![Caste Certificate Issue | ಜಾತಿ ಪ್ರಮಾಣ ಪತ್ರ ಪಡೆಯಲು ಅಡ್ಡಿಯಾದ ಅಂತಾರಾಜ್ಯ ವೈವಾಹಿಕ ಸಂಬಂಧ? Caste Certificate Issue | ಜಾತಿ ಪ್ರಮಾಣ ಪತ್ರ ಪಡೆಯಲು ಅಡ್ಡಿಯಾದ ಅಂತಾರಾಜ್ಯ ವೈವಾಹಿಕ ಸಂಬಂಧ?](https://karnataka.thefederal.com/h-upload/2025/02/05/510686-valmikhicastecertificateproblem.webp)
Caste Certificate Issue | ಜಾತಿ ಪ್ರಮಾಣ ಪತ್ರ ಪಡೆಯಲು ಅಡ್ಡಿಯಾದ ಅಂತಾರಾಜ್ಯ ವೈವಾಹಿಕ ಸಂಬಂಧ?
ವಿವಾಹವಾಗಿ ನೆರೆಯ ಆಂಧ್ರಪ್ರದೇಶದಿಂದ ಬರುವ ಹೆಣ್ಣುಮಕ್ಕಳಿಗೆ ಕರ್ನಾಟಕದಲ್ಲಿ ಅಧಿಕಾರಿಗಳು ಜಾತಿ ಪ್ರಮಾಣಪತ್ರ ಕೊಡುತ್ತಿಲ್ಲ ಎಂಬ ಆರೋಪ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನಲ್ಲಿ ಕೇಳಿಬಂದಿದೆ.
ಅಂತಾರಾಜ್ಯ ವೈವಾಹಿಕ ಸಂಬಂಧಗಳು ಎರಡು ರಾಜ್ಯಗಳ ಜನರನ್ನು ಬೆಸೆಯುತ್ತವೆ ಎಂಬುದು ಒಂದು ಕಡೆಯಾದರೆ, ಮತ್ತೊಂದು ಕಡೆ ಅಂತಹ ಸಂಬಂಧಗಳಿಂದಾಗಿ ಜನಸಾಮಾನ್ಯರು ಕೋರ್ಟು- ಕಚೇರಿ ಕೆಲಸಗಳ ವಿಷಯದಲ್ಲಿ ಅನಗತ್ಯ ಗೊಂದಲ, ಸಮಸ್ಯೆಗಳಿಗೆ ಸಿಲುಕುತ್ತಾರೆ ಎಂಬುದಕ್ಕೆ ಈ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಗಡಿ ಗ್ರಾಮಗಳ ತಾಜಾ ಉದಾಹರಣೆ ಇದು.
ಅದರಲ್ಲೂ ಬಿ ಶ್ರೀರಾಮುಲು, ಸತೀಶ್ ಜಾರಕಿಹೊಳಿ ಅವರಂಥ ಪ್ರಭಾವಿ ನಾಯಕರನ್ನು ಹೊಂದಿರುವ ಬುಡಕಟ್ಟು ಸಮುದಾಯ ವಾಲ್ಮೀಕಿ ನಾಯಕ ಜನಾಂಗದವರೇ ಈ ವಿಶಿಷ್ಟ ಸಮಸ್ಯೆಗೆ ಈಡಾಗಿದ್ದಾರೆ. ಅಷ್ಟೇ ಅಲ್ಲ; ಬಿ. ಶ್ರೀರಾಮುಲು ಅವರು ಶಾಸಕರಾಗಿ, ಸ್ವತಃ ಬುಡಕಟ್ಟು ಕಲ್ಯಾಣ ಸಚಿವರಾಗಿ ಪ್ರತಿನಿಧಿಸಿದ್ದ ಮೊಳಕಾಲ್ಮೂರು ತಾಲೂಕಿನಲ್ಲಿಯೇ ಸಮಸ್ಯೆ ಕಾಡುತ್ತಿದೆ.
ಅಷ್ಟಕ್ಕೂ ಆಗಿರುವುದಾದರೂ ಏನು ಎಂದು ನೋಡಿದರೆ, 'ದ ಫೆಡರಲ್ ಕರ್ನಾಕಟ'ದ ಜೊತೆಗೆ ಮಾತನಾಡಿದ ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿ ವಾಸಿಸುತ್ತಿರುವ ವಾಲ್ಮೀಕಿ ನಾಯಕ ಸಮುದಾಯದ ಜನರು, ಸಮಸ್ಯೆಯಲ್ಲದ ಸಮಸ್ಯೆಯನ್ನು ಅಧಿಕಾರಿಗಳು ಸೃಷ್ಟಿಸಿದ್ದಾರೆ ಎಂಬ ಆರೋಪ ಮಾಡಿದರು.
ಅಂತಾರಾಜ್ಯ ವೈವಾಹಿಕ ಸಂಬಂಧಗಳು
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಉರ್ತಾಳು ಗ್ರಾಮ ಸೇರಿದಂತೆ, ಪೆನ್ನಮ್ಮನಹಳ್ಳಿ, ವೆಂಕಟಾಪುರ, ವಸೂರು, ಮಾಚೇನಹಳ್ಳಿ, ರಾಮಸಾಗರ, ಅಶೋಕ ಸಿದ್ದಾಪುರ ಭಾಗದಲ್ಲಿ ವಾಸಿಸುತ್ತಿರುವ ವಾಲ್ಮೀಕಿ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡ (Scheduled Tribe) ಜಾತಿ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಆಗುತ್ತಿಲ್ಲ. ಇದಕ್ಕೆ ಕಾರಣ ಅಂತಾರಾಜ್ಯ ವೈವಾಹಿಕ ಸಂಬಂಧದ ತೊಡಕು.
