Internal Reservation | ಒಳಮೀಸಲಾತಿ ದತ್ತಾಂಶ ಸಂಗ್ರಹಣೆ, ತಪ್ಪದ ಸರ್ವರ್‌ ಸಮಸ್ಯೆ
x

ಒಳಮೀಸಲಾತಿ ದತ್ತಾಂಶ ಸಂಗ್ರಹಿಸುತ್ತಿರುವ ಗಣತಿದಾರರು.

Internal Reservation | ಒಳಮೀಸಲಾತಿ ದತ್ತಾಂಶ ಸಂಗ್ರಹಣೆ, ತಪ್ಪದ ಸರ್ವರ್‌ ಸಮಸ್ಯೆ

ರಾಜ್ಯದ ಕೆಲ ಭಾಗಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಒಳ ಮೀಸಲಾತಿ ದತ್ತಾಂಶ ಸಂಗ್ರಹ ಕಷ್ಟವಾಗುತ್ತಿದೆ. ಒಂದು ಕುಟುಂಬದ ಮಾಹಿತಿ ಅಪ್‌ಲೋಡ್‌ ಮಾಡಲು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿದ್ದು ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗದಂತಾಗಿದೆ.


ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ಸಂಬಂಧ ನ್ಯಾ. ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ನಡೆಸುತ್ತಿರುವ ದತ್ತಾಂಶ ಸಂಗ್ರಹ ಸಮೀಕ್ಷೆಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನೆಟ್‌ವರ್ಕ್‌ ಹಾಗೂ ಸರ್ವರ್‌ ಸಮಸ್ಯೆಯಿಂದ ಶಿಕ್ಷಕರು ಸಮೀಕ್ಷೆ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ಭಾಗಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಮಾಹಿತಿ ಸಂಗ್ರಹ ವಿಳಂಬವಾಗುತ್ತಿದೆ. ಒಂದು ಕುಟುಂಬದ ಮಾಹಿತಿ ಅಪ್‌ಲೋಡ್‌ ಮಾಡಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ಮೇ 17ರೊಳಗೆ ಮನೆ ಮನೆ ಭೇಟಿ ಮೂಲಕ ಮಾಹಿತಿ ಸಂಗ್ರಹ ಪೂರ್ಣಗೊಳಿಸಬೇಕಿದೆ. ಆದರೆ, ಸರ್ವರ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದ ನಿರ್ದಿಷ್ಟ ಗುರಿ ತಲುಪುವುದು ಕಷ್ಟಸಾಧ್ಯವಾಗಿದೆ. ಈ ಮಧ್ಯೆ ತಂತ್ರಾಂಶವನ್ನು ಅಪ್‌ಡೇಟ್ ಮಾಡಿದ್ದರೂ ಕೆಲವೊಂದು ಮೊಬೈಲ್‌ಗಳಲ್ಲಿ ಓಪನ್‌ ಆಗುತ್ತಿಲ್ಲ ಎಂದು ಗಣತಿದಾರರು ದೂರಿದ್ದಾರೆ.

ಇತ್ತೀಚೆಗಷ್ಟೇ ಕಲಬುರಗಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳಲ್ಲಿ ನೆಟ್‌ವರ್ಕ್‌ ಹಾಗೂ ಸರ್ವರ್‌ ಸಮಸ್ಯೆ ಎದುರಾಗಿ ಮಾಹಿತಿ ಸಂಗ್ರಹಿಸಲು ಪರದಾಡಬೇಕಾದ ಸ್ಥಿತಿ ಇತ್ತು. ಮೇ 5 ರಂದು ಎಪಿಕೆ ತಂತ್ರಾಂಶದಲ್ಲಿ ಸಮಸ್ಯೆ ಉಂಟಾಗಿ ಗಣತಿದಾರರು ಸಮಾಜ ಕಲ್ಯಾಣ ಇಲಾಖೆ ಜಂಟಿ ಉಪನಿರ್ದೇಶಕರ ಗಮನಕ್ಕೆ ತಂದಿದ್ದರು. ಸಮೀಕ್ಷೆಗೆ ಹಳೆಯ ಮೊಬೈಲ್‌ಗಳನ್ನು ಬಳಸುತ್ತಿರುವುದರಿಂದ ತಂತ್ರಾಂಶದಲ್ಲಿ ಸಮಸ್ಯೆಯಾಗಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಯಲ್ಲಿನ ಉಪ ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾ.ನಾಗಮೋಹನದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಿ ನಿಖರ ದತ್ತಾಂಶ ಸಂಗ್ರಹಿಸಲು ಸೂಚಿಸಿದ್ದರು. ಆಯೋಗದ ವತಿಯಿಂದ ದತ್ತಾಂಶ ಸಂಗ್ರಹಣೆಗೆ ಎಪಿಕೆ ತಂತ್ರಾಂಶ ಅಭಿವೃದ್ದಿಪಡಿಸಿ ಅದರ ಬಳಕೆ ಕುರಿತು ಜಿಲ್ಲಾಮಟ್ಟದಲ್ಲಿ ಎಲ್ಲಾ ಶಿಕ್ಷಕರಿಗೂ ತರಬೇತಿ ನೀಡಲಾಗಿತ್ತು.

ರಾಜ್ಯಾದ್ಯಂತ ಮೂರು ಹಂತಗಳಲ್ಲಿ ಮಾಹಿತಿ ಸಂಗ್ರಹಣೆಗೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಮೇ5 ರಿಂದ 17ರವರೆಗೆ ಮನೆ ಮನೆ ಭೇಟಿ, ಎರಡನೇ ಹಂತದಲ್ಲಿ ವಿಶೇಷ ಶಿಬಿರಗಳ ಮೂಲಕ ಮಾಹಿತಿ ಸಂಗ್ರಹ ಹಾಗೂ ಮೂರನೇ ಹಂತದಲ್ಲಿ ಆನ್‌ಲೈನ್‌ ಮೂಲಕ ದತ್ತಾಂಶ ಸಂಗ್ರಹಿಸಲು ಚಾಲನೆ ದೊರೆತಿದೆ.

ಪರಿಶಿಷ್ಟ ಜಾತಿಯ 101 ಒಳಪಂಗಡಗಳ ನಿಖರ ದತ್ತಾಂಶ ಕಲೆಹಾಕಿ 60ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ತಿಳಿಸಿದ್ದಾರೆ.

Read More
Next Story