ಇನ್ಫೋಸಿಸ್‌ ಭೂಮಿ ಮಾರಾಟ| ಐವರು ಅಧಿಕಾರಿಗಳ ತಲೆದಂಡಕ್ಕೆ ಕಾರಣವೇನು?
x

ಇನ್ಫೋಸಿಸ್‌ ಭೂಮಿ ಮಾರಾಟ| ಐವರು ಅಧಿಕಾರಿಗಳ ತಲೆದಂಡಕ್ಕೆ ಕಾರಣವೇನು?

ಇನ್ಫೋಸಿಸ್ ಕಂಪೆನಿಯು ಅತ್ತಿಬೆಲೆ ಸಮೀಪದ 53.5 ಎಕರೆ ಭೂಮಿಯನ್ನು 2025 ಡಿಸೆಂಬರ್ ತಿಂಗಳಲ್ಲಿ ರಿಯಲ್ ಎಸ್ಟೇಟ್ ಕಂಪೆನಿ ಪುರವಂಕರಾ ಸಮೂಹಕ್ಕೆ ಸುಮಾರು 250 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು.


ಆನೇಕಲ್‌ ತಾಲೂಕಿನ ಅತ್ತಿಬೆಲೆ ಸಮೀಪ ಇನ್ಫೋಸಿಸ್‌ಗೆ ಸೇರಿದ 53.5 ಎಕರೆ ಭೂಮಿಯನ್ನು ರಿಯಲ್‌ ಎಸ್ಟೇಟ್‌ ಕಂಪೆನಿಗೆ ಮಾರಾಟ ಮಾಡಿದ ಪ್ರಕ್ರಿಯೆಯಲ್ಲಿ ಕಾವೇರಿ 2.0 ನೋಂದಣಿ ತಂತ್ರಾಂಶ ದುರ್ಬಳಕೆ ಆರೋಪಗಳು ಕೇಳಿ ಬಂದಿವೆ.

ಕಾವೇರಿ 2.0 ತಂತ್ರಾಂಶದ ಲೋಪ ಹಾಗೂ ಅವಕಾಶಗಳನ್ನು ಬಳಸಿಕೊಂಡು 250 ಕೋಟಿ ರೂ. ಮೌಲ್ಯದ ಜಮೀನನ್ನು ನೋಂದಣಿ ಮಾಡಿಕೊಡಲಾಗಿದೆ ಎಂಬ ಆರೋಪದ ಮೇಲೆ ರಾಜ್ಯ ಸರ್ಕಾರ ಐವರು ಉಪ ನೋಂದಣಾಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದೆ. ಅಲ್ಲದೇ ನೋಂದಣಿ ಪ್ರಕ್ರಿಯೆ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸರ್ಕಾರ ಆದೇಶಿಸಿದೆ.

ಇನ್ಫೋಸಿಸ್ ಕಂಪೆನಿಯು ಅತ್ತಿಬೆಲೆ ಸಮೀಪದ 53.5 ಎಕರೆ ಭೂಮಿಯನ್ನು 2025 ಡಿಸೆಂಬರ್ ತಿಂಗಳಲ್ಲಿ ರಿಯಲ್ ಎಸ್ಟೇಟ್ ಕಂಪೆನಿ ಪುರವಂಕರಾ ಸಮೂಹಕ್ಕೆ ಸುಮಾರು 250 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು. ಮಾರಾಟ ಮಾಡಿದ ಭೂಮಿಯನ್ನು ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ಇನ್ಫೋಸಿಸ್ಗೆ ನೀಡಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಇನ್ಫೋಸಿಸ್ ಕಂಪೆನಿಯ ಮಾಜಿ ಸಿಎಫ್ಇ ಮೋಹನ್ ದಾಸ್ ಪೈ ಅವರು, ಇನ್ಫೋಸಿಸ್ ಮಾರಾಟ ಮಾಡಿರುವ ಭೂಮಿಯು ಸರ್ಕಾರದಿಂದ ರಿಯಾಯಿತಿ ದರದಲ್ಲಿ ಪಡೆದದ್ದಲ್ಲ. ಕ್ಯಾಂಪಸ್ ನಿರ್ಮಾಣಕ್ಕಾಗಿ ಖಾಸಗಿಯಾಗಿ ಖರೀದಿಸಿದ ಭೂಮಿ. ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ ಎಂದು ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಭೂಮಿ ಗೊಂದಲ, ನೋಂದಣಿಯಲ್ಲಿ ಲೋಪ

