ಅಕ್ರಮ ಗಣಿ ಹಗರಣ | ಸುಪ್ರೀಂಕೋರ್ಟ್‌ಗೆ ಯಾಕೆ ವರದಿ ಸಲ್ಲಿಸಿಲ್ಲ? ಎಚ್‌ ಡಿ ಕುಮಾರಸ್ವಾಮಿ ಪ್ರಶ್ನೆ
x

ಅಕ್ರಮ ಗಣಿ ಹಗರಣ | ಸುಪ್ರೀಂಕೋರ್ಟ್‌ಗೆ ಯಾಕೆ ವರದಿ ಸಲ್ಲಿಸಿಲ್ಲ? ಎಚ್‌ ಡಿ ಕುಮಾರಸ್ವಾಮಿ ಪ್ರಶ್ನೆ


ʻʻಗಣಿ ಅಕ್ರಮ ಹಗರಣದ ತನಿಖೆ ಮುಗಿದಿದ್ದರೆ, ಸುಪ್ರೀಂ ಕೋರ್ಟ್‌ಗೆ ಯಾಕೆ ವರದಿ ಸಲ್ಲಿಸಿಲ್ಲ? ಇದಕ್ಕೆಲ್ಲಾ ನಾನು ಹೆದರುವುದಿಲ್ಲʼʼ ಎಂದು ಕೇಂದ್ರ ಸಚಿವ ಎಚ್‌ ​ಡಿ ಕುಮಾರಸ್ವಾಮಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಎಸ್​ಐಟಿ ಅನುಮತಿ ಕೇಳಿದ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ʻʻ2010-12ರಲ್ಲಿ ಗಣಿ ಅಕ್ರಮ ಪ್ರಕರಣದ ತನಿಖೆ ನಡೆಸಿ ಸರ್ಕಾರಕ್ಕೆ ಎರಡು ಮೂರು ಟ್ರಂಕ್‌ಗಳಲ್ಲಿ ವರದಿಯನ್ನು ತಂದು ಸಲ್ಲಿಸಿದರು. ಮೂರು ಜನ ಮಾಜಿ‌ ಸಿಎಂಗಳ ಬಗ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಎಸ್​​​ಎಂ ಕೃಷ್ಣ, ಧರ್ಮಸಿಂಗ್ ಹಾಗೂ ನನ್ನದೂ ಸೇರಿ ಅದರಲ್ಲಿ ಹೆಸರಿದೆ. ಜಂತಕಲ್ ಮತ್ತು ಸಾಯಿ ವೆಂಕಟೇಶ್ವರ ಬಗ್ಗೆ ಯುವಿ ಸಿಂಗ್ ಕೊಟ್ಟಿರುವ ವರದಿಯಲ್ಲಿ, ಎರಡು ಪ್ರಕರಣಗಳಲ್ಲಿ ಯಾವುದೇ ಕ್ರಮಕ್ಕೆ ಶಿಫಾರಸು ಮಾಡುವುದಿಲ್ಲ, ಮುಂದಿನದ್ದು ಸರ್ಕಾರಕ್ಕೆ ಬಿಟ್ಟಿದ್ದು ಎಂದಿತ್ತು. ಅವತ್ತಿನ ಸರ್ಕಾರದ ಮೇಲೆ ದಾಖಲೆಗಳ ಸಮೇತ ನಾನು ಜನತೆ ಮುಂದೆ ಇಟ್ಟಿದ್ದೆʼʼ ಎಂದು ಅವರು ತಿಳಿಸಿದರು.

