
ʼದ ಫೆಡರಲ್ ಕರ್ನಾಟಕʼಕ್ಕೆ ಜಲಮಂಡಳಿ ಅಧ್ಯಕ್ಷ ಡಾ.ರಾಮಪ್ರಸಾತ್ ಸಂದರ್ಶನ ನೀಡಿದರು
The Federal Interview| ಬೆಂಗಳೂರು ಕಲುಷಿತ ನೀರು ಸಮಸ್ಯೆ: ಜಲಮಂಡಳಿ ಅಧ್ಯಕ್ಷ ; ಡಾ. ರಾಮಪ್ರಸಾತ್ ಹೇಳಿದ್ದೇನು?
ರಾಜ್ಯ ಸರ್ಕಾರದ ನೆರವಿನೊಂದಿಗೆ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ಅನುದಾನ ಪಡೆದುಕೊಂಡು ಯೋಜನೆ ಅನುಷ್ಠಾನ ಮಾಡಲಾಗುವುದು. ಯೋಜನೆಯನ್ನು ಹಂತ ಹಂತಗಳಲ್ಲಿ ಕೈಗೊಳ್ಳುವುದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶವಿದೆ.
ಕಲುಷಿತ ನೀರು ಪೂರೈಕೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ʼಶಾಶ್ವತ ಪರಿಹಾರʼ ಕಂಡುಕೊಳ್ಳುವತ್ತ ಹೆಜ್ಜೆ ಇರಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿರುವ ಸುಮಾರು 40 ವರ್ಷದ ನೀರು ವಿತರಣಾ ಜಾಲ ಅಥವಾ ಪೈಪ್‌ಲೈನ್ ಮಾರ್ಗವನ್ನು ಸಂಪೂರ್ಣ ಬದಲಿಸಿ, ಹೊಸ ಪೈಪ್‌ಲೈನ್ ಅಳವಡಿಕೆಗೆ ನಿರ್ಧರಿಸಿದೆ. ಇದಕ್ಕಾಗಿ 3000 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ರೂಪಿಸಲು ಸಿದ್ಧತೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ನೀರು ನಿರ್ವಹಣೆ ಕುರಿತಂತೆ ಜಲಮಂಡಳಿ ಅಧ್ಯಕ್ಷ ಡಾ. ವಿ.ರಾಮಪ್ರಸಾತ್ ಮನೋಹರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಭವಿಷ್ಯದ ಹಲವು ಯೋಜನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ನೀರು ಸರಬರಾಜು ಮಾಡುತ್ತಿರುವ ಪೈಪ್‌ಲೈನ್ ಸುಮಾರು 35–40 ವರ್ಷಗಳ ಹಿಂದೆ ಅಳವಡಿಸಿದ್ದಾಗಿದೆ. ಹಲವು ಕಡೆ ಪೈಪ್‌ಲೈನ್ ಹಾಳಾದ ಅಥವಾ ತುಕ್ಕು ಹಿಡಿದ ಕಾರಣ ಸೋರಿಕೆಯಾಗುತ್ತಿದೆ. ಕೆಲವೆಡೆ ತ್ಯಾಜ್ಯ ನೀರು ಮಿಶ್ರಣವಾಗುವ ಆತಂಕವೂ ಇದೆ. ಸಾರ್ವಜನಿಕರಿಂದ ಬಂದ ಇಂತಹ ದೂರುಗಳ ಆಧಾರದ ಮೇಲೆ ಇಡೀ ಬೆಂಗಳೂರಿನಲ್ಲಿ ಹೊಸ ಪೈಪ್‌ಲೈನ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಇದಕ್ಕೆ ಅಂದಾಜು 3000 ಕೋಟಿ ವೆಚ್ಚವಾಗಲಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದರು.
ಹೊಸ ಪೈಪ್‌ಲೈನ್ ಅಳವಡಿಕೆಯಿಂದ ಕಲುಷಿತ ನೀರು ಪೂರೈಕೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರದ ನೆರವಿನೊಂದಿಗೆ, ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದ ಅನುದಾನ ಪಡೆದುಕೊಂಡು ಯೋಜನೆ ಅನುಷ್ಠಾನ ಮಾಡಲಾಗುವುದು. ಯೋಜನೆಯನ್ನು ಹಂತ ಹಂತಗಳಲ್ಲಿ ಕೈಗೊಳ್ಳುವುದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶವಿದೆ ಎಂದರು.
