ನಾನಲ್ಲ, ರಾತ್ರೋರಾತ್ರಿ ಗಿಫ್ಟ್ ಕೂಪನ್ ಹಂಚುವವರು ರಣಹೇಡಿಗಳು: ಡಿಕೆ ಬ್ರದರ್ಸ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
x

ನಾನಲ್ಲ, ರಾತ್ರೋರಾತ್ರಿ ಗಿಫ್ಟ್ ಕೂಪನ್ ಹಂಚುವವರು ರಣಹೇಡಿಗಳು: ಡಿಕೆ ಬ್ರದರ್ಸ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ


ರಾಮನಗರ: ʻʻರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳುʼʼ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಅವರೊಂದಿಗೆ ಬಿಡದಿ ಸಮೀಪದ ಕೇತಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆ (ಪಿಂಕ್ ಬೂತ್)ಗೆ ಬಂದು ಮತದಾನ ಮಾಡಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು. ತಮ್ಮನ್ನು ರಣಹೇಡಿ ಎಂದ ಡಿ.ಕೆ.ಶಿವಕುಮಾರ್ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʻʻರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆʼʼ ಎಂದು ಗುಡುಗಿದರು.

ʻʻರಾತ್ರೋರಾತ್ರಿ ಕಳ್ಳರ ರೀತಿಯಲ್ಲಿ ಹೋಗಿ ಜನರಿಗೆ ಕ್ಯೂ ಆರ್ ಕೋಡ್ ಇರುವ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆʼʼ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಆಯೋಗಕ್ಕೆ ದೂರು ಕೊಡಬಹುದಿತ್ತಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʻʻ‌ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು ಕೊಟ್ಟರೂ ಏನು ಪ್ರಯೋಜನ ಇಲ್ಲ. ಹಿಂದೆ ಹಲವು ಬಾರಿ ದೂರು ಕೊಟ್ಟರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ?ʼʼ ಎಂದು ಕುಮಾರಸ್ವಾಮಿ ಉತ್ತರಿಸಿದರು.

ʻʻನಾನು ಚುನಾವಣಾ ಆಯೋಗಕ್ಕೆ ಕೇಳುತ್ತೇನೆ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ, ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ. ಅವರವರ ಶಕ್ತಿ ಅನುಸಾರ ಹಣ ಹಂಚಿ ವೋಟು ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಬಂದರೆ ಕಾಂಗ್ರೆಸ್ ನವರಿಗೆ ಒಳ್ಳೆಯದುʼʼ ಎಂದು ವ್ಯಂಗ್ಯವಾಡಿದರು.

ʻʻಇದನ್ನು ಚುನಾವಣೆ ಎಂದು ಕರೆಯಬೇಕಾ? ಇದನ್ನು ಚುನಾವಣಾ ಅಂತ ಪರಿಗಣಿಸಲು ಸಾಧ್ಯವಾ? ಪ್ರಜಾಪ್ರಭುತ್ವದ ಹಬ್ಬ ಎಂದು ಇದನ್ನು ಕರೆಯಲು ಆಗುತ್ತದೆಯೇ? ದುಡ್ಡು ಇರುವವರಿಗೆ ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು. ಚುನಾವಣಾ ಆಯೋಗ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮʼʼ ಎಂದು ಅವರು ವಾಗ್ದಾಳಿ ನಡೆಸಿದರು.

ʻʻಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ ಈ ಇಬ್ಬರು ಮಹಾನುಭಾವರು. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ?ʼʼ ಎಂದು ಡಿಕೆಶಿ ಸಹೋದರರ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.

ಜೋತಿಷಿಯೊಬ್ಬರು ಹೇಳಿದಂತೆ ಇವರು ಕನಕಪುರದಲ್ಲಿ ಹಣ, ಗಿಫ್ಟ್ ಕೂಪನ್ ಹಂಚಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ ಅವರು, ʻʻಜೋತಿಷಿಯೊಬ್ಬರು ಹೇಳಿದರು ಎಂದು 505 ರೂ. ಹಣ, ಮಲೆಮಹದೇಶ್ವರ ದೇವಾಲಯದ ಲಾಡು ಮತ್ತು ಈ ಗ್ಯಾರಂಟಿ ಕಾರ್ಡ್ ಗಳನ್ನು ರಾತ್ರಿಯೆಲ್ಲಾ ಹಂಚಿದ್ದಾರೆ. ಕಾರ್ಡು ಹಂಚಿಕೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ. ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆʼʼ ಎಂದು ಆರೋಪ ಮಾಡಿದ್ದಾರೆ.

ʻʻಅಕ್ರಮ ನಡೆಸಿ ಚುನಾವಣೆ ಗೆಲ್ಲುತ್ತೇವೆ ಎಂದು ಇವರು ಹೊರಟಿದ್ದಾರೆ. ಜನರು ಇವರ ಕುತಂತ್ರಕ್ಕೆ ಬಲಿಯಾಗದೆ ನಿರ್ಭೀತಿಯಿಂದ ಮತದಾನ ಮಾಡಿದ್ದಾರೆ. ಇವರ ಆಟ ಎಲ್ಲಾ ಕಡೆ ನಡೆಯುವುದಿಲ್ಲʼʼ ಎಂದು‌ ಕುಮಾರಸ್ವಾಮಿ ಹೇಳಿದರು.

Read More
Next Story