
Internal Reservation | ಪರಿಶಿಷ್ಟ ಜಾತಿಯ ಒಳ ಮೀಸಲಾತಿ; ನ್ಯಾ. ನಾಗಮೋಹನದಾಸ್ ಆಯೋಗದ ಮಧ್ಯಂತರ ವರದಿ ಸಲ್ಲಿಕೆ ಇಂದು
ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಪ್ರಾತಿನಿಧ್ಯತೆ ಕಲ್ಪಿಸುವ ಕುರಿತು ಪ್ರಾಯೋಗಿಕ ಅಂಕಿಅಂಶ ಪಡೆದು ಒಳಮೀಸಲಾತಿ ಜಾರಿಗೆ ಸೂಕ್ತ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚನೆಯಾಗಿತ್ತು.
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ನೇತೃತ್ವದ ಆಯೋಗ ಇಂದು (ಮಾ. 27) ರಾಜ್ಯ ಸರ್ಕಾರಕ್ಕೆ ತನ್ನ ಮಧ್ಯಂತರ ವರದಿ ಸಲ್ಲಿಸಲಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಯೋಗವು ಹಲವು ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿ ಸಲ್ಲಿಸಲಿದೆ.
ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಪ್ರಾತಿನಿಧ್ಯತೆ ಕಲ್ಪಿಸುವ ಕುರಿತು ಪ್ರಾಯೋಗಿಕ ಅಂಕಿಅಂಶ(ಎಂಫರಿಕಲ್ ಡಾಟಾ) ಪಡೆದು ಒಳಮೀಸಲಾತಿ ಜಾರಿಗೆ ಸೂಕ್ತ ಶಿಫಾರಸು ಮಾಡುವಂತೆ 2024 ನ.14ರಂದು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ, 2 ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಬಳಿಕ ಅವಧಿಯನ್ನು ವಿಸ್ತರಿಸಲಾಗಿತ್ತು.
ಸಚಿವರ ಭೇಟಿ ಮಾಡಿದ ನಿಯೋಗ
ಒಳಮೀಸಲಾತಿ ಅನುಷ್ಠಾನದಲ್ಲಿ ಉಪಜಾತಿಯ ಗೊಂದಲ ನಿವಾರಣೆ ಮಾಡಲು ಕ್ರಮವಹಿಸುವಂತೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಅವರಿಗೆ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದ ನಿಯೋಗ ಮನವಿ ಮಾಡಿದೆ.
ಮಾದಿಗ ಸಮುದಾಯದ ಮೂಲ ಮಠವಾದ ಆದಿಜಾಂಬವ ಬೃಹ್ಮಠದ ಪೀಠಾಧ್ಯಕ್ಷರಾದ ಷಡಕ್ಷರಿ ಮುನಿದೇಶಿ ಕೇಂದ್ರ ಸ್ವಾಮೀಜಿ ಹಾಗೂ ರಾಜ್ಯ ಮಾತಂಗ ಜಾಗೃತಿ ಸಮಿತಿಯ ಗೌರವಾಧ್ಯಕ್ಷ ಆರ್.ಲೋಕೇಶ್ ನೇತೃತ್ವದ ನಿಯೋಗ ಕೆ.ಹೆಚ್. ಮುನಿಯಪ್ಪ ಅವರ ನಿವಾಸದಲ್ಲಿ ಒಳ ಮೀಸಲಾತಿ ಜಾರಿಯ ಕುರಿತಾಗಿ ಚರ್ಚಿಸಿತು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಾಗೂ ಹಾಗೂ ಅತಿದೊಡ್ಡ ಸಂಖ್ಯೆಯಲ್ಲಿ ಇರುವ ಆದಿ ಕರ್ನಾಟಕ/ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ನಿರ್ದಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಹೊಂದಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಇದೇ ಸಮಯದಲ್ಲಿ ಸಚಿವರು ಕಳೆದ ಒಂದು ವಾರದಿಂದ ಮುಖ್ಯ ಮಂತ್ರಿಗಳು