
ಸಾವಿರಾರು ಎನ್ಎಚ್ಎಂ ಸಿಬ್ಬಂದಿಗೆ ʼಆಂತರಿಕ ಮೌಲ್ಯಮಾಪನʼವೇ ಶಾಪ ; ʼತಿಂಗಳ ನವೀಕರಣʼದ ಪ್ರಲಾಪ
17-18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ʼಆಂತರಿಕ ಮೌಲ್ಯಮಾಪನʼ ಹೆಸರಲ್ಲಿ ಕೆಲಸದಿಂದ ಬಿಡುಗಡೆಗೊಳಿಸುತ್ತಿದೆ. ಹಲವರನ್ನು ʼತಿಂಗಳವಾರು ನವೀಕರಣʼ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿರುವುದು ನೌಕರರಲ್ಲಿ ಆತಂಕ ಮೂಡಿಸಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ‘ಆಂತರಿಕ ಮೌಲ್ಯಮಾಪನ’ ಹೆಸರಿನಲ್ಲಿ ಕರ್ತವ್ಯದಿಂದ ಕೈಬಿಡುತ್ತಿರುವ ಆರೋಗ್ಯ ಇಲಾಖೆಯ ಕ್ರಮಕ್ಕೆ ನೌಕರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ರಾಜ್ಯವ್ಯಾಪಿ ಎನ್ಎಚ್ಎಂ ಕಾರ್ಯಕ್ರಮದಡಿ ಗುತ್ತಿಗೆ ಆಧಾರದಲ್ಲಿ 27 ಸಾವಿರ, ಹೊರಗುತ್ತಿಗೆಯಡಿ 3000 ಸಾವಿರ ನೌಕರರು ದುಡಿಯುತ್ತಿದ್ದಾರೆ. ಸೇವೆ ಕಾಯಂಮಾತಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟಗಳನ್ನು ನಡೆಸಿದ್ದಾರೆ. ಹೀಗಿರುವಾಗ ರಾಜ್ಯ ಆರೋಗ್ಯ ಇಲಾಖೆ ದಿಢೀರನೇ ಆಂತರಿಕ ಮೌಲ್ಯಮಾಪನ ಹೆಸರಿನಲ್ಲಿ ಉದ್ಯೋಗಕ್ಕೆ ಕತ್ತರಿ ಹಾಕುತ್ತಿದೆ. ರಾಜ್ಯದಲ್ಲಿ ಅಂದಾಜು ಎಂಟು ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲು ಆರೋಗ್ಯ ಇಲಾಖೆ ಹುನ್ನಾರ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೇ ಕಳೆದ 17-18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನೂ ಕೂಡ ʼಆಂತರಿಕ ಮೌಲ್ಯಮಾಪನʼ ಹೆಸರಲ್ಲಿ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಇನ್ನು ಕಾರ್ಯ ನಿರ್ವಹಿಸುತ್ತಿರುವ ಹಲವರನ್ನು ʼತಿಂಗಳವಾರು ನವೀಕರಣʼ ವ್ಯವಸ್ಥೆಯಲ್ಲಿ ಮುಂದುವರಿಸುತ್ತಿದ್ದು, ಗುತ್ತಿಗೆ ಸಿಬ್ಬಂದಿ ಆತಂಕದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.
