ಅಕ್ರಮ ಆಸ್ತಿ ಸಂಪಾದನೆ: ಶೃಂಗೇರಿ ಶಾಸಕ ರಾಜೇಗೌಡ, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್‌
x

ಅಕ್ರಮ ಆಸ್ತಿ ಸಂಪಾದನೆ: ಶೃಂಗೇರಿ ಶಾಸಕ ರಾಜೇಗೌಡ, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್‌

ಶಾಸಕ ಟಿ.ಡಿ. ರಾಜೇಗೌಡ ಅವರು ಅಧಿಕಾರ ದುರುಪಯೋಗ ಮಾಡಿ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆಗೆ ಕೋಟ್ಯಂತರ ವಂಚನೆ ಮಾಡಿದ್ದಾರೆ. ಶಾಸಕರ ಕುಟುಂಬದವರು ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾರೆಂದು ದಿನೇಶ್‌ ದೂರಿನಲ್ಲಿ ಆರೋಪಿಸಿದ್ದರು.


ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಕುಟುಂಬದ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕೊಪ್ಪ ನಿವಾಸಿ ದಿನೇಶ್ ಎಚ್.ಕೆ. ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೆ.16ರಂದು ಶಾಸಕರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು.

ಶಾಸಕ ಟಿ.ಡಿ. ರಾಜೇಗೌಡ ಅವರು ಅಧಿಕಾರ ದುರುಪಯೋಗ ಮಾಡಿ ಸರ್ಕಾರ ಹಾಗೂ ಆದಾಯ ತೆರಿಗೆ ಇಲಾಖೆಗೆ ಕೋಟ್ಯಂತರ ವಂಚನೆ ಮಾಡಿದ್ದಾರೆ. ಶಾಸಕರ ಕುಟುಂಬದವರು ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾರೆಂದು ದಿನೇಶ್‌ ದೂರಿನಲ್ಲಿ ಆರೋಪಿಸಿದ್ದರು.

ಮೆ. ಶಬಾನಾ ರಂಜಾನ್ ಸಂಸ್ಥೆಯ ವ್ಯವಹಾರಗಳಲ್ಲಿ ಶಾಸಕ ಟಿ.ಡಿ. ರಾಜೇಗೌಡ ಕುಟುಂಬದ ಸದಸ್ಯರಾದ ಪತ್ನಿ ಡಿ.ಕೆ. ಪುಷ್ಪಾ ಹಾಗೂ ಪುತ್ರ ರಾಜದೇವ್ ಟಿ.ಆರ್. ಅವರು ಆದಾಯಕ್ಕೆ ತಾಳೆಯಾಗದಷ್ಟು ಆಸ್ತಿ ಸಂಪಾದಿಸಿರುವ ಬಗ್ಗೆ ದಾಖಲೆಗಳಿವೆ. ಆರಂಭದಲ್ಲಿ ಈ ಸಂಸ್ಥೆಗೆ ಹಾಜಿ ಔರಂಗಜೇಬ್ ಹಾಗೂ ಇತರರು ಪಾಲುದಾರರಾಗಿದ್ದರು. ನಂತರ 1992ರಲ್ಲಿ ವಿ.ಜಿ. ಸಿದ್ದಾರ್ಥ, ಮಾಳವಿಕಾ ಹೆಗ್ಡೆ ಮತ್ತು ಎಸ್.ವಿ. ಗಂಗಯ್ಯ ಹೆಗ್ಡೆ ಪಾಲುದಾರರಾಗಿದ್ದರು. ಈ ಸಂಸ್ಥೆಯ ಮೂಲಕ 266 ಎಕರೆ ಕಾಫಿ ತೋಟ ಖರೀದಿಸಲಾಗಿತ್ತು.

2019ರಲ್ಲಿ ಸಿದ್ದಾರ್ಥ ಮತ್ತು ಗಂಗಯ್ಯ ಹೆಗ್ಡೆ ನಿಧನವಾದ ನಂತರ ಸಂಸ್ಥೆಯಲ್ಲಿ ರಾಜೇಗೌಡರ ಕುಟುಂಬ ಪಾಲುದಾರರಾಗಿದ್ದರು. ಬ್ಯಾಂಕ್ಗಳಿಂದ ಪಡೆದ ಸಾಲ ಪಾವತಿ ದಾಖಲೆಗಳಲ್ಲಿ ಮೊತ್ತ ಹಾಗೂ ಶಾಸಕರ ಅಫಿಡವಿಟ್‌ನಲ್ಲಿ ಘೋಷಿಸಿದ ವಾರ್ಷಿಕ ಆದಾಯದ (40 ಲಕ್ಷ ರೂ.) ಮಧ್ಯೆ ವ್ಯತ್ಯಾಸಗಳಿದ್ದವು ಎಂದು ಹೇಳಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಈ ಹಿಂದೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ 2023ರಲ್ಲಿ ಆರೋಪ ನಿರಾಧಾರವೆಂದು ವರದಿ ನೀಡಿದ್ದರು. ಆಗ ದೂರುದಾರರು ವರದಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ನ್ಯಾಯಾಲಯವು ಎಫ್ಐಆರ್ ದಾಖಲಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಮತ್ತೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

Read More
Next Story