ಸಿಸಿಎಫ್‌ ಕಚೇರಿಯಲ್ಲೇ ಅಕ್ರಮ ಮರ ಕಡಿತಲೆ: ಸಚಿವರ ನೊಟೀಸ್
x
ಈಶ್ವರ್‌ ಖಂಡ್ರೆ

ಸಿಸಿಎಫ್‌ ಕಚೇರಿಯಲ್ಲೇ ಅಕ್ರಮ ಮರ ಕಡಿತಲೆ: ಸಚಿವರ ನೊಟೀಸ್

ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಕಚೇರಿ ಆವರಣದಲ್ಲಿರುವ ಬೃಹತ್ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವ ಆರೋಪದ ಕುರಿತು ಮೂರು ದಿನದೊಳಗೆ ಸೂಕ್ತ ಕಾರಣ ನೀಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.


Click the Play button to hear this message in audio format

ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಫ್) ಕಚೇರಿ ಆವರಣದಲ್ಲಿರುವ ಬೃಹತ್ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮರ ಕಡಿತಲೆಗೆ ಸಂಬಂಧಿಸಿದಂತೆ ಮೂರು ದಿನದೊಳಗೆ ಮಾಹಿತಿ ನೀಡಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶಿವಮೊಗ್ಗ ಸಿಸಿಎಫ್‌ಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಅರಣ್ಯ ಸಂರಕ್ಷಣೆಯ ಹೊಣೆ ಹೊತ್ತಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಆವರಣದಲ್ಲೇ ಅಕ್ರಮ ಮರಕಡಿತಲೆ ನಡೆದಿರುವ ಕುರಿತು ಸಾರ್ವಜನಿಕರ ದೂರು ಬಂದಿದೆ. ಪ್ರಧಾನ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಮರಗಳ ಕಡಿತಲೆ, ಸಾಗಾಟದ ಸಚಿತ್ರ ಮಾಹಿತಿಯೊಂದಿಗೆ ದೂರ ಬಂದ ಹಿನ್ನಲೆಯಲ್ಲಿ ಸಚಿವರು ಈ ಕ್ರಮ ಕೈಗೊಂಡಿದ್ದಾರೆ.

ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿರುವ ಬೃಹತ್ ಮರಗಳ‌ ಹನನಕ್ಕೆ ಕಾರಣವೇನು? ನಿಯಮಾನುಸಾರ ಮರ ಕಡಿತಲೆಗೆ ಅರ್ಜಿ ಸಲ್ಲಿಸಿ ಮರ ಕಡಿತಲೆ ಆದೇಶ ಪಡೆಯಲಾಗಿದೆಯಾ? ಕಡಿದ ಮರಗಳನ್ನು ಯಾವ ಡಿಪೋಗೆ ಸಾಗಿಸಲಾಗಿದೆ? ಎಂಬುದರ ಬಗ್ಗೆ ಸಂಪೂರ್ಣ ವಿವರಗಳನ್ನು ಮೂರು ದಿನದೊಳಗೆ ಬೆಂಗಳೂರು ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಶಿವಮೊಗ್ಗ ಅರಣ್ಯ ಕಚೇರಿಯ ಆವರಣದಲ್ಲಿ ಭಾರೀ ಬೆಲೆ ಬಾಳುವ ಬೃಹತ್ ಮರಗಳನ್ನು ಎರಡು ದಿನದ ಹಿಂದೆ ಕಡಿತಲೆ ಮಾಡಿ ಸಾಗಾಟ ಮಾಡಲಾಗಿದೆ ಎಂದು ದೂರು ಕೇಳಿ ಬಂದಿತ್ತು.

Read More
Next Story