
ಕಪ್ಪುತಲೆ ಕೀಟ ಬಾಧೆ ; ತೆಂಗು ಬಿಟ್ಟು ಕಂಗು ಹತ್ತಿದ ರೈತರು
ತೆಂಗಿನ ಬೆಳೆಗೆ ಕಪ್ಪುತಲೆ ಹುಳು ಕಾಟ ಹೆಚ್ಚಾಗಿರುವುದರಿಂದ ರೈತರು ಅಡಿಕೆ (ಕಂಗು), ದಾಳಿಂಬೆ ಹಾಗೂ ತರಕಾರಿ ಬೆಳೆಗಳತ್ತ ಹೊರಳಿದ್ದಾರೆ. ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರದಲ್ಲಿ ನಾನಾ ಕಾರಣಗಳಿಂದ ತೆಂಗು ಬೆಳೆಯಿಂದ ವಿಮುಖರಾಗಿದ್ದಾರೆ.
ದೇಶದಲ್ಲೇ ತೆಂಗು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿರುವ ಕರ್ನಾಟಕದಲ್ಲಿ ನುಸಿಪೀಡೆ ಬಾಧೆ ರೈತರನ್ನು (Coconut Farmers) ತೆಂಗು ಬೆಳೆಯಿಂದ ವಿಮುಖರನ್ನಾಗಿ ಮಾಡುತ್ತಿದೆ.
ತೆಂಗು ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ, ಕೊಬ್ಬರಿ ಹಾಗೂ ತೆಂಗು ಉತ್ಪನ್ನಗಳಿಗೆ ಬಂಪರ್ ಬೆಲೆ ಬಂದಿದೆ. ಆದರೆ, ತೆಂಗಿಗೆ ಕಂಟಕವಾಗಿರುವ ಕಪ್ಪು ತಲೆಯ ಕ್ಯಾಟ್‌ಪಿಲ್ಲರ್ ಹಾಗೂ ರೆಡ್ ಫಾಮ್ ಇವಿಲ್ ಕೀಟಗಳ ಕಾಟಕ್ಕೆ ರೈತರು ಹೈರಾಣಾಗಿ ತೆಂಗು ಬೆಳೆಯನ್ನೇ ಕೈ ಬಿಟ್ಟು ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ತೆಂಗು ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
ಕ್ಷೀಣಿಸುತ್ತಿದೆ ತೆಂಗು ಬೆಳೆಯ ವಿಸ್ತೀರ್ಣ
ʼಕಲ್ಪವೃಕ್ಷʼ ಪ್ರದೇಶಗಳಲ್ಲಿ ಅಡಿಕೆ, ದಾಳಿಂಬೆ ಹಾಗೂ ತರಕಾರಿ ಬೆಳೆಗಳು ತಲೆ ಎತ್ತಿವೆ. ರಾಜ್ಯದಲ್ಲಿ ಅತೀ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಗಳಾದ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರದಲ್ಲಿ ನಾನಾ ಕಾರಣಗಳಿಂದ ತೆಂಗು ಬೆಳೆಯ ವಿಸ್ತೀರ್ಣ ಕಡಿಮೆಯಾಗುತ್ತಿದೆ.
2022-23 ರಲ್ಲಿ 6.96 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಬೆಳೆ ಇತ್ತು. 2023-24 ರಲ್ಲಿ ಈ ಪ್ರದೇಶ 5.76 ಲಕ್ಷ ಹೆಕ್ಟೇರ್ ಗೆ ಇಳಿಕೆಯಾಗಿದೆ. ಅಚ್ಚರಿ ಎಂದರೆ ಅತೀ ಹೆಚ್ಚು ತೆಂಗು ಬೆಳೆಯುವ ಕೇರಳ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಬೆಳೆ ಪ್ರದೇಶ ಕಡಿಮೆಯಾಗುತ್ತಿದೆ. ತೆಂಗಿನ ಬೆಳೆ ವಿಸ್ತೀರ್ಣದಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ತೆಂಗು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ಅಸಮರ್ಪಕ ನಿರ್ವಹಣೆ
ತೆಂಗಿನ ಬೆಳೆ ಕ್ಷೀಣಿಸಲು ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣ. ತೆಂಗಿನ ಮರಗಳ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳನ್ನು ನೀಡಬೇಕಿದೆ. ಆದರೆ, ಬಹುತೇಕರು ತೆಂಗಿನ ಸಸಿ ನೆಟ್ಟ ಮರುಕ್ಷಣದಿಂದಲೇ ನಿರ್ಲಕ್ಷ್ಯ ವಹಿಸುತ್ತಾರೆ. ಕೇವಲ ಉಪ್ಪು ಹಾಕುವುದರಿಂದ ತೆಂಗಿಗೆ ಲಾಭವಿಲ್ಲ. ಗಿಡದ ಬೆಳವಣಿಗೆಗೆ ಸಾರಜನಕ, ರಂಜಕ, ಪೊಟ್ಯಾಶ್ ಗೊಬ್ಬರ ನೀಡಬೇಕು. ನಿಯಮಿತವಾಗಿ ನೀರು ಹಾಗೂ ವರ್ಷಕ್ಕೆರಡು ಬಾರಿ ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು. ತೆಂಗಿನ ಸಸಿಗಳ ನಿರ್ವಹಣೆ ಕೊರತೆಯಿಂದ ಮರಗಳು ರೋಗಕ್ಕೆ ತುತ್ತಾಗುತ್ತವೆ. ಕ್ರಮೇಣ ಗಿಡಗಳು ಸಾಯುತ್ತವೆ.
