
ಒಳ ಮೀಸಲಾತಿ ವರದಿ ಅಂಗೀಕಾರ | ವಿಧಾನಸಭೆಯಲ್ಲಿ ಸಿಎಂ ಘೋಷಣೆ; ಚರ್ಚೆಗೆ ವಿಪಕ್ಷಗಳ ಪಟ್ಟು
ಸ್ಪೃಶ್ಯ ಜಾತಿಗಳ ಗುಂಪಿಗೆ ಪ್ರವರ್ಗ ʼಎʼ ನಲ್ಲಿದ್ದ 59 ಜಾತಿಗಳನ್ನು ತಾಂತ್ರಿಕ ಕಾರಣಗಳಿಂದ ಒಟ್ಟಿಗೆ ಸೇರಿಸಿ ಶೇ 5 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಅಲ್ಲದೇ ನಾಹಮೋಹನ್ ದಾಸ್ ರಚಿಸಿದ್ದ ಐದು ಪ್ರವರ್ಗಗಳನ್ನು ಎ,ಬಿ,ಸಿ ಎಂದು ವಿಭಾಗೀಕರಿಸಲಾಗಿದೆ.
ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿದ ವರದಿಯನ್ನು ಕೂಲಂಕಶವಾಗಿ ಪರಿಶೀಲಿಸಿ, ಕೆಲ ಮಾರ್ಪಾಡುಗಳೊಂದಿಗೆ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಒಳಮೀಸಲಾತಿ ವರದಿ ಜಾರಿ ಕುರಿತು ಅಧಿಕೃತ ಘೋಷಣೆ ಮಾಡಿದ ಅವರು, ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಸಂಬಂಧಿತ ಜಾತಿಗಳನ್ನು ಎಡಗೈ ಗುಂಪಿಗೆ ಸೇರಿದ್ದನ್ನು ಗಮನಿಸಿದ ಸಚಿವ ಸಂಪುಟವು ಈ ಜಾತಿಗಳನ್ನು ಬಲಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಿ ಬಲಗೈ ಗುಂಪಿಗೆ ಶೇ.6 ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದೆ. ಎಡಗೈ ಸಂಬಂಧಿತ ಸಮುದಾಯಗಳಿಗೆ ಶೇ 6 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಏಕ ಸದಸ್ಯ ಆಯೋಗ ಸೃಜಿಸಿದ್ದ ಪ್ರತ್ಯೇಕ ಗುಂಪಾದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳನ್ನು ಎಡಗೈ ಹಾಗೂ ಬಲಗೈ ಗುಂಪಿನ ಜೊತೆ ಸಮನಾಗಿ ಹಂಚಿಕೆ ಮಾಡಲು ಸಂಪುಟ ತೀರ್ಮಾನಿಸಿದೆ.
ಸ್ಪೃಶ್ಯ ಜಾತಿಗಳ ಗುಂಪಿಗೆ ಪ್ರವರ್ಗ ʼಎʼ ನಲ್ಲಿದ್ದ 59 ಜಾತಿಗಳನ್ನು ತಾಂತ್ರಿಕ ಕಾರಣಗಳಿಂದ ಒಟ್ಟಿಗೆ ಸೇರಿಸಿ ಶೇ 5 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಅಲ್ಲದೇ ನಾಹಮೋಹನ್ ದಾಸ್ ರಚಿಸಿದ್ದ ಐದು ಪ್ರವರ್ಗಗಳನ್ನು ಎ,ಬಿ,ಸಿ ಎಂದು ವಿಭಾಗೀಕರಿಸಲಾಗಿದೆ. ಎಲ್ಲರಿಗೂ ಶಿಕ್ಷಣ, ಉದ್ಯೋಗಾವಕಾಶ ಒದಗಿಸುವಲ್ಲಿ ಸರ್ಕಾರವು ಸಮಾನತೆ ಹಾಗೂ ನ್ಯಾಯ ಸಮ್ಮತತೆ ಖಚಿತಪಡಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ವರದಿ ಜಾರಿ ಮಾಡಲಾಗಿದೆ. ಪರಿಶಿಷ್ಟರ ಕಲ್ಯಾಣದ ದೃಷ್ಟಿಯಿಂದ ಕಾಲಕಾಲಕ್ಕೆ ವರದಿ ನೀಡಲು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚನೆಗೂ ತೀರ್ಮಾನಿಸಿದೆ.
