ನಿಷ್ಕ್ರಿಯ ಪ್ರಜಾ ಪರಿವರ್ತನ ಪಾರ್ಟಿ ನೋಂದಣಿ ರದ್ದತಿಗೆ ಚುನಾವಣಾ ಆಯೋಗದಿಂದ ನೋಟಿಸ್
x

ನಿಷ್ಕ್ರಿಯ 'ಪ್ರಜಾ ಪರಿವರ್ತನ ಪಾರ್ಟಿ' ನೋಂದಣಿ ರದ್ದತಿಗೆ ಚುನಾವಣಾ ಆಯೋಗದಿಂದ ನೋಟಿಸ್

ನಿಗದಿತ ದಿನಾಂಕದಂದು ಪಕ್ಷದ ಕಡೆಯಿಂದ ಯಾರೂ ಹಾಜರಾಗದಿದ್ದಲ್ಲಿ ಅಥವಾ ಯಾವುದೇ ಲಿಖಿತ ಮನವಿ ಸಲ್ಲಿಕೆಯಾಗದಿದ್ದಲ್ಲಿ, ಪಕ್ಷಕ್ಕೆ ಈ ವಿಷಯದಲ್ಲಿ ಹೇಳಲು ಏನೂ ಇಲ್ಲವೆಂದು ಭಾವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ರಾಜಕೀಯವಾಗಿ ಸಂಪೂರ್ಣ ನಿಷ್ಕ್ರಿಯವಾಗಿರುವ 'ಪ್ರಜಾ ಪರಿವರ್ತನ ಪಾರ್ಟಿ'ಯ ನೋಂದಣಿಯನ್ನು ರದ್ದುಪಡಿಸಲು ಭಾರತ ಚುನಾವಣಾ ಆಯೋಗವು ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಪಕ್ಷಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದ್ದು, ಸೆಪ್ಟೆಂಬರ್ 1ರಂದು ಅಂತಿಮ ವಿಚಾರಣೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಜಗದೀಶ.ಜಿ ಅವರು ತಿಳಿಸಿದ್ದಾರೆ.

ನೋಟಿಸ್ಗೆ ಕಾರಣವೇನು?

ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 29(ಎ) ಅಡಿಯಲ್ಲಿ ನೋಂದಣಿಯಾಗಿರುವ 'ಪ್ರಜಾ ಪರಿವರ್ತನ ಪಾರ್ಟಿ'ಯು, ಕಳೆದ ಆರು ವರ್ಷಗಳಿಂದ ಯಾವುದೇ ಲೋಕಸಭೆ, ವಿಧಾನಸಭೆ ಅಥವಾ ಉಪಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲ. ಅಲ್ಲದೆ, ಪಕ್ಷದ ಅಧಿಕೃತ ವಿಳಾಸವು ಪತ್ತೆಯಾಗದ ಕಾರಣ, ಪಕ್ಷವು ಸಕ್ರಿಯವಾಗಿಲ್ಲ ಎಂದು ಪರಿಗಣಿಸಿ ಈ ಕ್ರಮಕ್ಕೆ ಮುಂದಾಗಲಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರು, ಪಕ್ಷವನ್ನು ನೋಂದಣಿ ಪಟ್ಟಿಯಿಂದ ಏಕೆ ತೆಗೆದುಹಾಕಬಾರದು ಎಂದು ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಪಕ್ಷದ ನೋಂದಣಿಯನ್ನು ರದ್ದುಪಡಿಸುವ ಮುನ್ನ, ತಮ್ಮ ವಾದವನ್ನು ಮಂಡಿಸಲು 'ಪ್ರಜಾ ಪರಿವರ್ತನ ಪಾರ್ಟಿ'ಗೆ ಒಂದು ಅಂತಿಮ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೆಪ್ಟೆಂಬರ್ 1ರಂದು ವಿಚಾರಣೆ ನಿಗದಿಪಡಿಸಲಾಗಿದೆ. ವಿಚಾರಣೆಯ ದಿನದಂದು ಪಕ್ಷದ ಮುಖ್ಯಸ್ಥರು, ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಗಳು ಖುದ್ದಾಗಿ ಹಾಜರಾಗಿ, ತಮ್ಮ ಪ್ರಮಾಣಪತ್ರ, ಸಂಬಂಧಿತ ದಾಖಲೆಗಳು ಹಾಗೂ ಲಿಖಿತ ಮನವಿಯನ್ನು ಸಲ್ಲಿಸುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ.

ಗೈರಾದರೆ ನೋಂದಣಿ ರದ್ದು ಖಚಿತ

ಒಂದು ವೇಳೆ ನಿಗದಿತ ದಿನಾಂಕದಂದು ಪಕ್ಷದ ಕಡೆಯಿಂದ ಯಾರೂ ಹಾಜರಾಗದಿದ್ದಲ್ಲಿ ಅಥವಾ ಯಾವುದೇ ಲಿಖಿತ ಮನವಿ ಸಲ್ಲಿಕೆಯಾಗದಿದ್ದಲ್ಲಿ, ಪಕ್ಷಕ್ಕೆ ಈ ವಿಷಯದಲ್ಲಿ ಹೇಳಲು ಏನೂ ಇಲ್ಲವೆಂದು ಭಾವಿಸಲಾಗುವುದು. ನಂತರ ಯಾವುದೇ ಹೆಚ್ಚಿನ ಸಂಪರ್ಕ ಮಾಡದೆ, ಪಕ್ಷವನ್ನು ನೋಂದಣಿ ಪಟ್ಟಿಯಿಂದ ತೆಗೆದುಹಾಕುವ ಕುರಿತು ಚುನಾವಣಾ ಆಯೋಗವು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ.ಜಿ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.ಸ್ಪಷ್ಟಪಡಿಸಿದ್ದಾರೆ.

Read More
Next Story