ʻʻ2008ರಲ್ಲಿ ಸಿಎಂ ಆದ ಎರಡೇ ತಿಂಗಳಲ್ಲಿ ಗಣಿ‌ ಮಾಲೀಕರಿಂದ 150 ಕೋಟಿ ರೂ. ಸಂಗ್ರಹ ಮಾಡಿದ್ದೇನೆ ಎಂದು ನಮ್ಮನ್ನು ಬೆಂಬಲಿಸಿದ್ದ ಶಾಸಕರೊಬ್ಬರು ಆರೋಪ ಮಾಡಿದ್ದರು. ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ನನ್ನನ್ನು ಸಿಲುಕಿಸಬೇಕೆಂದು ಹೊರಟಿತ್ತು. ಶಾಸಕರ ರಕ್ಷಣೆ ಪಡೆದು ನನ್ನ ಮೇಲೆ ಇದ್ದ ಅಪಾದನೆಯನ್ನು ಏಕಾಂಗಿಯಾಗಿ ಹೋರಾಟ ನಡೆಸಲು ಸಿದ್ದನಿದ್ದೇನೆ ಎಂದು ಹೇಳಿದ್ದೆ. ಚರ್ಚೆಯೂ ನಡೆಯಿತು. ಅದಕ್ಕೆ ದೊಡ್ಡ ಇತಿಹಾಸ ಇದೆ. ನ್ಯಾಯಾಂಗ ತನಿಖೆಗೆ ಯಾರೂ ಅರ್ಜಿ ಹಾಕಲಿಲ್ಲ. ವಿರೋಧ ಪಕ್ಷದವರೂ ಹಾಕಲಿಲ್ಲ. ನಮ್ಮ ಬೆಂಬಲಿತ ಶಾಸಕರೂ ಹಾಕಲಿಲ್ಲ. ಲೋಕಾಯುಕ್ತ ತನಿಖೆಗೂ ಆದೇಶವಾಯಿತು. ಆ ಆದೇಶ ಮಾಡಿದ್ದು ನಾನೇ..ʼʼ ಎಂದು ಕುಮಾರಸ್ವಾಮಿ ಹೇಳಿದರು.

ʻʻಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ 61 ಪ್ರಕರಣಗಳು ಇವೆಯಂತೆ. ತನಿಖೆಯಾಗದೆ 50 ಪ್ರಕರಣಗಳು ಬಾಕಿ ಉಳಿದಿವೆ. ಅವರು (ಸಿದ್ದರಾಮಯ್ಯ) ನನ್ನದು ತೆರೆದ ಪುಸ್ತಕ, ಹಿಂದುಳಿದ ನಾಯಕ ಎಂದಿದ್ದಾರೆ. ಸರ್ಕಾರ ಬೀಳಿಸುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅವರು ಸರಿ ಇದ್ದಿದ್ದರೆ ವಿರೋಧ ಪಕ್ಷದವರು ಏನು ಮಾಡುತ್ತಾರೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ʻʻ2017ರಲ್ಲಿ ನನಗೆ ಎಸ್​ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟರು. 2018ರಲ್ಲಿ ನಾನು ಮನಸ್ಸು ಮಾಡಿದ್ದರೆ ಆ ಪ್ರಕರಣವನ್ನು ಮುಚ್ಚಿ ಹಾಕಿಸಬಹುದಿತ್ತು. ಒಬ್ಬ ಅಧಿಕಾರಿಯ ಮೂಲಕ ಬಂಧಿಸಬೇಕೆಂದು ಪ್ಲ್ಯಾನ್​ ನಡೆದಿದೆ. ವಕೀಲರ ಸೂಚನೆಯಂತೆ ಜಾಮೀನು ಪಡೆದುಕೊಂಡು ಹೋದೆ. 3 ತಿಂಗಳಲ್ಲಿ ತನಿಖೆ ಮುಗಿಸಿ ಎಂದು ಸುಪ್ರೀಂ ಕೋರ್ಟ್​ ಹೇಳಿತ್ತು. 2018ರಲ್ಲಿ ಎಸ್​​ಐಟಿ ಅಧಿಕಾರಿಗಳು ರಿಪೋರ್ಟ್ ಸಲ್ಲಿಸಿದ್ದಾರೆ. ಇಷ್ಟಾದರೂ ಕಾಂಗ್ರೆಸ್ಸಿಗರ ಜತೆ ಸೇರಿ ಸರ್ಕಾರ ಮಾಡಬೇಕಾಯಿತುʼʼ ಎಂದರು.

ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ʻʻಪೊನ್ನಣ್ಣ ಅವರೇ ನೀವೊಬ್ಬರೇ ಅಲ್ಲ ಕಾನೂನು ತಜ್ಞರು. ಮುಖ್ಯಮಂತ್ರಿಗಳ ಮನೆಯಿಂದಲೇ ನನಗೆ ಮಾಹಿತಿ ಕೊಡುತ್ತಾರೆ. ಸರ್ಕಾರದ ಮಟ್ಟದಲ್ಲಿ ಈ ದಾಖಲೆ ಇದೆಯೋ ಇಲ್ವೋ ಗೊತ್ತಿಲ್ಲ. ತನಿಖೆ ನಡೆಸುತ್ತಿರುವ ಎಸ್​ಐಟಿ ಬಳಿ ಇದೆಯೋ ಇಲ್ವೋ ಗೊತ್ತಿಲ್ಲ. ನಾನು ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಂಡಿದ್ದೇನೆʼʼ ಎಂದು ಹೇಳಿದರು.

Read More
Next Story