ಕಂಬಳದ ಭೀಷ್ಮ ಗುಣಪಾಲ ಕಡಂಬ ಅವರಿಗೆ ವೇದಿಕೆಯಲ್ಲೇ ಅವಮಾನ
x
ಗುಣಪಾಲ ಕಡಂಬ

ಕಂಬಳದ 'ಭೀಷ್ಮ' ಗುಣಪಾಲ ಕಡಂಬ ಅವರಿಗೆ ವೇದಿಕೆಯಲ್ಲೇ ಅವಮಾನ

ಮಂಗಳೂರಿನಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ಅರುಣ್ ಶೆಟ್ಟಿ ಎಂಬಾತನಿಂದ ಅವಮಾನವಾಗಿದೆ.


Click the Play button to hear this message in audio format

ತುಳುನಾಡಿನ ಪಾರಂಪರಿಕ ಕ್ರೀಡೆ ಕಂಬಳಕ್ಕೆ ತನ್ನದೇ ಆದ ಘನತೆ ಮತ್ತು ಶಿಸ್ತಿನ ಇತಿಹಾಸವಿದೆ. ಆದರೆ, ಕಳೆದ ಶನಿವಾರ ಮಂಗಳೂರಿನ ಬಂಗ್ರಕೂಳೂರಿನಲ್ಲಿ ನಡೆದ 'ರಾಮ-ಲಕ್ಷ್ಮಣ' ಜೋಡುಕರೆ ಕಂಬಳದಲ್ಲಿ ನಡೆದ ಘಟನೆಯೊಂದು ಇಡೀ ಕಂಬಳ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಂಬಳಕ್ಕೆ ಅಥ್ಲೆಟಿಕ್ ಶಿಸ್ತು ತಂದುಕೊಟ್ಟ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಅವಮಾನ ಮಾಡಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಘಟನೆಯ ವಿವರ

ಮಂಗಳೂರು ಕಂಬಳ ಸಮಿತಿ ವತಿಯಿಂದ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಕಂಬಳ ಕೂಟ ನಡೆಯುತ್ತಿತ್ತು. ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರು ವೀಕ್ಷಕ ವಿವರಣೆ ನೀಡುತ್ತಿದ್ದಾಗ, ರಾತ್ರಿ 11.45ರ ಸುಮಾರಿಗೆ ಅರುಣ್ ಶೆಟ್ಟಿ ಎಂಬಾತ ವಿವರಣಾ ಕೌಂಟರ್‌ಗೆ ನುಗ್ಗಿ ಮೈಕ್ ಕಸಿದುಕೊಂಡಿದ್ದಾನೆ. "ನೀವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ, ಇಲ್ಲಿ ಕೋಣ ಬಿಡೋಕಿದೆ.. ನಾನು ಅರುಣ್ ಶೆಟ್ಟಿ ಮಾತಾಡೋದು" ಎಂದು ಏಕವಚನದಲ್ಲಿ ಗರ್ವದಿಂದ ಹೇಳಿದ್ದಾನೆ. ಇದಕ್ಕೆ ಸಮಾಧಾನದಿಂದಲೇ ಉತ್ತರಿಸಿದ ಕಡಂಬ ಅವರು, "ನಾವು ಮೈಕ್ ಬಂದ್ ಮಾಡಿ ಕೂರುತ್ತೇವೆ, ನೀವು ಯಾವಾಗ ಬೇಕಾದರೂ ಕೋಣ ಬಿಡಿ" ಎಂದು ತಿರುಗೇಟು ನೀಡಿದ್ದಾರೆ.

ಕಂಬಳಾಭಿಮಾನಿಗಳ ಆಕ್ರೋಶ - ಅಭಿಮಾನಿ ಬಳಗ ರಚನೆ

ದಶಕಗಳ ಕಾಲ ಕಂಬಳದ ಉನ್ನತಿಗಾಗಿ ಶ್ರಮಿಸಿದ ಗುಣಪಾಲ ಕಡಂಬ ಅವರಿಗೆ ಆದ ಅವಮಾನವನ್ನು ಕಂಬಳಾಭಿಮಾನಿಗಳು ಸಹಿಸುತ್ತಿಲ್ಲ. ವಾಟ್ಸಾಪ್ ಗ್ರೂಪ್‌ಗಳಲ್ಲಿ ಇದೇ ವಿಚಾರ ಅಬ್ಬರಿಸುತ್ತಿದೆ. ಕಡಂಬ ಅವರ ಪರವಾಗಿ ಧ್ವನಿ ಎತ್ತಲು 'ಗುಣಪಾಲ ಕಡಂಬ ಅಭಿಮಾನಿ ಬಳಗ'ದ ಹೆಸರಿನಲ್ಲಿ ಸಾವಿರಾರು ಮಂದಿ ಒಂದಾಗಿದ್ದಾರೆ. ಅರುಣ್ ಶೆಟ್ಟಿ ಮತ್ತು ಕಂಬಳ ಆಯೋಜಕರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿದೆ.

ಮೌನಕ್ಕೆ ಶರಣಾದ ಶಿಸ್ತು ಸಮಿತಿ ಮತ್ತು ಸಂಘಟಕರು

ಇಷ್ಟೆಲ್ಲಾ ರಾದ್ಧಾಂತ ನಡೆದರೂ ಕಂಬಳ ಶಿಸ್ತು ಸಮಿತಿ ಮತ್ತು ತೀರ್ಪುಗಾರರ ಸಮಿತಿ ಮೌನಕ್ಕೆ ಶರಣಾಗಿರುವುದು ಅಭಿಮಾನಿಗಳ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಶಿಸ್ತು ಉಲ್ಲಂಘನೆಯಾದಾಗ ಕ್ರಮ ಕೈಗೊಳ್ಳಬೇಕಾದ ಸಮಿತಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಹಲವರ ಆಕ್ರೋಶಕ್ಕೂ ಕಾರಣವಾಗಿದೆ.

ಕಂಬಳಕ್ಕಿಂತ ಸಭಾ ಕಾರ್ಯಕ್ರಮಕ್ಕೆ ಪ್ರಾಧಾನ್ಯತೆ?

ಇತ್ತೀಚಿನ ವರ್ಷಗಳಲ್ಲಿ ಕಂಬಳವು ಕ್ರೀಡೆಗಿಂತ ಹೆಚ್ಚಾಗಿ ರಾಜಕೀಯ ನಾಯಕರ ಗುಣಗಾನ ಮಾಡುವ 'ಸಭಾ ಕಾರ್ಯಕ್ರಮ'ವಾಗಿ ಬದಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. 24 ಗಂಟೆಯಲ್ಲಿ ಮುಗಿಯಬೇಕಾದ ಕಂಬಳವು ಅತಿಥಿಗಳ ಸತ್ಕಾರದಿಂದಾಗಿ ವಿಳಂಬವಾಗುತ್ತಿದೆ. ಇದರ ಒತ್ತಡವನ್ನು ತೀರ್ಪುಗಾರರ ಮೇಲೆ ಹಾಕಲಾಗುತ್ತಿದ್ದು, ಇದು ಇಂತಹ ಅಹಿತಕರ ಘಟನೆಗಳಿಗೆ ನಾಂದಿಯಾಗುತ್ತಿದೆ.

Read More
Next Story