ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ | ಸಂಬಳ ಕೇಳಿದ್ದಕ್ಕೆ ಹಲ್ಲೆ ಮಾಡಿ, ನಗ್ನ ವಿಡಿಯೋ ಮಾಡಿ ಬೆದರಿಸಿದ ಮಾಲೀಕ
x

ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ | ಸಂಬಳ ಕೇಳಿದ್ದಕ್ಕೆ ಹಲ್ಲೆ ಮಾಡಿ, ನಗ್ನ ವಿಡಿಯೋ ಮಾಡಿ ಬೆದರಿಸಿದ ಮಾಲೀಕ


ಸಂಬಳ ಕೊಡುವುದಾಗಿ ಹೇಳಿ ಯುವಕನನ್ನು ಕರೆಸಿಕೊಂಡ ಅಂಗಡಿ ಮಾಲೀಕ ಬೆತ್ತದಿಂದ ಮನಬಂದಂತೆ ಹಲ್ಲೆ ಥಳಿಸಿ, ನಗ್ನಗೊಳಿಸಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಉತ್ತರಹಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಶರೀಫ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಹಾಸಿಗೆ ವ್ಯಾಪಾರಿ ಶೆಕ್ಷಾವಾಲ ಎಂಬ ಅಂಗಡಿ ಮಾಲೀಕ ಹಲ್ಲೆ ನಡೆಸಿ ನಗ್ನ ಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾನೆ.

ಹಲ್ಲೆಗೊಳಗಾದ ಶರೀಫ್ ಹಾಗೂ ಶೆಕ್ಷಾವಲ ಇಬ್ಬರು ಸಂಬಂಧಿಕರು. ಹಾಸಿಗೆ ಕೆಲಸಕ್ಕೆ ಬೇಕು ಎಂದು ಶರೀಫ್‌ನನ್ನು ಆಂಧ್ರದಿಂದ ಶೆಕ್ಷಾವಲ ಕರೆಸಿಕೊಂಡಿದ್ದ. ಹೆಚ್ಚಿಗೆ ಕೆಲಸ ಕೊಟ್ಟು ಕಡಿಮೆ ಸಂಬಳ ನೀಡಿದ್ದು, ಹಗಲು ರಾತ್ರಿ ಎನ್ನದೇ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದ. ಇದರಿಂದ ಬೇಸತ್ತು ಶರೀಫ್ ಕೆಲಸ ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಆ ಬಳಿಕ ಶರೀಫ್‌, ಬಾಬು ಎಂಬ ಮತ್ತೋರ್ವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.

ಈ ವಿಚಾರ ತಿಳಿದು ಶೆಕ್ಷಾವಲ, ಶರೀಫ್ ಗೆ ಕರೆ ಮಾಡಿ, ಕೆಲಸ ಬಿಟ್ಟು ಹೋಗಿದಕ್ಕೆ ಬೈದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶರೀಫ, ಶೆಕ್ಷಾವಲನ ತಾಯಿ ಬಗ್ಗೆ ನಿಂದಿಸಿದ್ದಾರೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಶೆಕ್ಷಾವಲ ಬಾಕಿ ಸಂಬಳ ಕೊಡೊದಾಗಿ ಯುವಕನನ್ನು ತನ್ನ ಅಂಗಡಿಗೆ ಕರೆಸಿ ಬೆತ್ತದಿಂದ ಮನಬಂದಂತೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ಮಾಡಿದ್ದಾನೆ. ಅಲ್ಲದೆ ನನ್ನ ತಾಯಿ ಬಗ್ಗೆಯೇ ಅವಾಚ್ಯವಾಗಿ ನಿಂದಿಸಿದ್ದಾನೆ ಎಂದು ಯುವಕನ ವಿರುದ್ಧ ಅಂಗಡಿ ಮಾಲೀಕ ದೂರು ದಾಖಲಿಸಿದ್ದು ಸದ್ಯ ಈಗ ಯುವಕನ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ಸುಬ್ರಮಣ್ಯಪುರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಜುಲೈ 24ರಂದು ಮಾಲೀಕ ಶೆಕ್ಷಾವಲ ಶರೀಫನಿಗೆ ಕರೆ ಮಾಡಿ ಬಾಕಿ ಸಂಬಳ ಕೊಡುತ್ತೇನೆ ನೀನು ಉತ್ತರಹಳ್ಳಿಯ ಅಂಗಡಿಗೆ ಬಾ ಎಂದು ತಿಳಿಸಿದ್ದಾನೆ. ದುಡಿದ ಹಣ ಪಡೆಯುವ ಆಸೆಗೆ ಶರೀಫ ತನ್ನ ಊರಿಂದ ಬಂದಿದ್ದಾನೆ. ಆದರೆ ಹಣ ಕೊಡೊದಾಗಿ ಕರೆಸಿ ಅಂಗಡಿಯ ಶೆಟರ್ ಎಳೆದು ಬೆತ್ತದಿಂದ ಮನ ಬಂದಂತೆ ಶರೀಫನ ಮೇಲೆ ಹಲ್ಲೆ ನಡೆಸಿ ನಗ್ನಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿ ಶೆಕ್ಷಾವಲ ಅಟ್ಟಹಾಸ ಮೆರೆದಿದ್ದಾನೆ.

ಇಷ್ಟೆಲ್ಲಾ ಆದ ಬಳಿಕ ತುಂಬಾ ಹೆದರಿದ್ದ ಶರೀಫ ತನ್ನ ಊರು ಸೇರಿಕೊಂಡಿದ್ದನು. ಇತ್ತ ಶರೀಫ್ ಊರು ಬಿಟ್ಟ ಬಳಿಕ ಶೆಕ್ಷಾವಾಲ ಸೀದಾ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾನೆಂದು ದೂರು ನೀಡಿದ್ದಾನೆ. ದೂರು ದಾಖಲಾದ ಹಿನ್ನಲೆ‌ ಪೊಲೀಸರು ಶರೀಫ್‌ನನ್ನು ಕರೆಸಿ ಬುದ್ದಿ ಹೇಳಿದ್ದಾರೆ. ಈ ವೇಳೆ ಶರೀಫ್, ನಾನು ಬೆಂಗಳೂರಿಗೆ ಮತ್ತೆ ಯಾವತ್ತೂ ಬರಲ್ಲ ಎಂದು ಹೇಳಿ ತನ್ನ ಊರಿಗೆ ಹೋಗಿದ್ದಾನೆ. ಈ ವೇಳೆ ಪೊಲೀಸರ ಬಳಿ ತನ್ನ ಮೇಲೆ ಆದ ಹಲ್ಲೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.

ಕೆಲ ದಿನಗಳ ಬಳಿಕ ಸುಬ್ರಮಣ್ಯಪುರ ಪೊಲೀಸರಿಗೆ ಶರೀಫ್​ ಹಲ್ಲೆಯ ವಿಡಿಯೋ ಸಿಕ್ಕಿತ್ತು. ವಿಡಿಯೋ ನೋಡಿದ ಪೊಲೀಸರು ಮತ್ತೆ ಶರೀಫ್‌ಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಒತ್ತಾಯಿಸಿದರು. ಬಳಿಕ ಶರೀಫ್​ ಬಳಿ ಹಲ್ಲೆ ಬಗ್ಗೆ ವಿಚಾರಿಸಿದ್ದು ಹಲ್ಲೆ ನಡೆದಿರುವ ವಿಚಾರವನ್ನು ಶರೀಫ್ ಬಾಯ್ಬಿಟ್ಟಿದ್ದಾನೆ. ಸದ್ಯ ಶರೀಫ್‌ನಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More
Next Story