ವರದಿ ಜಾರಿಯಾದ ತಕ್ಷಣ ನೇಮಕಾತಿ ಪ್ರಕ್ರಿಯೆ
ಒಳ ಮೀಸಲಾತಿ ವರದಿ ಜಾರಿಯ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಒಂದು ಬಾರಿ ವಯೋಮಿತಿ ಸಡಿಲಿಕೆಗೂ ತೀರ್ಮಾನಿಸಲಾಗಿದೆ. ಒಳ ಮೀಸಲಾತಿ ಹೋರಾಗಾರರ ಮೇಲೆ ದಾಖಲಾಗಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸರ್ಕಾರದ ಪ್ರಸಕ್ತ ತೀರ್ಮಾನದಲ್ಲಿ ಅಗತ್ಯ ಮಾರ್ಪಾಡು ಕಂಡು ಬಂದರೆ ರಾಷ್ಟ್ರೀಯ ಜನಗಣತಿ ವರದಿಯ ಅಂಕಿ ಅಂಶ ಆಧರಿಸಿ ಬದಲಾವಣೆ ಮಾಡಲು ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಉಪ ವರ್ಗೀಕರಣ ಮಾಡುವ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದೆ. ಸಮಾನತೆಯ ತತ್ವಕ್ಕೆ ಚ್ಯುತಿ ಬಾರದಂತೆ, ಮೂಲ ಆಶಯಕ್ಕೆ ದಕ್ಕೆಯಾಗದಂತೆ ಮೀಸಲಾತಿ ಕಲ್ಪಿಸಲು ಸೂಚಿಸಿದೆ. ಅದೇ ಆಧಾರದಲ್ಲಿ ನ್ಯಾ.ಎಚ್.ಎನ್ ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ವರದಿ ದತ್ತಾಂಶವನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಮೀಸಲಾತಿ ಹಂಚಿಕೆ ಮಾಡಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಆಯೋಗ ವರದಿ ಸಲ್ಲಿಸಿದೆ. ಒಟ್ಟು1,05,9,871 ಜನರ ದತ್ತಾಂಶ ಸಂಗ್ರಹಿಸಿದೆ. ಶೇ 93ರಷ್ಟು ಜನರು ಸಮೀಕ್ಷೆಗೆ ಒಳಗಾಗಿದ್ದಾರೆ. ಅಂತೂ ದಶಕಗಳ ಹೋರಾಟಕ್ಕೆ ನ್ಯಾಯ ಕಲ್ಪಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇವೆ ಎಂದರು.
ಚರ್ಚೆಗೆ ಪ್ರತಿಪಕ್ಷಗಳ ಆಗ್ರಹ
ಒಳ ಮೀಸಲಾತಿ ಕುರಿತು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಮೇಲೆ ಚರ್ಚೆಗೆ ಅವಕಾಶ ಕೊಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಇದು ಸಂಪೂರ್ಣ ರಾಜಕೀಯ ಹೇಳಿಕೆ. ಉತ್ತರ ಕೊಡಲೇಬೇಕು ಎಂದು ಪಟ್ಟು ಹಿಡಿದರು. ಆದರೆ, ಸಿಎಂ ಹೇಳಿಕೆ ಮೇಲೆ ಯಾವುದೇ ಚರ್ಚೆಗೆ ಅವಕಾಶ ನೀಡಲಾಗದು. ಕಾನೂನಿನಲ್ಲಿ ಅವಕಾಶವಿಲ್ಲ, ನಾಳೆ ಚರ್ಚೆ ಮಾಡಬಹುದು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಸ್ಪೀಕರ್ ಅವರು ಅನುಮತಿ ನೀಡಲು ನಿರಾಕರಿಸಿದಾಗ ಗದ್ದಲ ಉಂಟಾಯಿತು. ಅಷ್ಟರಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ನಲ್ಲಿ ಹೇಳಿಕೆ ನೀಡಲು ಹೊರಟರು. ಆಗ ವಿಪಕ್ಷಗಳ ಸದಸ್ಯರು ಪಲಾಯನ, ಪಲಾಯನ ಎಂದು ಕೂಗಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಕೋಲಾಹಲ ಸೃಷ್ಟಿಯಾಯಿತು.