ಬೆಂಬಿಡದೇ ಕಾಡುವ ರೋಗಗಳು
ತೆಂಗಿಗೆ ಆವರಿಸುವ ಸುಳಿರೋಗವೇ ಬೆಳೆಗೆ ಮಾರಕವಾಗಿದೆ. ರೆಡ್ ಫಾಮ್ ಇವಿಲ್ ಕೀಟ, ಕಪ್ಪುತಲೆಯ ಹುಳು ಕಾಟದಿಂದ ಶೇ 10-15 ರಷ್ಟು ಮರಗಳು ನಾಶವಾಗುತ್ತಿವೆ. ಕರಾವಳಿಯಲ್ಲಿ ಹಣಬೆ ರೋಗ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ.
ಕಪ್ಪುತಲೆ ಹುಳು ಕಾಟ ಇಲ್ಲಿಯವರೆಗೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಗಿಡಕ್ಕೆ ಆಹಾರ ಉತ್ಪಾದನೆಯ ಪತ್ರಹರಿತ್ತು ಸಾಮರ್ಥ್ಯ ಕಡಿಮೆಯಾಗಲಿದೆ. ಆಗ ತೆಂಗಿನ ಮರಗಳು ಸತ್ವ ಕಳೆದುಕೊಂಡು ಸಾಯುತ್ತವೆ. ಇನ್ನು ತೆಂಗಿನ ಉತ್ಪನ್ನಗಳ ಆಮದು ಹೆಚ್ಚಾಗಿರುವುದು ಕೂಡ ಬೆಳೆಯ ಪ್ರದೇಶ ಕ್ಷೀಣಿಸಲು ಕಾರಣವಾಗಿದೆ ಎಂದು ಜಿಕೆವಿಕೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಮಲ್ಲಿಕಾರ್ಜುನ ಗೌಡ ‘’ದ ಫೆಡರಲ್ ಕರ್ನಾಟಕ’’ಕ್ಕೆ ತಿಳಿಸಿದರು.
ಪರ್ಯಾಯ ಬೆಳೆಗಳತ್ತ ಚಿತ್ತ
ತೆಂಗು ವಾರ್ಷಿಕ ಬೆಳೆಯಾಗಿದೆ. ಸಸಿ ನಾಟಿ ಮಾಡಿ ಐದಾರು ವರ್ಷದ ಬಳಿಕ ಫಸಲು ನೀಡುತ್ತದೆ. ಆದರೆ, ರೈತರಿಗೆ ತ್ವರಿತವಾಗಿ ಆದಾಯ ಸಿಗುವಂತಿರಬೇಕು. ಹಾಗಾಗಿ ಅಧಿಕ ಲಾಭ ತಂದುಕೊಡುವ ಅಲ್ಪಾವಧಿ ಬೆಳೆಗಳತ್ತ ಹೆಚ್ಚು ವಾಲಿದ್ದಾರೆ. ತೆಂಗಿಗೆ ಪರ್ಯಾಯವಾಗಿ ದಾಳಿಂಬೆ, ಅಡಿಕೆ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಕೆಲವರು ತೆಂಗಿನ ನಡುವೆಯೇ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದೂ ಕೂಡ ತೆಂಗು ಬೆಳೆ ವಿಸ್ತೀರ್ಣ ಕಡಿಮೆಯಾಗಲು ಕಾರಣವಾಗಿದೆ ಎಂದು ತಿಳಿಸಿದರು.