ಸೇವೆಯಿಂದ ಕೈಬಿಟ್ಟ ಇಲಾಖೆ
ಆರೋಗ್ಯ ಇಲಾಖೆಯು ಎನ್‌ಎಚ್‌ಎಂ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ 195 ಆಶಾ ಮೆಂಟರ್‌ಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದೆ. RBSK ಕಾರ್ಯಕ್ರಮದಲ್ಲಿ 24 ಮಂದಿ ಫಾರ್ಮಾಸಿಸ್ಟ್‌ಗಳನ್ನು ಸೇವೆಯಿಂದ ಕೈ ಬಿಡಲು ಆದೇಶಿಸಿದೆ. ಈಗಾಗಲೇ ಆರೋಗ್ಯ ಇಲಾಖೆ ಆದೇಶದ ವಿರುದ್ಧ 179 ಮಂದಿ ಆಶಾ ಮೆಂಟರ್‌ಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
2007-08 ರಲ್ಲಿ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಲು ಎನ್‌ಎಚ್‌ಎಂ ಯೋಜನೆಯಡಿ ಆಶಾ ಮೆಂಟರ್ ಹುದ್ದೆಗಳನ್ನು ಸೃಜಿಸಲಾಗಿತ್ತು. ಅಂದಿನಿಂದ ನಗರ ಹಾಗೂ ಗ್ರಾಮೀಣ ಭಾಗದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಆಶಾ ಮೆಂಟರ್‌ಗಳನ್ನು ಈಗ ದಿಢೀರನೇ ಕೆಲಸದಿಂದ ಬಿಡುಗಡೆಗೊಳಿಸಿರುವುದು ಟೀಕೆಗೆ ಗುರಿಯಾಗಿದೆ.
ಇ-ಹೆಲ್ತ್ ಕಾರ್ಯಕ್ರಮದಲ್ಲಿ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ರಾಮನಗರ, ತುಮಕೂರು ವಿಜಯನಗರ ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಎನ್ಎಚ್ಎಂ ಅಡಿ ದುಡಿಯುತ್ತಿರುವ 96 ಮಂದಿ ವೈದ್ಯರು, ಫಾರ್ಮಾಸಿಸ್ಟ್‌ಗಳು, ನೇತ್ರಾಧಿಕಾರಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಇವರಲ್ಲಿ ಕೆಲವರು ನ್ಯಾಯಾಲಯದಿಂದ ತಡೆ ತಂದರೆ, ಮತ್ತೆ ಕೆಲವರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ.
ಆಂತರಿಕ ಮೌಲ್ಯಮಾಪನ ಹೆಸರಲ್ಲಿ ಉದ್ಯೋಗಕ್ಕೆ ಕತ್ತರಿ
ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವ ಎನ್‌ಎಚ್‌ಎಂ ಸಿಬ್ಬಂದಿಯ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪಿದೆ. ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಕಾರ್ಯತಂತ್ರದ ಭಾಗವಾಗಿ ಆಂತರಿಕ ಮೌಲ್ಯಮಾಪನ ಕೈಗೆತ್ತೆಗೊಂಡಿದೆ.
ದಶಕಗಳಿಂದ ಸೇವೆ ಸಲ್ಲಿಸಿರುವ ಸಿಬ್ಬಂದಿಯನ್ನು ದಿಢೀರನೇ ಆಂತರಿಕ ಮೌಲ್ಯಮಾಪನದ ಹೆಸರಲ್ಲಿ ಒಂದೊಂದೇ ತಿಂಗಳು ನವೀಕರಿಸಲಾಗುತ್ತಿದೆ. ಕೆಲವರ ನವೀಕರಣ ಅವಧಿಯನ್ನು ಜೂನ್ 31ರವರೆಗೆ ನವೀಕರಿಸಿದರೆ, ಮತ್ತೆ ಕೆಲವರ ಅವಧಿಯನ್ನು ಜುಲೈ ತಿಂಗಳಾಂತ್ಯದವರೆಗೆ ವಿಸ್ತರಿಸಲಾಗುತ್ತಿದೆ. ಹೀಗೆ ಒಬ್ಬೊಬ್ಬರಿಗೂ ಒಂದೊಂದು ತಿಂಗಳ ವಿಸ್ತರಣೆ ನೀಡುತ್ತಾ ಬಂದಿದ್ದು, ಇದರಿಂದ ನೌಕರರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಮುಳುಗಿದ್ದಾರೆ.
