾರ ಪತ್ರ ಬರೆದು ಮಾಹಿತಿ ಕೇಳಿದೆ. ಸಮೀಕ್ಷೆಗೆ ಎಲೆಕ್ಟ್ರಾನಿಕ್ ಆ್ಯಪ್ ಹೇಗೆ ತಯಾರಿ ಮಾಡಲಾಗಿದೆ. ಇದರ ವೈಶಿಷ್ಟ್ಯಗಳೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿತ್ತು. ಅದನ್ನು ನೀಡಲಾಗಿದೆ.

ಪರಿಶಿಷ್ಟ ಜಾತಿಯ ಸಮೀಕ್ಷೆಯ ಉಪಜಾತಿಯ ಗೊಂದಲ ಏನು, ಹೇಗೆ ಪರಿಹರಿಸುವಿರಿ?

- ಉಪಜಾತಿಗಳ ಗಣತಿಯಲ್ಲಿ ಯಾವುದೇ ಗೊಂದಲ ಇಲ್ಲ. ಸಮೀಕ್ಷೆಯಲ್ಲಿ ಜಾತಿಸೂಚಕದ ಮುಂದೆ ಉಪ ಅಥವಾ ಮೂಲಜಾತಿ ಬರೆಸಬೇಕು. ಜಾತಿಸೂಚಕದ ಮುಂದೆ ನಮೂದಿಸಿರುವ ಉಪಜಾತಿಯು ಅ ಮೀಸಲಾತಿಯ ಖಾತೆಗೆ ಹೋಗುತ್ತದೆ. ಉದಾಹರಣೆಗೆ ಉಪಜಾತಿ ಭೋವಿ ಅಂತಾ ಬರೆಸಿದರೆ ಭೋವಿ ಖಾತೆಗೆ ಮೀಸಲಾತಿ ಹೋಗುತ್ತದೆ. ಇದರಲ್ಲಿ ಅನುಮಾನ, ಆತಂಕ ಬೇಡ.

ಸುಳ್ಳು ಮಾಹಿತಿ, ಸುಳ್ಳು ದಾಖಲೆ ‌ನೀಡಿದರೆ ಏನಾಗಲಿದೆ?

ಒಳ ಮೀಸಲಾತಿ ಸಮೀಕ್ಷೆಯಲ್ಲಿ ಸುಳ್ಳುದಾಖಲೆ , ಮಾಹಿತಿ ನೀಡಿದರೆ ಪರಿಶಿಷ್ಟ ಜಾತಿ ಆಗುವುದಿಲ್ಲ. ಪರಿಶಿಷ್ಟ ಜಾತಿಯ ಸವಲತ್ತು ಪಡೆಯಬೇಕಾದರೆ ಸಮಗ್ರ ದಾಖಲೆ ನೀಡಬೇಕು. ಒಂದು ವೇಳೆ ಸುಳ್ಳು ಮಾಹಿತಿ ನೀಡಿದರೆ ಅಂತವರಿಗೆ ಮೀಸಲಾತಿ ಸಿಗುವುದಿಲ್ಲ.

ಸಮೀಕ್ಷೆಗೆ ಕೆಲವರು ಅಡ್ಡಿಪಡಿಸುತ್ತಿರುವ ಮಾಹಿತಿ ಇದೆ, ಕ್ರಮವೇನು?

ವಿಶೇಷವಾಗಿ ಬೆಂಗಳೂರಿನಲ್ಲಿ ಕೆಲವು ಪ್ಲಾಟ್ ಗಳಲ್ಲಿ ಸಮೀಕ್ಷೆಗೆ ಹೋದಾಗ ಅಡ್ಡಿಪಡಿಸಿ ಪ್ಲಾಟ್ ಒಳಗಡೆ ಬಿಡದಿರುವ ಕುರಿತು ದೂರುಗಳು ಬಂದಿವೆ. ಈ ರೀತಿ ಅಡ್ಡಪಡಿಸುವ ಅಪಾರ್ಟ್ಮೆಂಟ್ ಗಳಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗಿದೆ‌. ಅಡ್ಡಿಪಡಿಸಿದರೆ ವಿದ್ಯುತ್ ಹಾಗೂ ನೀರನ್ನು ಯಾಕೆ ಕಡಿತ ಮಾಡಬಾರದು ಎಂದು ನೋಟಿಸ್ ನೀಡಲಾಗಿದೆ.

ಜಯಪ್ರಕಾಶ್ ಹೆಗ್ಡೆ ವರದಿಗೂ ನೀವು ಕೊಡುವ ವರದಿಗೂ ಏನಾದರೂ ಅಂಕಿ ಅಂಶ ವ್ಯತ್ಯಾಸ ಆಗಲಿದೆಯಾ?