ನಾಟಿ ತೆಂಗಿನ ಮರಗಳು ಕನಿಷ್ಠ 60 ವರ್ಷ ಇಳುವರಿ ನೀಡುತ್ತವೆ. ಈಗ ಬಹುತೇಕ ಕಡೆಗಳಲ್ಲಿ ಇಳುವರಿ ಅವಧಿ ಮುಗಿದು, ರೋಗಗಳಿಂದ ನಾಶವಾಗಿವೆ. ಇದರಿಂದ ಶೇ 10ರಷ್ಟು ತೆಂಗಿನ ಬೆಳೆ ಕಡಿಮೆಯಾಗಿರಬಹುದು. ಆದಾಗ್ಯೂ ಸರ್ಕಾರಗಳು ತೆಂಗು ಬೆಳೆಗೆ ಪ್ರೋತ್ಸಾಹ ನೀಡುತ್ತಿವೆ. ಡ್ವಾರ್ಫ್, ಮಲಬಾರ್ ಹೈಬ್ರಿಡ್ ಸಸಿಗಳನ್ನು ನೆಡಲಾಗುತ್ತಿದೆ. ರೈತರಿಗೆ ಹಲವಾರು ಯೋಜನೆಗಳಲ್ಲಿ ರಿಯಾಯ್ತಿ ದರದಲ್ಲಿ ತೆಂಗಿನ ಸಸಿಗಳನ್ನು ಪೂರೈಸಲಾಗುತ್ತಿದೆ ಎಂದು ಬೆಂಗಳೂರಿನ ಫೈಟಾಟ್ರನ್ ಆಗ್ರೋ ಪ್ರಾಡೆಕ್ಟ್ ಇಂಡಿಯಾದ ಫೈಟಾಟ್ರನ್ ಸಂಶೋಧನಾ ಸಂಸ್ಥೆಯ ಕೃಷಿ ವಿಜ್ಞಾನಿ, ಬೆಳೆ ಶರೀರಶಾಸ್ತ್ರಜ್ಞ ಡಾ. ಪ್ರವೀಣ್ ಎಚ್.ಜಿ. ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಫೈಟಾಟ್ರನ್ ಸಂಶೋಧನಾ ಸಂಸ್ಥೆಯು ಜಿಕೆವಿಕೆ, ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯ ಹಾಗೂ ನಬಾರ್ಡ್ ಯೋಜನೆಗಳಡಿ ಬೆಳೆಗಳ ಸಂಶೋಧನೆ ನಡೆಸುತ್ತಿದೆ.
ರಾಜ್ಯದಲ್ಲಿ ಬೆರಳೆಣಿಕೆ ಜಿಲ್ಲೆಗಳಲ್ಲಿ ತೆಂಗು ಇದೆ. ದಾವಣಗೆರೆ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಬೆಳೆ ಇಲ್ಲ. ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದಲ್ಲಿ ತೆಂಗಿನ ಬೆಳೆಯಲ್ಲಿ ನುಸಿಪೀಡೆ, ರೋಗಬಾಧೆಯಿಂದ ಗಿಡಗಳು ಹಾಳಾಗಿವೆ ಎಂದು ಹೇಳಿದರು.
ತೆಂಗು ಜಾಗದಲ್ಲಿ ಅಡಿಕೆ, ದಾಳಿಂಬೆ
ತೆಂಗು ಬೆಳೆಯ ಬದಲಿ ಬೆಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೆಚ್ಚಿರುವುದರಿಂದ ತೆಂಗು ಬೆಳೆಗಾರರು ಅಡಿಕೆ ಬೆಳೆಯಲಾರಂಭಿಸಿದ್ದಾರೆ. ಕೆಲವು ಕಡೆಗಳಲ್ಲಿ ದಾಳಿಂಬೆಯನ್ನು ಬೆಳೆಯಲಾಗುತ್ತಿದೆ. ತೆಂಗಿಗಿಂತ ಹೆಚ್ಚು ವೆಚ್ಚದಾಯಕವಾಗಿದ್ದರೂ ಅಧಿಕ ಲಾಭ ಕಾಣುವ ಆಸೆಯಿಂದ ಪರ್ಯಾಯ ಬೆಳೆ ಬೆಳೆಯಲಾಗುತ್ತಿದೆ. ಕೆಲವು ಕಡೆ ಹಳೆಯ ತೆಂಗಿನ ತೋಟಗಳನ್ನು ತೆರವು ಮಾಡಲಾಗುತ್ತಿದೆ. ರಿಯಲ್ ಎಸ್ಟೇಟ್ ಕಾರಣಕ್ಕೂ ತೆಂಗಿನ ವಿಸ್ತೀರ್ಣ ಕಡಿಮೆಯಾಗುತ್ತಿದೆ ಎಂಬುದು ಕೃಷಿ ಅರ್ಥಶಾಸ್ತ್ರಜ್ಞ ಪ್ರವೀಣ್ ಅಭಿಪ್ರಾಯ.