ಆನೇಕಲ್‌ ತಾಲೂಕಿನಲ್ಲಿ ಗೋಮಾಳ, ರಾಜಕಾಲುವೆ, ಕೆರೆ ವ್ಯಾಪ್ತಿ, ಸರ್ಕಾರಿ ಭೂಮಿ ಒತ್ತುವರಿ ಸಾಕಷ್ಟು ಪ್ರಮಾಣದಲ್ಲಿ ನಡೆದಿದೆ. ಅತ್ತಿಬೆಲೆಯಲ್ಲಿ ಇನ್ಫೋಸಿಸ್ ಮಾರಾಟ ಮಾಡಿರುವ 53.5 ಎಕರೆ ಜಮೀನಿನಲ್ಲಿ

ಇಂತಹದ್ದೇ ಸರ್ಕಾರಿ ಭೂಮಿಯ ಕೆಲ ಭಾಗಗಳು ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಮೂಲ ಆರ್‌ಟಿಸಿ, ಪಹಣಿ, ಸರ್ವೇ ದಾಖಲೆಗಳು, ಭೂಪರಿವರ್ತನೆ ಆದೇಶ, ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.

ಇನ್ಫೋಸಿಸ್ ಮಾರಾಟ ಮಾಡಿದ ಭೂಮಿ ಮೂಲತಃ ಖಾಸಗಿ ವ್ಯಕ್ತಿಗಳು, ರೈತರಿಗೆ ಸೇರಿದ ಕೃಷಿ ಭೂಮಿಯಾಗಿತ್ತು. ಕ್ರಮೇಣ ಕೆಲವರು ಜಮೀನು ಮಾರಾಟ ಮಾಡಿದ್ದಾರೆ. ಭೂಮಿಯು ಇನ್ಫೋಸಿಸ್ಗೆ ಸೇರಿದ ಬಳಿಕ ವಾಣಿಜ್ಯ ಉದ್ದೇಶಕ್ಕೆ ಬಳಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಜಮೀನು ನೋಂದಣಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಪಾತ್ರ ಇರಲಿದೆ.ಈ ಹಂತದಲ್ಲಿಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮಾರಾಟ ಮಾಡಿದ ಜಮೀನಿನಲ್ಲಿ ಕೆಲ ಭಾಗಗಳು ಸರ್ಕಾರಿ ಗೋಮಾಳ, ಕೆರೆ ಇರಬಹುದು ಎಂಬ ಶಂಕೆಯಿದೆ. ಅಲ್ಲದೇ ಭೂ ಪರಿವರ್ತನೆ ಹಾಗೂ ನೋಂದಣಿಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅಂತಿಮವಾಗಿ ಈ ಭೂಮಿಯನ್ನು ಇನ್ಫೋಸಿಸ್ ಕಂಪೆನಿಯು ಪುರವಂಕಾರಕ್ಕೆ ಮಾರಾಟ ಮಾಡಿರುವುದರಿಂದ ವಿಷಯ ಗಂಭೀರವಾಗಿದೆ.

