ಬೆಂಗಳೂರಿನಲ್ಲಿ ಅಕ್ರಮ ಬ್ಯಾನರ್‌ ಅಳವಡಿಕೆ: ಎಫ್ಐಆರ್ ದಾಖಲು
x
ಬಿಬಿಎಂಪಿ

ಬೆಂಗಳೂರಿನಲ್ಲಿ ಅಕ್ರಮ ಬ್ಯಾನರ್‌ ಅಳವಡಿಕೆ: ಎಫ್ಐಆರ್ ದಾಖಲು

ಬೆಂಗಳೂರಿನಲ್ಲಿ ಅನಧಿಕೃತವಾಗಿ ಬ್ಯಾನರ್‌, ಹೋರ್ಡಿಂಗ್ಸ್ ಹಾಗೂ ಫ್ಲೆಕ್ಸ್ ಅಳವಡಿಸದಂತೆ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಯಾರಾದರೂ ಅನಧಿಕೃತವಾಗಿ ಬ್ಯಾನರ್‌, ಹೋರ್ಡಿಂಗ್ಸ್ ಹಾಗೂ ಫ್ಲೆಕ್ಸ್ ಅಳವಡಿಸುವುದು ಕಂಡುಬಂದರೆ ದೂರು ನೀಡುವಂತೆ ತಿಳಿಸಿದೆ.


ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬನಶಂಕರಿ 2ನೇ ಹಂತ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತ ಹಾಗೂ ಎಂ.ಕೆ ಪುಟ್ಟಲಿಂಗಯ್ಯ ರಸ್ತೆ ಸೇರಿದಂತೆ ವಿವಿಧ ಭಾಗದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಕಾರ್ತಿಕ್‌ ವೆಂಕಟೇಶ ಮೂರ್ತಿ ಹಾಗೂ ಬ್ಯಾನರ್‌ ಅಳವಡಿಸಿದ ಆಕಾಶ್‌ಗೌಡ, ಪ್ರಜ್ವಲ್‌ ವಿ, ಕಾರ್ತಿಕ್‌ ಎಂ. ಹಾಗೂ ಯುಗಂಧರ್‌ ಎನ್ನುವವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಕಾರ್ತಿಕ್ ವೆಂಕಟೇಶ ಮೂರ್ತಿ ಎನ್ನುವವರಿಗೆ ಜನ್ಮದಿನದ ಶುಭಾಶಯ ಕೋರುವ ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸಿ, ನಗರದ ಸೌಂದರ್ಯವನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿ, ಪ್ಲೈಯಿಂದ ಸ್ಕ್ವಾಡ್ ತಂಡ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮೇ 10ರಂದು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಬಿಬಿಎಂಪಿಯಿಂದ ಎಚ್ಚರಿಕೆ

ಅಕ್ರಮ ಮತ್ತು ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವುದು ಸಾರ್ವಜನಿಕ ಆಸ್ತಿ ವಿರೂಪ ಕಾಯ್ದೆ ಮತ್ತು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಈ ರೀತಿ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್ಗಳನ್ನು ಅಳವಡಿಸಿದರೆ, ಎಫ್ಐಆರ್ ದಾಖಲಿಸಲಾಗುತ್ತದೆ. ಅಕ್ರಮ ಬ್ಯಾನರ್ ಮತ್ತು ಪ್ರದರ್ಶನ ಕಂಡುಬಂದರೆ ಸ್ಥಳ ಮತ್ತು ಚಿತ್ರದ ಸಮೇತ ಪಾಲಿಕೆಯ ವ್ಯಾಟ್ಸ್ ಪ್ ಸಂಖ್ಯೆ 94806 85700 ಕಳುಹಿಸಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ನಗರದಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್ ಹಾಕುವುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗಾಗಲೇ ನಿಷೇಧಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರೆದ ಸ್ಥಳಗಳ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್, ಫ್ಲೆಕ್ಸ್ ಹಾಗೂ ಪೋಸ್ಟರ್‌ಗಳನ್ನು ಅಳವಡಿಸುವುದಕ್ಕೆ ನಿಷೇಧ ಹೇರಲಾಗಿದೆ.

ಚಾಟಿ ಬೀಸಿದ್ದ ಹೈಕೋರ್ಟ್

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಅಳವಡಿಸಲಾಗುತ್ತಿದ್ದು, ಬಿಬಿಎಂಪಿ ಕ್ರಮ ವಹಿಸುತ್ತಿಲ್ಲ ಎಂದು ಈಚೆಗಷ್ಟೇ ಹೈಕೋರ್ಟ್ ಬಿಬಿಎಂಪಿಗೆ ಚಾಟಿ ಬೀಸಿತ್ತು. ಬಿಬಿಎಂಪಿಯ ನಾಮಕವಾಸ್ತೆ ಆಗಿದೆ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

Read More
Next Story