
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಹೆಚ್ಚಳ; ಹಾಲಿನ ಬೆಲೆ ಮತ್ತೆ ಏರಿಕೆ?
ಕಳೆದ ಏ.1 ರಂದು ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದ್ದರಿಂದ ಹಾಲಿನ (ಶುಭಂ) ಗರಿಷ್ಠ ದರ 52 ಕ್ಕೆ ಏರಿಕೆಯಾಗಿತ್ತು.
ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಲೀಟರ್‌ಗೆ 5 ರೂ.ಗಳಿಂದ 7 ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಸರ್ಕಾರದ ಈ ತೀರ್ಮಾನದಿಂದ ಹೈನುಗಾರರಲ್ಲಿ ಸಂಭ್ರಮ ಗರಿಗೆದರಿದರೆ, ಗ್ರಾಹಕರಿಗೆ ಬೆಲೆ ಏರಿಕೆ ಆತಂಕ ಎದುರಾಗಿದೆ.
ಕಳೆದ ಏ.1 ರಂದು ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದ್ದರಿಂದ ಹಾಲಿನ (ಶುಭಂ) ಗರಿಷ್ಠ ದರ 52 ಕ್ಕೆ ಏರಿಕೆಯಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಿರುವ ಹಾಲಿನ ಪ್ರೋತ್ಸಾಹಧನವನ್ನು 5 ರಿಂದ 7 ರೂ.ಗಳಿಗೆ ಏರಿಸಿದರೆ ಹಾಲಿನ ಬೆಲೆ ಏರಿಕೆ ಅನಿವಾರ್ಯ ಆಗಲಿದೆ. ಇನ್ನು ಇದೇ ಅವಧಿಯಲ್ಲಿ ಪ್ರೋತ್ಸಾಹಧನ ಹೆಚ್ಚಳ ಮಾಡುವುದಾಗಿ ಹೇಳಿರುವುದು ಹೈನುಗಾರರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಮೂಲಗಳ ಪ್ರಕಾರ ಇದೇ ಆರ್ಥಿಕ ವರ್ಷದಲ್ಲಿ ಹಾಲಿನ ಬೆಲೆ ಏರಿಕೆಯಾಗಬಹುದು ಎನ್ನಲಾಗಿದೆ.
ಪ್ರೋತ್ಸಾಹ ಧನ ಹೆಚ್ಚಳದಿಂದ ಹಾಲು ಉತ್ಪಾದಕರಿಗೆ ಆದಾಯ ಹೆಚ್ಚಲಿದೆ. ಉತ್ಪಾದನಾ ವೆಚ್ಚ, ಸಾರಿಗೆ ವೆಚ್ಚ, ಮೇವು ಮತ್ತು ಆಹಾರದ ದರ ಏರಿಕೆ ಮೊದಲಾದ ಕಾರಣಗಳಿಂದ ಪ್ರೋತ್ಸಾಹಧನ ಏರಿಕೆಯ ಹೊರೆ ಗ್ರಾಹಕರ ಮೇಲೆ ಬೀಳಬಹುದು ಎಂದು ವಿಶ್ಲೇಷಿಸಲಾಗಿದೆ.
ರಾಜ್ಯ ಸರ್ಕಾರ ಮತ್ತು ಹಾಲು ಒಕ್ಕೂಟಗಳ ನಡುವೆ ಈಗಾಗಲೇ ಹಾಲಿನ ಬೆಲೆ ಏರಿಕೆ ಕುರಿತು ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರವು 2025 ಏ.1 ರಿಂದ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 4 ರೂ.ಗಳಷ್ಟು ಹೆಚ್ಚಿಸಿತ್ತು. ಅದರಂತೆ ಟೋನ್ಡ್ ಹಾಲು ಲೀಟರ್ ಬೆಲೆ 44 ರಿಂದ 48 ರೂ.ಗಳಿಗೆ ಏರಿಕೆಯಾಗಿತ್ತು. ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ಬೆಲೆ 43 ರಿಂದ 47ಕ್ಕೆ, ಶುಭಂ ಹಾಲಿನ ಬೆಲೆ 48 ರಿಂದ 52 ಕ್ಕೆ ಏರಿಕೆಯಾಗಿತ್ತು.
ಮೊಸರಿನ ಬೆಲೆ ಪ್ರತಿ ಲೀಟರ್ಗೆ 4 ರೂ. ಹೆಚ್ಚಳವಾಗಿ ಹೊಸ ದರ 54 ರೂ. ಆಗಿತ್ತು. 2024 ಜೂ. 26 ರಂದು ಹಾಲಿನ ಬೆಲೆಯನ್ನು ಲೀಟರ್ ಮೇಲೆ 2 ರೂ. ಏರಿಕೆ ಮಾಡಿತ್ತು. ಗ್ರಾಹಕರಿಗೆ ಹೊರೆಯಾಗದಂತೆ ಪ್ರತಿ ಅರ್ಧ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೆಟ್ನಲ್ಲಿ ಹೆಚ್ಚುವರಿಯಾಗಿ 50 ಮಿ.ಲೀ. ಹಾಲು ನೀಡಲಾಗಿತ್ತು.
2023 ಜುಲೈ ತಿಂಗಳಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಿತ್ತು. ಇದು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿದ ಮೊದಲ ಬೆಲೆ ಏರಿಕೆಯಾಗಿತ್ತು.