ಐವರು ಅಧಿಕಾರಿಗಳ ಅಮಾನತು

ಇನ್ಫೋಸಿಸ್ ಜಮೀನನನ್ನು 40 ಸೇಲ್ ಡೀಡ್ಗಳ ಮೂಲಕ ನೋಂದಣಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಜಾಪುರ ಉಪ ನೋಂದಣಾಧಿಕಾರಿ ರವಿ ಸಂಕನಗೌಡ, ಎನ್.ಸತೀಶ್ ಕುಮಾರ್, ಶ್ರೀಧರ್ (ಉಸ್ತುವಾರಿ ಉಪ ನೋಂದಣಾಧಿಕಾರಿ), ಗಿರೀಶ್ ಚಂದ್ರ ಹಾಗೂ ಆರ್.ಪ್ರಭಾವತಿ ಅವರನ್ನು ಜ.2ರಂದು ರಾಜ್ಯ ಸರ್ಕಾರ ಅಮಾನತು ಮಾಡಿದೆ.

ಇನ್ಫೋಸಿಸ್ ಭೂಮಿ ವಹಿವಾಟಿನಲ್ಲಿ ವಿಚಾರಣೆ ಬಾಕಿ ಉಳಿಸಿ ಐವರನ್ನು ಅಮಾನತು ಮಾಡಲಾಗಿದೆ. ಈ ಐವರಲ್ಲಿ ಒಬ್ಬರು ನಿವೃತ್ತರಾಗಿದ್ದಾರೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.

ಕಾವೇರಿ 2.0 ನೋಂದಣಿ ತಂತ್ರಾಂಶವು ನ್ಯಾಯಾಲಯದ ಆದೇಶಗಳ ಆಧಾರದ ಮೇಲೆ ನೋಂದಣಿಗೆ ವಿನಾಯಿತಿ ನೀಡಲಿದೆ. ಆಪಾದಿತ ಅಧಿಕಾರಿಗಳು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶ ಇಲ್ಲದಿರುವ ದಾಖಲೆಗಳಿಗೆ ʼಕೋರ್ಟ್ ಆದೇಶʼದ ಆಯ್ಕೆ ತೋರಿಸಿ ನೋಂದಣಿ ಮಾಡಿದ್ದಾರೆ. ಇನ್ಫೋಸಿಸ್ ಸೇರಿದಂತೆ ಹಲವಾರು ಸೇಲ್ ಡೀಡ್ಗಳನ್ನು ಸರ್ಜಾಪುರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ ಎಂದು ದೂರಿದ್ದಾರೆ.

ಬಾಣಸವಾಡಿ, ವರ್ತೂರು ಮತ್ತು ಹಲಸೂರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೂ ಇ-ಸ್ವತ್ತು ತಂತ್ರಾಂಶದಿಂದ ಇ-ಖಾತಾ ಮಾಹಿತಿ ತರಿಸಿಕೊಳ್ಳದ ಹೊರತಾಗಿಯೂ ಸೇಲ್ ಡೀಡ್‌ಗಳನ್ನು ಅಕ್ರಮವಾಗಿ ನೋಂದಾಯಿಸಲಾಗಿದೆ ಎಂದು ಮುಹಿಲನ್ ಹೇಳಿದ್ದಾರೆ.

ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇನ್ಫೋಸಿಸ್‌ ಭೂ ವ್ಯವಹಾರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಇನ್ಫೋಸಿಸ್ಗೆ ಸೇರಿದ ಭೂಮಿ ಮಾರಾಟ ಕುರಿತು ಬಂದಿರುವ ದೂರುಗಳ ಆಧಾರದ ಮೇಲೆ ಬೆಂಗಳೂರು ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ವ್ಯವಹಾರದ ಮೌಲ್ಯ 250 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಭೂಮಿಯ ಹಕ್ಕುಸ್ವಾಮ್ಯ, ಮಂಜೂರಾತಿ ದಾಖಲೆ ಹಾಗೂ ಮಾರಾಟ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಆಂತರಿಕ ಕಾನೂನಿನಂತೆ ಮಾರಾಟ; ಇನ್ಫೋಸಿಸ್‌ ಸ್ಪಷ್ಟನೆ