ಹಾಗೂ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಠಾನ ಮಾಡುವ ಕುರಿತ ಬದ್ಧತೆಯ ಬಗ್ಗೆ ಹಾಗೂ ಯಾವೆಲ್ಲ ರೀತಿಯಲ್ಲಿ ಸುಪ್ರೀಂ ಕೋರ್ಟ್ ನ ಸೂಚನೆಯ ಮೇರೆಗೆ ಸಿದ್ದತೆಗಳು ನಡೆಸಲಾಗುತ್ತಿದೆ ಎಂಬುದನ್ನು ಸವಿವರವಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಯ ಎಲ್ಲಾ ಶಾಸಕರು ಒಳ ಮೀಸಲಾತಿ ಅನುಷ್ಠಾನದ ಸಹಮತಕ್ಕೆ ಬರಲಾಗಿದ್ದು ವೈಜ್ಞಾನಿಕ ಹಾಗೂ ಸಾಮಾಜಿಕ ನ್ಯಾಯವನ್ನು ಎಲ್ಲಾ ಸಮುದಾಯಗಳು ಹೊಂದುವಂತೆ ಸರ್ಕಾರ ಮೀಸಲಾತಿ ಹಂಚಿಕೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ.ಒಳಮೀಸಲಾತಿಯನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರುವುದಕ್ಕೆ ರಾಜ್ಯ ಸರಕಾರ ಬದ್ಧವಾಗಿದ್ದು ಈಗ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ್ ಹಾಗೂ ಉತ್ತರದ ಹರಿಯಾಣ ರಾಜ್ಯಗಳಲ್ಲಿ ಒಳ ಮೀಸಲಾತಿಯ ಅನುಷ್ಠಾನದ ನಿರ್ಣಯಕ್ಕೆ ಬರಲು ಸಾಧ್ಯವಾಗಲು ಮೂಲ ಕಾರಣ ಹಿಂದೆ ಈ ರಾಜ್ಯಗಳಲ್ಲಿ ಮೀಸಲಾತಿ ವರ್ಗೀಕರಣ ಜಾರಿಯಲ್ಲಿತ್ತು ಎಂದು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ ಈ ಕುರಿತು ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಸಮಿತಿಯ ಶಿಫಾರಸ್ಸು ಇದ್ದವು. ಅದೆಲ್ಲವೂ ಆಗಸ್ಟ್1, 2024ರ ಸುಪ್ರೀಂ ಕೋರ್ಟ್ ನ ತೀರ್ಪು ಬಂದ ನಂತರ ಕೋರ್ಟ್ ಸೂಚನೆಗಳನ್ನು ಆಯಾ ರಾಜ್ಯಗಳ ಸರ್ಕಾರಗಳು ಪಾಲಿಸಲೇ ಬೇಕಿದೆ. ಸದಾಶಿವ ಆಯೋಗದ ವರದಿಯಲ್ಲಿ ಸುಮಾರು ಎಂಟು ಲಕ್ಷ ಪರಿಶಿಷ್ಟರ ಜಾತಿಯ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅದಕ್ಕಿಂತ ಮುಖ್ಯವಾಗಿ ಜಾತಿಯ ಗುಂಪುಗಳಾಗಿರುವ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಹೆಸರಿನಲ್ಲಿ 36 ಲಕ್ಷಕ್ಕೂ ಅಧಿಕ ಮಂದಿ ಗುರುತಿಸಿಕೊಂಡಿರುವುದು ಅತ್ಯಂತ ಗೊಂದಲಕ್ಕೆ ಕಾರಣವಾಗಿದೆ. ಇದು ಮುಂದೆ ಬಹಳ ದೊಡ್ಡ ಸಮಸ್ಯೆ ಆಗಿ ಜಾತಿ ಜಾತಿಗಳ ಮಧ್ಯೆ ವೈಷಮ್ಯಕ್ಕೆ ಕಾರಣವಾಗುವುದರಿಂದ ಇದನ್ನು ಬಗೆಹರಿಸಲೇಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.
ಈ ವಿಷಯದಲ್ಲಿ ನ್ಯಾ.ನಾಗಮೋಹನದಾಸ್ ಆಯೋಗಕ್ಕೂ ಕೂಡ ದೊಡ್ಡ ತಲೆ ನೋವಿನ ವಿಚಾರವಾಗಿರುವುದರಿಂದ ಎಕೆ, ಎಡಿ ಹಾಗೂ ಎಎ ಗುಂಪುಗಳಲ್ಲಿರುವ ಜಾತಿಗಳು ತಮ್ಮ ತಮ್ಮ ಮೂಲ ಉಪ ಜಾತಿಗಳ ಹೆಸರಿನಲ್ಲೇ ಜಾತಿ ಪ್ರಮಾಣ ಪತ್ರ ಪಡೆಯುವಂತೆ ಮಾಡಲು ಕಾನೂನು ಸಲಹೆ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದರು.