
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಒಳಮೀಸಲಾತಿ ಕುರಿತ ಸಚಿವರ ಸಭೆ
ಒಳ ಮೀಸಲಾತಿ | ವಾರದಲ್ಲೇ ಆಯೋಗದ ಮಧ್ಯಂತರ ವರದಿ: ಬಳಿಕ ಸರ್ಕಾರದ ತೀರ್ಮಾನ
ಸರ್ಕಾರ ಒಳ ಮೀಸಲಾತಿ ವಿಷಯದಲ್ಲಿ ತಮ್ಮ ತಾಳ್ಮೆ ಪರೀಕ್ಷೆ ಮಾಡದೇ ಕೂಡಲೇ ತನ್ನ ತೀರ್ಮಾನವನ್ನು ಘೋಷಿಸದೇ ಹೋದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದರು.
ಒಳ ಮೀಸಲಾತಿ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪರಿಶಿಷ್ಟ ಸಮುದಾಯಗಳ ಹಿರಿಯ ಸಚಿವರು ಮತ್ತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಭೆ ನಡೆಯಿತು.
ಒಳಮೀಸಲಾತಿ ಘೋಷಣೆಗೆ ಆಗ್ರಹಿಸಿ ಒಳ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಾದಿಗ ಮತ್ತಿತರ ಮೀಸಲಾತಿ ವಂಚಿತ ಪರಿಶಿಷ್ಟ ಸಮುದಾಯಗಳು ದಾವಣಗೆರೆಯ ಹರಿಹರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ, ಕಳೆದ ನಾಲ್ಕು ದಿನಗಳಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿವೆ.
ಒಳಮೀಸಲಾತಿ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ(ಮಾ.24) ತಮ್ಮ ಸಂಪುಟದ ಹಿರಿಯ ಪರಿಶಿಷ್ಟ ಸಮುದಾಯದ ಸಚಿವರು ಹಾಗೂ ಒಳಮೀಸಲಾತಿ ಕುರಿತು ವರದಿ ಸಲ್ಲಿಸಲು ನೇಮಕ ಮಾಡಿರುವ ಆಯೋಗದ ನ್ಯಾ. ನಾಗಮೋಹನ್ ದಾಸ್ ಅವರೊಂದಿಗೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಚರ್ಚೆ ನಡೆಸಿದರು.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಸಚಿವ ಎಚ್ ಸಿ ಮಹದೇವಪ್ಪ, ಒಳ ಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ನ್ಯಾ.ನಾಗಮೋಹನ್ ದಾಸ್ ಆಯೋಗ ಮುಂದಿನ ಒಂದು ವಾರದಲ್ಲಿ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಆ ವರದಿ ಕೈಸೇರಿದ ಬಳಿಕ ಆ ಬಗ್ಗೆ ಚರ್ಚಿಸಿ ಸರ್ಕಾರ ಒಳ ಮೀಸಲಾತಿಯ ಬಗ್ಗೆ ಘೋಷಣೆ ಮಾಡಲಿದೆ ಎಂದು ಹೇಳಿದ್ದಾರೆ.
ಹೊಸ ನೇಮಕಾತಿ, ಭಡ್ತಿ ಇಲ್ಲ
ಅಲ್ಲದೆ, ಒಳಮೀಸಲಾತಿ ವಿಷಯದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳುವತನಕ ಯಾವುದೇ ಹೊಸ ನೇಮಕ, ಬಡ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಕಾಂಗ್ರೆಸ್ ಸರ್ಕಾರ ಈ ಮೊದಲು ಕೊಟ್ಟ ಮಾತಿನಂತೆ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ. ಆ ಕುರಿತು ನೇಮಕ ಮಾಡಿರುವ ಆಯೋಗ ಮಧ್ಯಂತರ ವರದಿ ಕೊಟ್ಟ ಬಳಿಕ ಮುಖ್ಯಮಂತ್ರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸಮುದಾಯದ ಎಲ್ಲಾ ಜಾತಿಗಳ ಹಿತ ಕಾಯುವ ನಿಟ್ಟಿನಲ್ಲಿ ಚರ್ಚಿಸಿ, ಎಲ್ಲರಿಗೂ ಅನುಕೂಲವಾಗುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಹಿರಿಯ ಸಚಿವರಾದ ಗೃಹ ಸಚಿವ ಡಾ ಜಿ.ಪರಮೇಶ್ವರ್, ಆರ್.ಬಿ.ತಿಮ್ಮಾಪುರ್, ಪ್ರಿಯಾಂಕ್ ಖರ್ಗೆ, ಶಿವರಾಜ್ ತಂಗಡಗಿ ಕೂಡ ಇದ್ದರು.
ಹೋರಾಟಗಾರರ ಗಡುವು
ಈ ನಡುವೆ ಭಾನುವಾರ ರಾಜ್ಯ ಸರ್ಕಾರಕ್ಕೆ ಗುಡುವು ನೀಡಿದ್ದ ಒಳಮೀಸಲಾತಿ ಹೋರಾಟಗಾರರು ಸೋಮವಾರದ ಸಭೆಯಲ್ಲೇ ಒಳ ಮೀಸಲಾತಿ ಕುರಿತು ಸರ್ಕಾರದ ತೀರ್ಮಾನವನ್ನು ಘೋಷಿಸಬೇಕು ಎಂದು ಗಡುವು ನೀಡಿದ್ದರು.
ಸರ್ಕಾರ ಒಳ ಮೀಸಲಾತಿ ವಿಷಯದಲ್ಲಿ ತಮ್ಮ ತಾಳ್ಮೆ ಪರೀಕ್ಷೆ ಮಾಡದೇ ಕೂಡಲೇ ತನ್ನ ತೀರ್ಮಾನವನ್ನು ಘೋಷಿಸದೇ ಹೋದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದರು.