ರಹಿಮಾನ್​ ಹತ್ಯೆ ಆರೋಪಿಗಳ ಪತ್ತೆಗೆ ಸೂಚನೆ, ಕೋಮು ದ್ವೇಷಕ್ಕೆ ಆಸ್ಪದವಿಲ್ಲ; ಸಚಿವ ದಿನೇಶ್ ಗುಂಡೂರಾವ್
x

ದಿನೇಶ್ ಗುಂಡೂರಾವ್

ರಹಿಮಾನ್​ ಹತ್ಯೆ ಆರೋಪಿಗಳ ಪತ್ತೆಗೆ ಸೂಚನೆ, ಕೋಮು ದ್ವೇಷಕ್ಕೆ ಆಸ್ಪದವಿಲ್ಲ; ಸಚಿವ ದಿನೇಶ್ ಗುಂಡೂರಾವ್

ಮಂಗಳೂರಿನಲ್ಲಿ ನಡೆದ ಹತ್ಯೆಗಳ ವಿಚಾರದಲ್ಲಿ ನಮ್ಮ ಸರ್ಕಾರ ನಿಸ್ಪಕ್ಷಪಾತವಾದ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಂಡಿದೆ. ಯಾವುದೇ ಭೇದ ಭಾವ ಮಾಡಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


ರಹೀಂ ಹತ್ಯೆ ಆರೋಪಿಗಳ ಪತ್ತೆಗೆ ಸೂಚನೆ, ಕೋಮು ದ್ವೇಷಕ್ಕೆ ಆಸ್ಪದವಿಲ್ಲ; ಸಚಿವ ದಿನೇಶ್ ಗುಂಡೂರಾವ್

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳತ್ತಮಜಲುನಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್​ ಹೇಳಿದ್ದಾರೆ.

ಬುಧವಾರ ಶಿವಮೊಗ್ಗದಲ್ಲಿ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ರೀತಿಯ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ರಹಿಮಾನ್​ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ

ಬಿಜೆಪಿ ಶವಗಳ ಮೇಲೆ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ ಸಚಿವರು, ಪ್ರಚೋದನಾಕಾರಿ ಭಾಷಣಗಳಿಂದ ಸಮಾಜದಲ್ಲಿ ಕೋಮು ದ್ವೇಷವನ್ನು ಮೂಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. "ಹತ್ಯೆ ಮಾಡುವ ಕೊಲೆಗಡುಕರ ವಿಚಾರದಲ್ಲಿ ಧರ್ಮ, ಜಾತಿ ನೋಡುವ ಪ್ರಶ್ನೆಯೇ ಇಲ್ಲ. ಮಂಗಳೂರಿನಲ್ಲಿ ನಡೆದ ಹತ್ಯೆಗಳ ವಿಚಾರದಲ್ಲಿ ನಮ್ಮ ಸರ್ಕಾರ ನಿಸ್ಪಕ್ಷಪಾತವಾದ ತನಿಖೆ ನಡೆಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿದೆ. ಯಾವುದೇ ಭೇದಭಾವ ಮಾಡಿಲ್ಲ. ತಪ್ಪಿತಸ್ಥರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಿದ್ದರೂ, ಅವರ ಹೆಡೆಮುರಿ ಕಟ್ಟಿ, ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ" ಎಂದು ಸಚಿವ ಗುಂಡೂರಾವ್ ಸ್ಪಷ್ಟಪಡಿಸಿದರು.

ಪೊಲೀಸ್ ಇಲಾಖೆಗೆ ಬೆಂಬಲ

ಅಮಾಯಕ ಅಶ್ರಫ್ ಹತ್ಯೆ ಮಾಡಿದವರನ್ನು ಹಿಡಿದು ಬಂಧಿಸಲಾಗಿದೆ. ರೌಡಿಶಿಟರ್ ಸುಹಾಸ್ ಶೆಟ್ಟಿ ಹತ್ಯೆ ಮಾಡಿದವರನ್ನೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇದೀಗ ಅಬ್ದುಲ್ ಅವರ ಪ್ರಕರಣದಲ್ಲೂ ಆರೋಪಿಗಳನ್ನು ಪತ್ತೆ ಹಚ್ಚಿ ತರುವಲ್ಲಿ ಪೊಲೀಸರು ಸಮರ್ಥರಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೋಮು ನಿಗ್ರಹ ದಳ ರಚನೆ

ಕರಾವಳಿ ಭಾಗದಲ್ಲಿ ಇಂತಹ ಪ್ರತೀಕಾರದ ಹತ್ಯೆಗಳನ್ನು ತಡೆಗಟ್ಟಲು ಕೋಮು ನಿಗ್ರಹ ದಳ (Anti-Communal Force) ರಚಿಸಲಾಗುತ್ತಿದೆ. ಶೀಘ್ರದಲ್ಲಿಯೇ ಈ ದಳ ತನ್ನ ಕಾರ್ಯ ಪ್ರಾರಂಭಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ಕೋಮುವಾದದಿಂದ ಸಮಾಜಗಳಲ್ಲಿ ಮೂಡುತ್ತಿರುವ ಒಡಕನ್ನು ಹೋಗಲಾಡಿಸಿ, ಸೌಹಾರ್ದಯುತವಾದ ಸಹಬಾಳ್ವೆಯ ಶಾಂತಿಯುತ ಸಮಾಜವನ್ನು ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

Read More
Next Story