“ಬೆಂಗಳೂರಿನ ಅತ್ತಿಬೆಲೆ ಬಳಿ ಇನ್ಫೋಸಿಸ್‌ಗೆ ಸೇರಿದ 53 ಎಕರೆ ಭೂಮಿಯ ಮಾರಾಟ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯ ಆರೋಪಗಳಿವೆ. ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಐದು ಉಪ ನೋಂದಣಾಧಿಕಾರಿಗಳನ್ನು ಅಮಾನತುಗೊಳಿಸಿದೆ. ಜತೆಗೆ ತನಿಖೆಗೂ ಆದೇಶಿಸಿದೆ. ಮತ್ತೊಂದೆಡೆ, ಇನ್ಫೋಸಿಸ್ ಸಂಸ್ಥೆಯು ಪುರುವಂಕರಾ ರಿಯಲ್ ಎಸ್ಟೇಟ್ ಕಂಪನಿಗೆ ಮಾರಾಟ ಮಾಡಿದ ಭೂಮಿಯಲ್ಲಿ ಸರ್ಕಾರಿ ಗೋಮಾಳ ಮತ್ತು ಕೆರೆಯ ಪ್ರದೇಶವೂ ಇತ್ತು ಎಂಬ ದೂರುಗಳಿವೆ. ಈ ಸಂಬಂಧದ ಆರೋಪಗಳಿಗೆ ನಿಮ್ಮ ಸ್ಪಷ್ಟೀಕರಣದ ಅಗತ್ಯವಿದೆ. ಆದ್ದರಿಂದ, ನೀವು ನೀಡುವ ಸ್ಪಷ್ಟೀಕರಣ ಅಗತ್ಯವಾಗಿದೆ” ಎಂದು ʼದ ಫೆಡರಲ್ ಕರ್ನಾಟಕʼ ಇನ್ಫೋಸಿಸ್ ಸಂಸ್ಥೆಯನ್ನು ಇ-ಮೇಲ್ ಮುಖಾಂತರ ಸಂಪರ್ಕಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್ ಮುಂಬೈ ಕಚೇರಿಯ ಹಿರಿಯ ಲೆಕ್ಕ ವ್ಯವಸ್ಥಾಪಕ ರಿಯಾ ಮಿಸ್ತ್ರಿ ಅವರು, “ಇನ್ಫೋಸಿಸ್‌ನ ಆಸ್ತಿ ಮಾರಾಟ ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನ ಅತ್ತಿಬೆಲೆಯ ಭೂಮಿಯನ್ನು ಮಾರಾಟ ಮಾಡಲು ಮತ್ತು ಆಸ್ತಿ ಬಳಕೆಯನ್ನು ಅತ್ಯುತ್ತಮವಾಗಿಸಲು ತೀರ್ಮಾನಿಸಿದ್ದೆವು. ಇನ್ಫೋಸಿಸ್ನ ನೀತಿಗಳು, ಬಾಹ್ಯ ಅನುಮೋದನೆಗಳು ಮತ್ತು ನಿಯಂತ್ರಕ ಅವಶ್ಯಕತೆಗಳ ಅನುಸರಣೆಗೆ ಅನುಗುಣವಾಗಿ ಭೂಮಿ ಮಾರಾಟ ಮಾಡಲಾಗಿದೆ. ಇದಲ್ಲದೆ, ಮಾರಾಟ ಮಾಡಲಾದ ಭೂಮಿಯನ್ನು ಇನ್ಫೋಸಿಸ್ ವಾಣಿಜ್ಯೇತರ ಮತ್ತು ಕೈಗಾರಿಕೇತರ ಭೂಮಿಯಾಗಿ ಮಾರುಕಟ್ಟೆ ಮೌಲ್ಯದಲ್ಲಿ ಖರೀದಿಸಿತ್ತು, ನಾವು ಸರ್ಕಾರದಿಂದ ಯಾವುದೇ ಭೂಮಿಯನ್ನು ಪಡೆದಿರಲಿಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Read More
Next Story