ಸಿದ್ದರಾಮಯ್ಯ ಕಾರಿಗೆ ಅಡ್ಡಿ | ಜನಾರ್ದನ ರೆಡ್ಡಿ ರೇಂಜ್ ರೋವರ್ ಸೀಜ್
ಗಂಗಾವತಿ ಸಂಚಾರಿ ಠಾಣೆಯ ಪೊಲೀಸರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರನ್ನು ಬೆಂಗಳೂರಿನಲ್ಲಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಎದುರಾಗಿ ಕಾರು ಚಲಾಯಿಸಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿಯ ರೇಂಜ್ ರೋವರ್ ಕಾರನ್ನು ಗಂಗಾವತಿ ಸಂಚಾರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಗಂಗಾವತಿ ಸಂಚಾರಿ ಠಾಣೆಯ ಪೊಲೀಸರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರನ್ನು ಬೆಂಗಳೂರಿನಲ್ಲಿ ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಗಂಗಾವತಿಗೆ ತೆಗೆದುಕೊಂಡು ಹೋಗಿದ್ದಾರೆ. ಜನಾರ್ದನ ರೆಡ್ಡಿ ಬಳಕೆ ಮಾಡುವ ರೇಂಜ್ ರೋವರ್ ಸೇರಿದಂತೆ ಮೂರು ಕಾರುಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಘಟನೆ ವಿವರ
ಅಕ್ಟೋಬರ್ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಚೂರು ಪ್ರವಾಸ ಮುಗಿಸಿಕೊಂಡು ಗಂಗಾವತಿಯಿಂದ ಗಿಣಿಗೇರಾ ಏರ್‌ಸ್ಟ್ರಿಪ್ ಕಡೆಗೆ ಹೋಗುತ್ತಿದ್ದರು. ಆಗ ರೇಂಜ್ ರೋವರ್ ಕಾರಿನಲ್ಲಿದ್ದ ಜನಾರ್ದನ ರೆಡ್ಡಿ ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಅಡ್ಡವಾಗಿ ಹೋಗಿದ್ದರು. ಈ ಹಿನ್ನಲೆಯಲ್ಲಿ ರೇಂಜ್ ರೋವರ್ ಸೇರಿ ಮೂರು ಕಾರುಗಳ ವಿರುದ್ಧ ಗಂಗಾವತಿ ಠಾಣೆಯ ಎಎಸ್ಐ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ಕಾರು ಸಾಗುತ್ತಿದ್ದ ಕಾರಣ ಶಿಷ್ಟಾಚಾರದಂತೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆಗ ಕಾರಿನಲ್ಲಿ ಹೋಗುತ್ತಿದ್ದ ಜನಾರ್ದನ ರೆಡ್ಡಿ ಕಾರನ್ನು ತಡೆದು ನಿಲ್ಲಿಸಲಾಗಿತ್ತು. ಕೆಲಕಾಲ ಜನಾರ್ದನ ರೆಡ್ಡಿ ಟ್ರಾಫಿಕ್‌ನಲ್ಲಿ ಕಾಯುತ್ತಿದ್ದರು. ಬಳಿಕ ವಾಹನ ಬಿಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ಮುಖ್ಯಮಂತ್ರಿಗಳ ಕಾರು ಹೋಗುವ ತನಕ ಕಾಯಲು ಸೂಚಿಸಿದ್ದರು.
ಆಗ ಜನಾರ್ದನ ರೆಡ್ಡಿ ರೇಂಜ್ ರೋವರ್ ಕಾರನ್ನು ಡಿವೈಡರ್ ಮೇಲೆ ಹತ್ತಿಸಿ, ಎದುರಿನಿಂದ ಬರುತ್ತಿದ್ದ ಮುಖ್ಯಮಂತ್ರಿಗಳ ಕಾರು ಮತ್ತು ಅವರ ಬೆಂಗಾವಲು ಪಡೆ ಕಾರುಗಳ ಎದುರು ಕಾರು ನುಗ್ಗಿಸಿದ್ದರು. ಮುಖ್ಯಮಂತ್ರಿಗಳ ಬೆಂಗಾವಲು ಪಡೆಗೆ ಅಡ್ಡಿಪಡಿಸಿದ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಜನಾರ್ದನ ರೆಡ್ಡಿ, ‘ರಾಜಕೀಯವಾಗಿ ಸಿದ್ದರಾಮಯ್ಯ ಏನೇ ಇದ್ದರೂ, ತೊಂದರೆ ಕೊಟ್ಟರೂ, ಸಿದ್ದರಾಮಯ್ಯ ಅಲ್ಲದೇ ಹೋದರೂ ಸಿಎಂ ಎಂದು ಮರ್ಯಾದೆ ಕೊಡುತ್ತೇನೆ. ನಾನು ಅಂದು ಗಂಗಾವತಿಗೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋಗಿದ್ದೆ. ಬಳ್ಳಾರಿಯಲ್ಲಿ ಮನೆಯಲ್ಲಿ ಹೋಮ ನಡೆಯುತ್ತಿತ್ತು. ಪೂರ್ಣಾಹುತಿಗೆ ಬರಬೇಕು ಎಂದು ಹೇಳಿದ್ದರು. ಹಾಗಾಗಿ ಮನೆಗೆ ಹೊರಟಿದ್ದೆ. ಸಿಸಿ ಕ್ಯಾಮೆರಾ ಇದೆ, ದೃಶ್ಯಾವಳಿ ಕೊಡುತ್ತೇನೆ. ಅರ್ಧ ಗಂಟೆ ಕಾಲ ಕಾದರೂ ಬೆಂಗಾವಲು ಪಡೆ ಬರಲಿಲ್ಲ. ನಾನು ಪೊಲೀಸರಿಗೆ ಹೇಳಿ ಹೋಗಬಹುದಿತ್ತು. ನನ್ನ ಮುಂದೆ ಇರುವ ವಾಹನ ಬಿಟ್ಟರೆ ಅವರಿಗೆ ಸಮಸ್ಯೆ ಆಗುತ್ತದೆ ಎಂದು ಸಿಎಂ ಬರುವ ಮೊದಲು ಹೋಗಬೇಕು ಎಂದು ಡಿವೈಡರ್ ಮೇಲೆ ಹೋದೆ" ಎಂದಿದ್ದಾರೆ.