Union Budget 2025 | ರೈತರಿಗೆ ಬಂಪರ್ ಕೊಡುಗೆ; ಬಡ್ಡಿ ರಹಿತ ಕೃಷಿ ಸಾಲ 5 ಲಕ್ಷ ರೂ.ಗೆ ಏರಿಕೆ
Union Budget 2025 : ಕಿಸಾನ್ ಕ್ರೆಡಿಟ್ ಸಾಲದ ಮಿತಿ ಏರಿಕೆಯಿಂದ 7.7 ಕೋಟಿ ರೈತರು, ಮೀನುಗಾರರು ಮತ್ತು ಹೈನುಗಾರರಿಗೆ ಅಲ್ಪಾವಧಿ ಸಾಲ ಒದಗಿಸುವ ಉದ್ದೇಶ ಹೊಂದಲಾಗಿದೆ.
ಕೇಂದ್ರ ಬಜೆಟ್‌ನಲ್ಲಿ (Union Budget 2025) ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಉಪಕ್ರಮ ಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸುವ ಮಹತ್ವದ ಘೋಷಣೆ ಮಾಡಲಾಗಿದೆ. ಇದರಿಂದ ಕೃಷಿಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ. ಕಿಸಾನ್ ಕ್ರೆಡಿಟ್ ಸಾಲದ ಮಿತಿ ಏರಿಕೆಯಿಂದ 7.7 ಕೋಟಿ ರೈತರು, ಮೀನುಗಾರರು ಮತ್ತು ಹೈನುಗಾರರಿಗೆ ಅಲ್ಪಾವಧಿ ಸಾಲ ಒದಗಿಸುವ ಉದ್ದೇಶ ಹೊಂದಲಾಗಿದೆ.
ಕೃಷಿ ಉತ್ಪಾದನೆ ಕಡಿಮೆ ಇರುವ ದೇಶದ 100 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಧನ್-ಧಾನ್ಯ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕೃಷಿ ಇಳುವರಿ ಹೆಚ್ಚಿಸಲು ನೀರಾವರಿ ಸೌಲಭ್ಯ ಕಲ್ಪಿಸಿ ರೈತರನ್ನು ಲಾಭದತ್ತ ಕೊಂಡೊಯ್ಯುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ 1ಕೋಟಿ ರೈತರಿಗೆ ಅನುಕೂಲವಾಗಲಿದೆ.
ಅದೇ ರೀತಿ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆ ಸಾಧಿಸಲು 6 ವರ್ಷಗಳ ಯೋಜನೆ ಆರಂಭಿಸಲಾಗುವುದು. ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಧಾನ್ಯಗಳು ಹಾಗೂ ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ತೊಗರಿ, ಉದ್ದು, ಕೆಂಪು ತೊಗರಿ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ತರಕಾರಿ ಹಾಗೂ ಹಣ್ಣುಗಳ ಪೂರೈಕೆ ಹೆಚ್ಚಿಸಲು ಸಮಗ್ರವಾದ ಕಾರ್ಯಕ್ರಮ ರೂಪಿಸಲಾಗುವುದು. ಹಣ್ಣು ಹಾಗೂ ತರಕಾರಿಗಳನ್ನು ಗ್ರಾಹಕರಿಗೆ ತಲುಪಿಸಲು ಎಫ್‌ಪಿಒ( ಫಾಲೋ ಆನ್ ಪಬ್ಲಿಕ್ ಆರ್ಡರ್) ಸಹಭಾಗಿತ್ವಕ್ಕೆ ಉತ್ತೇಜನ ನೀಡಲು ತೀರ್ಮಾನಿಸಲಾಗಿದೆ. ಬಿಹಾರದಲ್ಲಿ ಮಖಾನಾ(ತಾವರೆ ಬೀಜ) ಮಂಡಳಿ ಸ್ಥಾಪಿಸಿ, ಉತ್ಪಾದನೆ ಹಾಗೂ ಮಾರುಕಟ್ಟೆ ಬೆಂಬಲಿಸಲು ವಿಶೇಷ ಉತ್ತೇಜನ ನೀಡಲಾಗುವುದು.
ಅಸ್ಸಾಂನಲ್ಲಿ ಯೂರಿಯಾ ಘಟಕ ಸ್ಥಾಪಿಸಲಾಗುವುದು. ಜೊತೆಗೆ ರಸಗೊಬ್ಬರಗಳಲ್ಲಿ ಸ್ವಾವಲಂಬನೆ ಹೆಚ್ಚಿಸಲು ಹೊಸ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಕೃಷಿ ಕ್ಷೇತ್ರಕ್ಕೆ 1.54 ಲಕ್ಷ ಕೋಟಿ ರೂ. ಹಂಚಿಕೆ
ರೈತರ ಕಲ್ಯಾಣ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ-ತಂತ್ರಜ್ಞಾನ ನಾವೀನ್ಯತೆಗಳ ಮೇಲೆ ಬಜೆಟ್ ಕೇಂದ್ರೀಕರಿಸಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒಟ್ಟು 1.54 ಲಕ್ಷ ಕೋಟಿ ರೂ. ಮೀಸಲಿರಿಸಲಾಗಿದೆ.
ನೇರ ನಗದು ಯೋಜನೆಯಡಿ 11ಕೋಟಿ ರೈತರಿಗೆ ಪಿಎಂ ಕಿಸಾನ್ ನೆರವು ಯೋಜನೆಗೆ 63,500ಸಾವಿರ ಕೋಟಿ ಮೀಸಲಿಡಲಾಗಿದೆ. ಪಿಎಂ ಫಸಲ್ ಬಿಮಾ ಯೋಜನೆಗೆ 12,242ಕೋಟಿ ನಿಗದಿ ಮಾಡಲಾಗಿದೆ. ಬೆಳೆ ವೈವಿದ್ಯತೆ ಹಾಗೂ ಕೃಷಿ ಆಧುನೀಕರಣದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 8,500ಕೋಟಿ ತೆಗೆದಿರಿಸಲಾಗಿದೆ.
ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಗೆ 2,131, ಮಾರ್ಪಡಿಸಿದ ಬಡ್ಡಿ ಮನ್ನಾ ಯೋಜನೆಗೆ 22,600ಕೋಟಿ, ಕೃಷಿ ಮೂಲಸೌಕರ್ಯ ನಿಧಿಗೆ 158ಕೋಟಿ, ಸ್ವಾಭಾವಿಕ ಹಾಗೂ ಸಾವಯವ ಕೃಷಿಗೆ 1000ಕೋಟಿ ಹಂಚಿಕೆ ಮಾಡಲಾಗಿದೆ.
ನರೇಗಾ ಯೋಜನೆಗೆ ಅನುದಾನ
2025-26 ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆಗಾಗಿ 85,428 ಕೋಟಿಗ ರೂ. ಹಂಚಿಕೆ ಮಾಡಲಾಗಿದೆ. 2024-25 ರ ಪರಿಷ್ಕೃತ ಅಂದಾಜಿನ 85,279 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚಾಗಿದೆ. ಇದು 2024-25 ರ ಬಜೆಟ್ ಅಂದಾಜು ₹88,751 ಕೋಟಿಗಿಂತ ಕಡಿಮೆಯಾಗಿದೆ.