
ಸೆಪ್ಟೆಂಬರ್ 10ರಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ.
ಒಳ ಮೀಸಲಾತಿ: ಸರ್ಕಾರದ ವಿರುದ್ಧ ಸೆ.10ಕ್ಕೆ ಬಿಜೆಪಿ ಬೃಹತ್ ಪ್ರತಿಭಟನೆ
ಸೆಪ್ಟೆಂಬರ್ 10ರಂದು ನಡೆಯುವ ಈ ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ, ವಿಶೇಷವಾಗಿ ಲಂಬಾಣಿ ತಾಂಡಾಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಪಿ. ರಾಜೀವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರದ ಒಳ ಮೀಸಲಾತಿ ಜಾರಿ ನಿರ್ಧಾರದಲ್ಲಿ ಬಂಜಾರ, ಭೋವಿ, ಕೊರಚ, ಮತ್ತು ಕೊರವ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಬಿಜೆಪಿ ಸೆಪ್ಟೆಂಬರ್ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಶನಿವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, "ಸರ್ಕಾರವು ಶೋಷಿತ ಸಮುದಾಯಗಳಿಗೆ ಗಂಭೀರ ಅನ್ಯಾಯ ಮಾಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಗಣಿಸದೆ, ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ," ಎಂದು ಆರೋಪಿಸಿದರು. ಸರ್ಕಾರದ ಈ ಗೊಂದಲಕಾರಿ ನಿರ್ಧಾರದಿಂದಾಗಿ ಆದಿ ಆಂಧ್ರ, ಆದಿ ಕರ್ನಾಟಕ, ಮತ್ತು ಆದಿ ದ್ರಾವಿಡ ಸಮುದಾಯದವರಿಗೂ ಜಾತಿ ಪ್ರಮಾಣಪತ್ರ ಸಿಗದಂತಾಗಿದೆ ಎಂದು ಅವರು ಹೇಳಿದರು.
"ಕಾಂಗ್ರೆಸ್ ಸರ್ಕಾರವು ಎಸ್‌ಸಿ ಪಟ್ಟಿಯಲ್ಲಿದ್ದ ಜಾತಿಗಳ ಸಂಖ್ಯೆಯನ್ನು 6ರಿಂದ 101ಕ್ಕೆ ಹೆಚ್ಚಿಸಿದ್ದರೂ, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಲ್ಲ. ಬೊಮ್ಮಾಯಿ ಸರ್ಕಾರ ನೀಡಿದ್ದ ಒಳ ಮೀಸಲಾತಿಯನ್ನು ದುರ್ಬಲಗೊಳಿಸಲಾಗಿದೆ. ಚುನಾವಣಾ ಕಾರಣಕ್ಕಾಗಿ ತಪ್ಪು ಸಂದೇಶ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಕ್ಷಮೆ ಯಾಚಿಸಬೇಕು," ಎಂದು ರಾಜೀವ್ ಆಗ್ರಹಿಸಿದರು.
ಸೆಪ್ಟೆಂಬರ್ 10ರಂದು ನಡೆಯಲಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ, ವಿಶೇಷವಾಗಿ ಲಂಬಾಣಿ ತಾಂಡಾಗಳಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಭೋವಿ ಸಮಾಜದ ಮುಖಂಡರು ಮತ್ತು ಅಲೆಮಾರಿ ಸಮುದಾಯದ ನಾಯಕರೂ ಪಾಲ್ಗೊಳ್ಳಲಿದ್ದು, ಸುಮಾರು 50 ರಿಂದ 60 ಸಾವಿರ ಜನರು ಸೇರುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ, ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್, ಶಾಸಕ ಕೃಷ್ಣಾ ನಾಯ್ಕ್ ಹಾಗೂ ಪಿ. ರಾಜೀವ್ ಅವರು ಪ್ರತಿಭಟನೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.