
Bidadi Township| ಭೂಸ್ವಾಧೀನಕ್ಕೆ ಹೆಚ್ಚಿದ ವಿರೋಧ ; ಜಂಟಿ ಅಳತೆಗೆ ತಡೆಯೊಡ್ಡಿದ ರೈತರು
ರೈತರೊಂದಿಗೆ ಸಭೆ ನಡೆಸದೇ, ಅಭಿಪ್ರಾಯ ಕೇಳದೇ ಫಲವತ್ತಾದ ಜಮೀನಿನಲ್ಲಿ ಉಪನಗರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಾವು ಕೃಷಿ, ಹೈನುಗಾರಿಕೆ ಮಾಡಿಕೊಂಡೇ ಬದುಕುತ್ತಿದ್ದೇವೆ. ಪರಿಹಾರ ನೀಡಿದರೂ ಅದು ಶಾಶ್ವತವಲ್ಲ,ಹಾಗಾಗಿ ಯೋಜನೆ ಬೇಡ ಎಂದು ರೈತರು ಆಗ್ರಹಿಸಿದರು
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆಗೆ ಹೋಬಳಿಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ʼಜಂಟಿ ಅಳತೆ ಪ್ರಮಾಣೀಕರಣʼ (ಜೆಎಂಸಿ) ಕಾರ್ಯಕ್ಕೆ ಕರಿಕಲ್ಕೊಡ್ಡಿ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ.
ಭೂಮಿಯ ಸರ್ವೇಗೆ ಅಧಿಕಾರಿಗಳ ತಂಡ ಬರುವ ಮಾಹಿತಿ ಸಿಗುತ್ತಿದ್ದಂತೆಯೇ ರೈತರು ಗುಂಪಾಗಿ ಸೇರಿ ಘೋಷಣೆ ಕೂಗಿದರು. ಯಾವುದೇ ಕಾರಣಕ್ಕೂ ಯೋಜನೆಗೆ ಭೂಮಿ ನೀಡುವುದಿಲ್ಲ, ನಮಗೆ ಯಾವುದೇ ಉಪನಗರ ಬೇಡ ಎಂದು ರೈತರು ಪಟ್ಟು ಹಿಡಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಈ ವೇಳೆ ರೈತರು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನಡೆಯಿತು.ಈ ವೇಳೆ ಯೋಜನೆಗೆ ಒಪ್ಪಿ ಭೂಮಿ ನೀಡಲು ಇಚ್ಛಿಸಿದ ರೈತರ ಭೂಮಿಯಲ್ಲಿ ಮಾತ್ರ ಪೊಲೀಸ್ ಬಂದೋಬಸ್ತ್‌ನಲ್ಲಿ ಅಳತೆ ಕಾರ್ಯ ಮಾಡಲಾಯಿತು.
ರೈತರೊಂದಿಗೆ ಯಾವುದೇ ಸಭೆ ನಡೆಸದೇ, ಅಭಿಪ್ರಾಯ ಕೇಳದೇ ಫಲವತ್ತಾದ ಜಮೀನಿನಲ್ಲಿ ಉಪನಗರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಲೆಮಾರುಗಳಿಂದ ನಾವು ಕೃಷಿ, ಹೈನುಗಾರಿಕೆ ಮಾಡಿಕೊಂಡೇ ಬದುಕುತ್ತಿದ್ದೇವೆ. ಪರಿಹಾರ ನೀಡಿದರೂ ಅದು ಶಾಶ್ವತವಲ್ಲ, ಕೊನೆಗೆ ನಾವು ಬೀದಿಗೆ ಬೀಳುತ್ತೇವೆ. ಹಾಗಾಗಿ ಯೋಜನೆ ಬೇಡ ಎಂದು ಆಗ್ರಹಿಸಿದರು.
ರೈತರ ಹೋರಾಟಕ್ಕೆ ಜೆಡಿಎಸ್ ಬೆಂಬಲ
ಬೈರಮಂಗಲದಲ್ಲಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ಸೆ.28ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಧರಣಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಸದಾ ರೈತರ ಪರವಾಗಿದೆ. ದೇವೇಗೌಡರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ರೂಪಿಸಿದ್ದೇ ಎಚ್.ಡಿ. ಕುಮಾರಸ್ವಾಮಿ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅದಕ್ಕೆ ಸೆ.28ಕ್ಕೆ ಸ್ವತಃ ಕುಮಾರಸ್ವಾಮಿ ಅವರೇ ವಿಡಿಯೊ ಸಂವಾದದಲ್ಲಿ ಸ್ಪಷ್ಟನೆ ನೀಡಲಿದ್ದಾರೆ ಎಂದರು.
ಏನಿದು ಯೋಜನೆ?
ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಪ್ರದೇಶಗಳಲ್ಲಿ 9,600 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಸ್ವಾಧೀನಕ್ಕೆ ಉದ್ದೇಶಿಸಿರುವ ಜಾಗದಲ್ಲಿ10 ಲಕ್ಷಕ್ಕೂ ಹೆಚ್ಚು ತೆಂಗು ಮತ್ತು ಮಾವಿನ ಮರಗಳು ನಾಶವಾಗಲಿವೆ. ಈ ಭಾಗದಲ್ಲಿ ಸಾವಿರಾರು ರೈತರಿಗೆ ಕೃಷಿಯೇ ಆಧಾರವಾಗಿದ್ದು, ಭೂಮಿ ಬಿಟ್ಟುಕೊಡಲು ರೈತರು ನಿರಾಕರಿಸುತ್ತಿದ್ದಾರೆ.
ಅಕ್ರಮ ಭೂಸ್ವಾಧೀನ ಆರೋಪ
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಈ ಹಿಂದಿನಿಂದಲೂ ಆರೋಪಗಳು ಕೇಈ ಬರುತ್ತಿವೆ.
ಈ ಹಿಂದೆ ವಸತಿ ಮಂಡಳಿಯು 560 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಿದರೂ, ಯಾವುದೇ ಮನೆ ನಿರ್ಮಿಸಿಲ್ಲ. ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ್ ಲೇಔಟ್ ಖಾಲಿಯಾಗಿಯೇ ಉಳಿದಿವೆ. ಹೀಗಿರುವಾಗ,ಬಿಡದಿ ಟೌನ್‌ಶಿಪ್ ಹೆಸರಲ್ಲಿ ರೈತರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಇದು ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಯೋಜನೆ ರದ್ದು ಮಾಡುವ ಪ್ರಶ್ನೆಯಿಲ್ಲ
ಬಿಡದಿ ಟೌನ್ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದರು.
ಕೃಷಿ ಭೂಮಿ ಸ್ವಾಧೀನದಿಂದ ಆಸ್ತಿ ಕಳೆದುಕೊಳ್ಳುವ ರೈತರಿಗೆ ಮಾರುಕಟ್ಟೆ ಬೆಲೆಗಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರೂ ರೈತರು ಒಪ್ಪುತ್ತಿಲ್ಲ. ಭೂಸ್ವಾಧೀನ ಪ್ರಕ್ರಿಯೆಯನ್ನು 1987ರ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿರುವುದು ರೈತರಲ್ಲಿ ಗೊಂದಲ ಮೂಡಿಸಿದೆ.