ಹೊಸ ಪೈಪ್‌ಲೈನ್ ಜೋಡಣೆ ಆರಂಭ
ತೀರಾ ಹಳೆಯದಾದ ಪೈಪ್‌ಲೈನ್ ಹೊಂದಿರುವ ಬೆಂಗಳೂರಿನ ಶಿವಾಜಿನಗರ, ರಸೆಲ್ ಮಾರುಕಟ್ಟೆ, ಚಾಮರಾಜಪೇಟೆ ಸೇರಿದಂತೆ ಕೆಲವೆಡೆ ಪೈಪ್ ಬದಲಾವಣೆಯ ಕಾರ್ಯ ಆರಂಭಿಸಲಾಗಿದೆ. ನೀರಿನ ಸೋರಿಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಯೋಜನೆ ಯಶಸ್ವಿಯಾದ ಬಳಿಕ ಇಡೀ ನಗರಕ್ಕೆ ವಿಸ್ತರಿಸಲು ಸವಿವರವಾದ ತಾಂತ್ರಿಕ ಹಾಗೂ ಆರ್ಥಿಕ ಯೋಜನಾ ವರದಿ ಸಿದ್ಧಪಡಿಸಲು ಜಲಮಂಡಳಿ ನಿರ್ಧರಿಸಿದೆ.
ಹೊಸ ಪೈಪ್ಲೈನ್ ಅಳವಡಿಸಿದರೆ ಕಲುಷಿತ ನೀರಿನ ಸಮಸ್ಯೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ. ನೀರಿನ ಸೋರಿಕೆ ಗಣನೀಯವಾಗಿ ಕಡಿಮೆಯಾಗಲಿದೆ. ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ತಗ್ಗಲಿದ್ದು, ನಿರಂತರ ಮತ್ತು ಸುರಕ್ಷಿತ ನೀರು ಸರಬರಾಜು ಪೂರೈಸಬಹುದಾಗಿದೆ.
“ಬೆಂಗಳೂರಿನ ವಿಸ್ತರಣೆ, ಜನಸಂಖ್ಯೆ ಹೆಚ್ಚಳ ಮತ್ತು ಅಗತ್ಯಕ್ಕೆ ಅನುಗುಣವಾಗಿ ನೀರಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಹೊಸ ಪೈಪ್‌ಲೈನ್ ಅಳವಡಿಕೆ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ 25–30 ವರ್ಷಗಳ ಅಗತ್ಯ ಪೂರೈಸುವ ದಿಸೆಯಲ್ಲಿ ಪೈಪ್ಲೈನ್ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವಿದೆ” ಎಂದು ಡಾ. ರಾಮಪ್ರಸಾತ್ ಮನೋಹರ್ ಹೇಳಿದರು.
ಬೇಸಿಗೆಗೂ ಮುನ್ನವೇ ಮುಂಜಾಗ್ರತೆ
ಮುಂದಿನ ಎರಡು-ಮೂರು ತಿಂಗಳಲ್ಲಿ ಬೇಸಿಗೆ ಆರಂಭವಾಗಲಿದ್ದು, ಕುಡಿಯುವ ನೀರಿಗೆ ಅಭಾವ ಉಂಟಾಗದಂತೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕಳೆದ ಬಾರಿ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಉಂಟಾಗಿದ್ದ ಸಂಕಷ್ಟ ಮನಗಂಡಿರುವ ಜಲಮಂಡಳಿಯು, ಈ ಬಾರಿ ಬೇಸಿಗೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸಿದ್ಧತೆ ಮಾಡುತ್ತಿದೆ. ಬೇಸಿಗೆಗೆ ಮೂರ್ನಾಲ್ಕು ತಿಂಗಳು ಬಾಕಿ ಇದ್ದರೂ, ಯೋಜನಾಬದ್ಧ ಕಾರ್ಯಾಚರಣೆಗೆ ತಯಾರಿ ಆರಂಭಿಸಿದೆ.
