ಅಕ್ರಮ ಬೆಟ್ಟಿಂಗ್ ಪ್ರಕರಣ: ಶಾಸಕ ಕೆ.ಸಿ. ವೀರೇಂದ್ರಗೆ ಸೇರಿದ 55 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
x

ಅಕ್ರಮ ಬೆಟ್ಟಿಂಗ್ ಪ್ರಕರಣ: ಶಾಸಕ ಕೆ.ಸಿ. ವೀರೇಂದ್ರಗೆ ಸೇರಿದ 55 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ


ಅಕ್ರಮ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ವಶದಲ್ಲಿರುವ ಚಳ್ಳಕೆರೆ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಮತ್ತೊಮ್ಮೆ ದಾಳಿ ನಡೆಸಿದ್ದು, ಬರೋಬ್ಬರಿ 55 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.

ಶಾಸಕ ವೀರೇಂದ್ರ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ಮತ್ತು ಚಳ್ಳಕೆರೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ, ಐದು ಉನ್ನತ ದರ್ಜೆಯ ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯಾಂಕ್ ಖಾತೆಗಳು ಮತ್ತು ಹಣ ಮುಟ್ಟುಗೋಲು

ಶಾಸಕ ಕೆ.ಸಿ. ವೀರೇಂದ್ರ ಅವರ ಹೆಸರಿನಲ್ಲಿದ್ದ 9 ಬ್ಯಾಂಕ್ ಖಾತೆಗಳಲ್ಲಿದ್ದ 40.69 ಕೋಟಿ ರೂಪಾಯಿ ಮತ್ತು ಇತರ 262 ಖಾತೆಗಳಲ್ಲಿದ್ದ 14.46 ಕೋಟಿ ರೂಪಾಯಿ ಹಣವನ್ನು ಇ.ಡಿ. ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಮೊತ್ತವು ₹55 ಕೋಟಿ ಎಂದು ಅಂದಾಜಿಸಲಾಗಿದೆ.

ಚಳ್ಳಕೆರೆಯ ಕೋಟೆಕ್ ಮಹೀಂದ್ರಾ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ವೀರೇಂದ್ರ ಮತ್ತು ಅವರ ಕುಟುಂಬದ ಸದಸ್ಯರ ಹಣಕಾಸು ವರ್ಗಾವಣೆಗಳ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳ ಮೂಲಕ ಗಳಿಸಿದ ಹಣವನ್ನು ಈ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.

ಹಿಂದಿನ ದಾಳಿಯಲ್ಲಿ ಸಿಕ್ಕಿದ್ದೇನು?

ಆಗಸ್ಟ್ 22ರಂದು ಚಳ್ಳಕೆರೆಯಲ್ಲಿರುವ ವೀರೇಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇ.ಡಿ. ಅಧಿಕಾರಿಗಳು, 18 ಗಂಟೆಗಳ ಕಾಲ ಶೋಧ ನಡೆಸಿ, 1 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಸೇರಿದಂತೆ ಸುಮಾರು 12 ಕೋಟಿ ನಗದು, 6 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಮತ್ತು 10 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ.ಯ ತನಿಖೆ ಮುಂದುವರಿದಿದೆ.

Read More
Next Story