ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿತ: ಮೃತರ ಸಂಖ್ಯೆ 61ಕ್ಕೆ ಏರಿಕೆ
x

ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿತ

ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿತ: ಮೃತರ ಸಂಖ್ಯೆ 61ಕ್ಕೆ ಏರಿಕೆ

ದುರಂತ ಸಂಭವಿಸಿ ಮೂರು ದಿನಗಳ ನಂತರ ಅವಶೇಷಗಳಡಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲದಿರುವುದರಿಂದ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಭಾರೀ ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನೂ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Click the Play button to hear this message in audio format

ಕಳೆದ ವಾರ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯ ಪ್ರಾರ್ಥನಾ ಮಂದಿರ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿದೆ. ಸೋಮವಾರ ರಕ್ಷಣಾ ಸಿಬ್ಬಂದಿ ಅವಶೇಷಗಳಡಿಯಿಂದ ಮತ್ತೆ 12 ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ಶತಮಾನದಷ್ಟು ಹಳೆಯ 'ಅಲ್ ಖೋಜಿನಿ' ಶಾಲೆಯಲ್ಲಿ ಸೆಪ್ಟೆಂಬರ್ 29 ರಂದು ಈ ಭೀಕರ ದುರಂತ ಸಂಭವಿಸಿತ್ತು. 12 ರಿಂದ 19 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ ವಿದ್ಯಾರ್ಥಿಯೊಬ್ಬ ಮಾತ್ರ ಗಾಯಗಳಿಲ್ಲದೆ ಪಾರಾಗಿದ್ದು, 99 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರ ಕೈಕಾಲುಗಳನ್ನು ಕತ್ತರಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ದುರಂತ ಸಂಭವಿಸಿ ಮೂರು ದಿನಗಳ ನಂತರ ಅವಶೇಷಗಳಡಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲದಿರುವುದರಿಂದ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಭಾರೀ ಯಂತ್ರಗಳನ್ನು ಬಳಸಲಾಗುತ್ತಿದೆ. ಇನ್ನೂ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೃತದೇಹಗಳನ್ನು ಗುರುತಿಸುವುದು ಕಷ್ಟಕರವಾಗಿದ್ದು, ಸಂಬಂಧಿಕರಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ ಗುರುತು ಪತ್ತೆ ಮಾಡಲಾಗುತ್ತಿದೆ. ಇದುವರೆಗೆ 17 ಮೃತದೇಹಗಳನ್ನು ಗುರುತಿಸಿ, ಅವರ ಕುಟುಂಬಗಳಿಗೆ ಅಂತ್ಯಕ್ರಿಯೆಗಾಗಿ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವು ಈ ವರ್ಷ ಇಂಡೋನೇಷ್ಯಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ಅನಾಹುತಗಳಲ್ಲಿ ಒಂದಾಗಿದೆ.

Read More
Next Story