ಕಳೆದ ವರ್ಷ ಅಂತರ್ಜಲ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ಐಐಎಸ್ಸಿ ಸಹಕಾರದೊಂದಿಗೆ ಅಂತರ್ಜಲ ಮರುಪೂರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸುಮಾರು 60 ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದನ್ನು ಗುರುತಿಸಿ, ಅಂತರ್ಜಲ ಹೆಚ್ಚಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಿತ್ತು. ಅಲ್ಲದೇ ಕೆರೆಗಳ ಮೂಲಕವೂ ಅಂತರ್ಜಲ ಮಟ್ಟ ಹೆಚ್ಚಿಸುವ ಪ್ರಯತ್ನಗಳನ್ನು ನಡೆಸಿತ್ತು.ಈ ಬಾರಿ ಶಾಶ್ವತ ಪರಿಹಾರಗಳಿಗೆ ಹೆಚ್ಚು ಒತ್ತು ನೀಡಿದೆ.
ಅಂತರ್ಜಲದ ಮೇಲೆ ನಿಗಾ ವಹಿಸಲು ಜಲಮಂಡಳಿಯು ಸೆನ್ಸರ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ಸೆನ್ಸರ್ಗಳು ಪ್ರತಿದಿನ ಅಂತರ್ಜಲ ಮಟ್ಟದ ಮಾಹಿತಿಯನ್ನು ಒದಗಿಸುತ್ತಿದ್ದು, ಯಾವ ಪ್ರದೇಶದಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ ಎಂಬುದನ್ನು ಗುರುತಿಸಲು ನೆರವಾಗುತ್ತದೆ.
ಕಳೆದ ವರ್ಷ 80 ವಾರ್ಡ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಅದರ ಆಧಾರದಲ್ಲಿ ಅಂತರ್ಜಲ ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಈ ಬಾರಿ ಕೂಡ ಇದೇ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಲಮಂಡಳಿ ನಿರ್ಧರಿಸಿದೆ. ಈ ತಂತ್ರಜ್ಞಾನವನ್ನು ಜಾರಿಗೊಳಿಸಿರುವುದು ವಿಶ್ವದಲ್ಲೇ ಮೊದಲ ಪ್ರಯೋಗ ಎನ್ನಲಾಗಿದೆ.
ಕುಡಿಯುವ ನೀರಿನ ದುರ್ಬಳಕೆಗೆ ನಿರ್ಬಂಧ
ಕುಡಿಯುವ ನೀರನ್ನು ಅನಗತ್ಯವಾಗಿ ಬಳಸುವುದನ್ನು ತಡೆಯಲು ಜಲಮಂಡಳಿ ಈಗಾಗಲೇ ಕಟ್ಟುನಿಟ್ಟಿನ ಯೋಜನೆ ರೂಪಿಸಿದೆ. ಕಾವೇರಿ ಕುಡಿಯುವ ನೀರನ್ನು ಕಾರು ತೊಳೆಯಲು, ಉದ್ಯಾನ, ಇತರೆ ಅನಗತ್ಯ ಚಟುವಟಿಕೆಗಳಿಗೆ ಬಳಸುವುದಕ್ಕೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.
ಕೆರೆಗಳ ಪುನಶ್ಚೇತನಕ್ಕೆ ಒತ್ತು
ಬೆಂಗಳೂರಿನ ಕೆರೆಗಳು ಹಾಗೂ ಜಲಮೂಲಗಳನ್ನು ಪುನಶ್ಚೇತನಗೊಳಿಸಿ, ಅಂತರ್ಜಲ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆನೀರನ್ನು ಭೂಮಿಗೆ ಹರಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ಬೇಸಿಗೆಯಲ್ಲಿ ಕೊಳವೆಬಾವಿಗಳ ಮೇಲಿನ ಅವಲಂಬನೆ ತಗ್ಗಿಸುವುದು ಜಲಮಂಡಳಿ ಉದ್ದೇಶವಾಗಿದೆ.
ಒಟ್ಟಾರೆ, ಕುಡಿಯುವ ನೀರಿನ ಗುಣಮಟ್ಟ, ಲಭ್ಯತೆ ಹಾಗೂ ಭವಿಷ್ಯದ ನೀರಿನ ಭದ್ರತೆ ದೃಷ್ಟಿಯಿಂದ ಜಲಮಂಡಳಿ ರೂಪಿಸುತ್ತಿರುವ ಯೋಜನೆಗಳು ಬೆಂಗಳೂರು ನಗರಕ್ಕೆ ದೀರ್ಘಕಾಲೀನ ಪರಿಹಾರ ನೀಡಲಿವೆ ಎಂಬ ವಿಶ್ವಾಸ ಮೂಡಿದೆ.
ಸಂದರ್ಶನದ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ...