ಆಚರಣೆ - ಸಂಪ್ರದಾಯಗಳಲ್ಲಿ ಭಿನ್ನತೆ ಇಲ್ಲ
ಕರ್ನಾಟಕದ ‘ನಾಯಕ’ ಜಾತಿಗೆ ಆಂಧ್ರಪ್ರದೇಶದಲ್ಲಿ ‘ಬೋಯ’ ಎಂದು ಕರೆಯಲಾಗುತ್ತದೆ. ಅದನ್ನು ಹೊರತು ಪಡಿಸಿದರೆ ಇವರ ಆಚರಣೆ-ಸಂಪ್ರದಾಯಗಳಲ್ಲಿ ಭಿನ್ನತೆ ಇಲ್ಲ. ಹೀಗಾಗಿ ಆಂಧ್ರಪ್ರದೇಶದಿಂದ ಉರ್ತಾಳು ಗ್ರಾಮಕ್ಕೆ ವೈವಾಹಿಕ ಸಂಬಂಧಗಳು ಆಗಿವೆ. ಅಲ್ಲಿಂದಲೆ ಸಮಸ್ಯೆ ಶುರುವಾಗಿದೆ ಎಂದು ಮೊಳಕಾಲ್ಮೂರದ ಸಾಮಾಜಿಕ ಹೋರಾಟಗಾರ ಚಂದ್ರ ಪ್ರಕಾಶ್ ವಿವರಿಸಿದರು.
ಶತಮಾನದ ಇತಿಹಾಸವಿದೆ
ಕಳೆದ 110 ವರ್ಷಗಳಿಂದ ಇಲ್ಲಿ ಅಂತಾರಾಜ್ಯ ವೈವಾಹಿಕ ಸಂಬಂಧಗಳಾಗಿವೆ. ಇಲ್ಲಿಂದ ಆಂಧ್ರಪ್ರದೇಶಕ್ಕೆ ಮದುವೆ ಮಾಡಿಕೊಡುವ ಹೆಣ್ಣುಮಕ್ಕಳಿಗೆ ಅಲ್ಲಿ ಬೋಯಾ ಜಾತಿ ಪ್ರಮಾಣಪತ್ರ ನಿರಾಯಾಸವಾಗಿ ಸಿಗುತ್ತದೆ. ಆದರೆ ಅಲ್ಲಿಂದ ಇಲ್ಲಿಗೆ ಮದುವೆ ಮಾಡಿಕೊಂಡು ಬರುವ ಹೆಣ್ಣುಮಕ್ಕಳಿಗೆ ನಾಯಕ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಮೊಳಕಾಲ್ಮೂರ ತಾಲೂಕಾ ಆಡಳಿತ ಜಾತಿ ಪ್ರಮಾಣ ಪತ್ರವನ್ನು ಆ ಹೆಣ್ಣುಮಕ್ಕಳಿಗೆ ಕೊಡುತ್ತಿಲ್ಲ ಎಂಬುದು ಉರ್ತಾಳು ಗ್ರಾಮದ ಮಹಾರಾಜ ಎನ್. ಎಂಬುವರ ಆರೋಪ.
ಬೋಯಾ ಬದಲಿಗೆ ನಾಯಕ
ಬೋಯಾ ಬದಲಿಗೆ ನಾಯಕ ಎಂದು ಬದಲಿಸಲು ಆಗದೇ ಇರುವುದರಿಂದ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಿಂದೆ ಈ ಸಮುದಾಯದ ಹೆಣ್ಣು ಮಕ್ಕಳಿಗೆ ಕರ್ನಾಟಕದಲ್ಲಿ ನಾಯಕ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ ಇತ್ತೀಚಿಗೆ ಆಂಧ್ರದ ಬೋಯ ಸಮುದಾಯದಿಂದ ಮದುವೆ ಮಾಡಿಕೊಂಡು ಬಂದಂತಹ ಹೆಣ್ಣುಮಕ್ಕಳಿಗೆ ಕರ್ನಾಟಕದಲ್ಲಿ ನಾಯಕ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ಈ ಗ್ರಾಮದ ಹೆಣ್ಣು ಮಕ್ಕಳ ಕುಟುಂಬ ದವರಿಗೆ ಜಾತಿ ಪ್ರಮಾಣ ಪತ್ರವಿಲ್ಲದೆ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜೋತಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳು ಸಿಗುತ್ತಿಲ್ಲ.
ಕಳೆದ ಐದಾರು ವರ್ಷಗಳಿಂದ ಈ ಸಮಸ್ಯೆ ತಲೆದೂರಿದೆ. ಮೊದಲಿಗೆ ಎಲ್ಲವೂ ಸರಿಯಾಗಿಯೇ ಇತ್ತು ಎನ್ನುತ್ತಾರೆ ತೊಂದರೆಗೀಡಾದವರು. ನಾಡಕಚೇರಿ ತಾಲೂಕು ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಈ ವರೆಗೆ ಅವರಿಗೆ ನಾಯಕ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಈ ಕುರಿತು ಮೊಳಕಾಲ್ಮೂರು ತಾಲೂಕಿನ ತಹಸೀಲ್ದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು 'ದ ಫೆಡರಲ್ ಕರ್ನಾಟಕ' ಪ್ರಯತ್ನಿಸಿತು. ಆದರೆ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಈ ವರದಿಯ ಹೆಚ್ಚಿನ ಮಾಹಿತಿಗೆ ವಿಡಿಯೋ ವೀಕ್ಷಿಸಿ...