ಹಿಂದುಳಿದ ವರ್ಗಗಳ ಆಯೋಗದ ವರದಿ ನಮಗೆ ಇನ್ನೂ ತಲುಪಿಲ್ಲ. 2015 ರಲ್ಲಿ ಆಯೋಗ ಸಮೀಕ್ಷೆ ನಡೆಸಿದೆ. ನಾವು 2025 ರಲ್ಲಿ ಸಮೀಕ್ಷೆ ನಡೆಸುತ್ತಿದ್ದೇವೆ. ಹಾಗಾಗಿ ನಮ್ಮ ಅಂಕಿ ಅಂಶ ಮುಖ್ಯವಾಗಲಿದೆ.

ಒಳಮೀಸಲಾತಿ ವರದಿ ಯಾವಾಗ ಸಲ್ಲಿಕೆಯಾಗಲಿದೆ. ಸರ್ಕಾರಿ ನೇಮಕಾತಿಗಳಿಗೆ ಒಳಮೀಸಲಾತಿ ಸಮೀಕ್ಷೆ ಅಡ್ಡಿಯಾಗಿದೆಯೇ?

ಮೇ ತಿಂಗಳ ಅಂತ್ಯಕ್ಕೆ ಸಮೀಕ್ಷೆ ಮುಗಿಯಲಿದೆ. ನಂತರ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಗುವುದು. ಇದೆನ್ನೆಲ್ಲಾ ಕ್ರೋಢಿಕರಿಸಿ ವಿಳಂಬ ಆಗದ ರೀತಿಯಲ್ಲಿ ಅತ್ಯಂತ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು. ಹೊಸ ನೇಮಕಾತಿಗಳಿಗೆ ಒಳ ಮೀಸಲಾತಿ ಸಮೀಕ್ಷೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಶೀಘ್ರದಲ್ಲೇ ವರದಿ ಸಲ್ಲಿಸುವುದರಿಂದ ಯಾರೂ ಆತಂಕಪಡುವ ಅಗತ್ಯ ಇಲ್ಲ.

ಪರಿಶಿಷ್ಟ ಜಾತಿಯಿಂದ ಬೇರೆ ಧರ್ಮಕ್ಕೆ ಮತಾಂತರ ಆಗಿದ್ದರೆ ಅವರ ಪರಿಸ್ಥಿತಿ ಏನು. ಅವರು ಮಾಹಿತಿ ಕೊಡಬಹುದಾ?

ಬೌದ್ದ ಹಾಗೂ ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದರೆ ಮೀಸಲಾತಿ ಸೌಲಭ್ಯ ಕೊಡುವ ಕಾನೂನು ಇದೆ. ಆದರೆ, ಇಸ್ಲಾಂ, ಕ್ರೈಸ್ತ ಹಾಗೂ ಪಾರ್ಸಿ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಕೊಡಲು ಬರುವುದಿಲ್ಲ. ಮತಾಂತರ ಆಗಿರುವವರಿಗೂ ಮೀಸಲಾತಿ ಕೊಡಬೇಕು ಎನ್ನುವ ಒತ್ತಾಯ ಇದೆ. ಈ ಬಗ್ಗೆ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಜಸ್ಟೀಸ್ ಕೆ.ಜೆ ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗ ಅಧ್ಯಯನ ನಡೆಸುತ್ತಿದೆ.

ಒಳಮೀಸಲಾತಿ ಸಮೀಕ್ಷೆಯಲ್ಲಿ ಯಾವೆಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತಿದೆ?

ಪರಿಶಿಷ್ಟ ಜಾತಿಯ ಉಪಜಾತಿಗಳ ಜೊತೆಗೆ ಅವರ ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಪರಿಶಿಷ್ಟ ಜಾತಿಗೆ ಎಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಎನ್ನುವ ಮಾಹಿತಿ ಕಲೆಹಾಕಲಾಗುತ್ತದೆ. ಅಲ್ಲದೇ ಉಪಜಾತಿಗಳ ಸಮೀಕ್ಷೆ ಗೆ ಒಳ ಪಡುವ ಕುಟುಂಬಗಳ ಔದ್ಯೋಗಿಕ, ಶಿಕ್ಷಣ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ದ ಫೆಡರಲ್‌ ಕರ್ನಾಟಕ ನಡೆಸಿದ ವಿಶೇಷ ಸಂದರ್ಶನದ ಪೂರ್ಣಪಾಠ ಈ ವಿಡಿಯೋ ಲಿಂಕ್‌ನಲ್ಲಿ ಲಭ್ಯವಿದೆ.


Read More
Next Story