ವೈಜ್ಞಾನಿಕ ಬೆಲೆಯಿಂದ ತೆಂಗಿಗೆ ಉಳಿವು
ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರಗಳು ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದಂತೆ ತೆಂಗಿನಕಾಯಿಗೆ ಘೋಷಿಸಿದರೆ ತೆಂಗಿನ ಬೆಳೆ ಉಳಿಯಲಿದೆ. ವಿಸ್ತೀರ್ಣವೂ ಹೆಚ್ಚಲಿದೆ. ಕನಿಷ್ಠ ಬೆಂಬಲ ದರ ನಿಗದಿ ಮಾಡುವುದರಿಂದ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಬರಲಿದೆ. ಆಗ ಅದೂ ಕೂಡ ಉದ್ಯಮದ ರೂಪ ಪಡೆದು, ರೈತರಿಗೆ ವರದಾನವಾಗಲಿದೆ ಎಂದು ಜಿಕೆವಿಕೆ ಹಿರಿಯ ಕ್ಷೇತ್ರ ಅಧೀಕ್ಷಕ ಮಲ್ಲಿಕಾರ್ಜುನ ಗೌಡ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.
ಮಧ್ಯವರ್ತಿಗಳ ಪಾಲಾದ ತೆಂಗಿನ ಲಾಭ
ತೆಂಗು ಬೆಳೆಗಾರರು ರೋಗಭಾದೆ ಜೊತೆಗೆ ಮಾರುಕಟ್ಟೆಯಲ್ಲೂ ಮೋಸ ಹೋಗುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು ಫಸಲು ಬೆಳೆದರೂ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಅದರ ಲಾಭ ರೈತರಿಗೆ ದಕ್ಕುತ್ತಿಲ್ಲ. ಎಳೆನೀರು, ತೆಂಗಿನಕಾಯಿ,ತೆಂಗು ಉತ್ಪನ್ನಗಳಿಂದಲೂ ಬೆಳೆಗಾರರು ಯಾವುದೇ ಲಾಭ ಕಾಣದಂತಾಗಿದೆ.
ತುಮಕೂರಿನ ಚಿಕ್ಕನಹಳ್ಳಿಯಲ್ಲಿ ಎಳನೀರು ಮಾರುಕಟ್ಟೆ ಇದೆ. ಅಲ್ಲಿ ರೈತರು ತರುವ ಎಳನೀರನ್ನು ಕೇವಲ 3ರೂ.ಗಳಿಗೆ ಮಾರಾಟವಾಗಲಿದೆ. ಮಧ್ಯವರ್ತಿಗಳು, ಎಳನೀರು ಮಾರಾಟಗಾರರು ಕಡಿಮೆ ಬೆಳೆಗೆ ಖರೀದಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರೈತರಿಗೆ ಮಾತ್ರ ಪೈಸೆ ಲೆಕ್ಕದಲ್ಲಿ ಸೇರುತ್ತಿದೆ.
ಇತ್ತೀಚೆಗೆ ಟೆಕ್ಕಿಗಳು ಕೂಡ ಎಳನೀರನ್ನು ಸಗಟು ರೂಪದಲ್ಲಿ ಖರೀದಿಸಿ ಮಾರಾಟ ಮಾಡುವ ಮೂಲದ ಲಾಭ ಗಳಿಸುತ್ತಿದ್ದಾರೆ. ಕೆಲ ಎಂಜಿನಿಯರ್‌ಗಳು ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಪ್ರವೀಣ್ ತಮ್ಮ ಅನುಭವ ಹಂಚಿಕೊಂಡರು.
ಬೆಳೆ ವಿಸ್ತೀರ್ಣ ಕಡಿಮೆಯಾಗಿಲ್ಲ
ರಾಜ್ಯದಲ್ಲಿ ತೆಂಗಿನ ಬೆಳೆ ವಿಸ್ತೀರ್ಣ ಕಡಿಮೆಯಾಗಿಲ್ಲ. ರಾಜ್ಯದಲ್ಲಿ 7.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಸಮೀಕ್ಷೆ ಮಾಡಲಾಗಿದೆ. ಆದರೆ, ಸಮೀಕ್ಷೆಯಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸಗಳಾಗಿದ್ದು, ಮರು ಸರ್ವೇ ಮಾಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲಾಖೆ ಅಂದಾಜಿನ ಪ್ರಕಾರ 2023-24ನೇ ಸಾಲಿಗಿಂತ 25 ಸಾವಿರ ಹೆಕ್ಟೇರ್ ತೆಂಗಿನ ಬೆಳೆ ಹೆಚ್ಚಾಗಿದೆ. ನಿಖಿರ ಅಂಕಿ ಅಂಶವು ಮರು ಸರ್ವೇ ಮೂಲಕ ತಿಳಿಯಲಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕದಿರೇಗೌಡ ಅವರು ದ ಫೆಡರಲ್‌ಕರ್ನಾಟಕಕ್ಕೆ ತಿಳಿಸಿದರು.