ಎನ್‌ಎಚ್‌ಎಂ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ವರ್ಷಕ್ಕೊಮ್ಮೆ ಗುತ್ತಿಗೆ ನೌಕರರ ಸೇವಾವಧಿಯನ್ನು ನವೀಕರಿಸಲಾಗುತ್ತಿತ್ತು. ಈಗ ಒಂದೊಂದೇ ತಿಂಗಳು ವಿಸ್ತರಿಸುತ್ತಿರುವುದು ಗುತ್ತಿಗೆ ಸಿಬ್ಬಂದಿಯಲ್ಲಿ ಆತಂಕ ನಿರ್ಮಿಸಿದೆ. ಗುತ್ತಿಗೆ ನೌಕರರನ್ನು ಸೇವೆಯಿಂದ ಕೈ ಬಿಡದಂತೆ ಜನಪ್ರತಿನಿಧಿಗಳು, ಮಠಾಧೀಶರು ಪದೇ ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಮನವಿ ಮಾಡಿದರೂ ಯಾವುದೇ ಭರವಸೆ ನೀಡಿಲ್ಲ ಎಂದು ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
17 ರಿಂದ 18 ವರ್ಷದಿಂದ ಪ್ರಾಮಾಣಿಕವಾಗಿ ಕಡಿಮೆ ವೇತನ ಹಾಗೂ ಯಾವುದೇ ಸೌಲಭ್ಯಗಳಿಲ್ಲದೇ ಸೇವೆ ಸಲ್ಲಿಸಿರುವ ನೌಕರರು ಈ ವಯಸ್ಸಿನಲ್ಲಿ ಕೆಲಸ ಕಳೆದುಕೊಂಡರೆ ಕುಟುಂಬದ ಜವಾಬ್ದಾರಿ ನಿಭಾಯಿಸುವುದು ಹೇಗೆ, ಮಕ್ಕಳ ಮುಂದಿನ ಭವಿಷ್ಯ ಹೇಗೆ? , ಕುಟುಂಬದ ನಿರ್ವಹಣೆ ಹೇಗೆ? ಎಂಬ ಚಿಂತೆ ಶುರುವಾಗಿದೆ ಎಂದು ಪ್ರಶ್ನಿಸಿದರು.
ಕಾಯಂ ಸಿಬ್ಬಂದಿಗಿಲ್ಲದ ಮೌಲ್ಯಮಾಪನ ನಮಗ್ಯಾಕೆ?
ಆರೋಗ್ಯ ಇಲಾಖೆಯಲ್ಲಿ ಕಾಯಂ ಆಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಲಕ್ಷಾಂತರ ರೂ. ವೇತನ ಪಡೆಯುವ ಸಿಬ್ಬಂದಿಗೆ ಇಲ್ಲದ ಮೌಲ್ಯಮಾಪನ ನಮಗೇಕೆ ಎಂದು ಗುತ್ತಿಗೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಗುತ್ತಿಗೆ ಸಿಬ್ಬಂದಿಯನ್ನು ಮಾತ್ರ ಕಾರ್ಯಕ್ಷಮತೆ ಮೌಲ್ಯಮಾಪನದ ಮೂಲಕ ಬೆದರಿಸಲಾಗುತ್ತಿದೆ. ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಲು ಈ ರೀತಿಯ ಕ್ರಮ ಆಗುತ್ತಿದೆಯೇ ಎಂಬ ಅನುಮಾನವೂ ಕಾಡುತ್ತಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಡಿ. ಉಪ್ಪಾರ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ತೋಳಲ್ಲಿ ಬಲ ಇದ್ದಾಗ ದುಡಿಸಿಕೊಂಡು ವಯಸ್ಸಾದ ಮೇಲೆ ಬೀದಿಗೆ ತಳ್ಳಿದರೆ ಹೇಗೆ ಎಂಬ ಭಯದಿಂದ ದಿನ ಎಣಿಸುತ್ತಿದ್ದಾರೆ. ಇದನ್ನು ಅರಿತು ಆರೋಗ್ಯ ಸಚಿವರು ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಒಂದೊಂದೇ ತಿಂಗಳಿಗೆ ಸಿಬ್ಬಂದಿಯ ಸೇವಾವಧಿ ಮುಂದುವರೆಸುವಂತಹ ಆದೇಶಕ್ಕೆ ತಡೆ ನೀಡಬೇಕು ಎಂದು ಒತ್ತಾಯಿಸಿದರು.