
ಕರ್ನಾಟಕ ಹೈಕೋರ್ಟ್
10 ವರ್ಷ ಕೂಲಿ ಮಾಡಿದ್ರೆ ಸೇವೆ ಕಾಯಂ ಮಾಡಿ: ಹೈಕೋರ್ಟ್ ಮಹತ್ವದ ಆದೇಶ
ಅಂತಿಮವಾಗಿ ಕೆಎಟಿ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಜುಂಜಪ್ಪ ಅವರನ್ನು ಸೇವೆಗೆ ಕಾಯಂಗೊಳಿಸುವಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನಿರ್ದೇಶಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪೊಂದರಲ್ಲಿ ಮಂಜೂರಾದ ಹುದ್ದೆಯಲ್ಲಿ 10 ವರ್ಷಗಳ ಕಾಲ ನಿರಂತರ ಕೆಲಸ ಮಾಡಿದ ನೌಕರರು ತಮ್ಮ ಸೇವೆ ಕಾಯಂಗೊಳಿಸಲು ಅರ್ಹರೆಂದು ಘೋಷಿಸಿದೆ. ಈ ತೀರ್ಪಿನ ಜೊತೆಗೆ, 30 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಅರಣ್ಯ ವೀಕ್ಷಕ/ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ನೌಕರರೊಬ್ಬರ ಸೇವೆಯನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕೋರ್ಟ್ ಆದೇಶಿಸಿದೆ.
ಅರಣ್ಯ ಇಲಾಖೆ ತಮ್ಮ ಸೇವೆಯನ್ನು ಕಾಯಂಗೊಳಿಸಲು ನಿರಾಕರಿಸಿ ನೀಡಿದ್ದ ಹಿಂಬರಹವನ್ನು ಮತ್ತು ಆ ಹಿಂಬರಹವನ್ನು ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶವನ್ನು ರದ್ದುಪಡಿಸುವಂತೆ ಆನೇಕಲ್ ವಲಯದ ಅರಣ್ಯ ವೀಕ್ಷಕ (ಫಾರೆಸ್ಟ್ ವಾಚರ್) ಪಿ. ಜುಂಜಪ್ಪ (53) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಈ ಆದೇಶವು ದೀರ್ಘಕಾಲದಿಂದ ತಾತ್ಕಾಲಿಕ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ನಿರಂತರವಾಗಿ 10 ವರ್ಷಗಳ ಕಾಲ ಮಂಜೂರಾದ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಕಾಯಂ ಸೇವೆಯ ಹಕ್ಕು ಇದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ತೀರ್ಪು, ರಾಜ್ಯದ ವಿವಿಧ ಇಲಾಖೆಗಳಲ್ಲಿ ದೀರ್ಘಕಾಲ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಾವಿರಾರು ನೌಕರರಿಗೆ ಭರವಸೆ ಎನಿಸಿದೆ.
ಏನಿದು ಪ್ರಕರಣ
ಜುಂಜಪ್ಪ ಅವರು 30 ವರ್ಷಗಳ ಕಾಲ ದಿನಗೂಲಿ ಆಧಾರದ ಮೇಲೆ ಅರಣ್ಯ ವೀಕ್ಷಕ ಮತ್ತು ಚಾಲಕನಾಗಿ ಸೇವೆ ಸಲ್ಲಿಸಿದ್ದರು. ಅವರು ಯಾವುದೇ ಅಡಚಣೆ ಇಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಿದ್ದರೂ, ಅರಣ್ಯ ಇಲಾಖೆ 2016ರ ಆಗಸ್ಟ್ 29ರಂದು ಅವರ ಸೇವೆಯನ್ನು ಕಾಯಂಗೊಳಿಸುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಕೆಎಟಿ) ಅರ್ಜಿ ಸಲ್ಲಿಸಿದರೂ 2019ರ ಜುಲೈ 31ರಂದು ಆ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಜುಂಜಪ್ಪ ಅವರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಜುಂಜಪ್ಪ ಪರ ವಕೀಲರು, 30 ವರ್ಷಗಳ ಕಾಲ ಕಾಯಂ ನೌಕರನಂತೆ ಸೇವೆ ಸಲ್ಲಿಸಿದ್ದಾರೆ ಮತ್ತು ರಾಜ್ಯ ಸರ್ಕಾರದ ವಿವಿಧ ಆದೇಶಗಳಲ್ಲಿ ನಿಗದಿಪಡಿಸಿದ ಸೇವೆ ಕಾಯಮಾತಿಗೆ ಸಂಬಂಧಿಸಿದ ಮಾನದಂಡಗಳನ್ನು ಪೂರೈಸಿದ್ದಾರೆ ಎಂದು ಕೋರ್ಟ್ಗೆ ಮನವರಿಕೆ ಮಾಡಿದರು. ಅಲ್ಲದೆ, 10 ವರ್ಷಗಳ ಕಾಲ ನಿರಂತರವಾಗಿ ಮಂಜೂರಾದ ಹುದ್ದೆಯಲ್ಲಿ ಕೆಲಸ ಮಾಡಿದ ನೌಕರರ ಸೇವೆಗಳನ್ನು ಕಾಯಂಗೊಳಿಸಲು ಹೈಕೋರ್ಟ್ ಧಾರವಾಡ ಬೆಂಚ್ ಈಗಾಗಲೇ ಆದೇಶ ನೀಡಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಸೇವೆ ಕಾಯಂಗೊಳಿಸದಿರುವುದು ಭಾರತ ಸಂವಿಧಾನದ ಪರಿಚ್ಛೇದ 14 ಮತ್ತು 16ರ ಉಲ್ಲಂಘನೆ ಎಂದು ವಾದಿಸಿದ್ದರು.
ಪ್ರತಿಯಾಗಿ ವಾದಿಸಿದ ಸರ್ಕಾರ ಪರ ವಕೀಲರು, ದಿನಗೂಲಿ ನೌಕರರು ಸೇವೆ ಕಾಯಂಗೊಳಿಸಲು ಹಕ್ಕು ಹೊಂದಿಲ್ಲ ಮತ್ತು ಅವರ ನಿಯಮಿತ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಪತ್ರವನ್ನು ಅವರು ಸಲ್ಲಿಸಿಲ್ಲ ಎಂದು ತಿಳಿಸಿದರು. ಅರಣ್ಯ ಇಲಾಖೆಯಲ್ಲಿ ನೇಮಕಾತಿಗಳು ನಿಗದಿತ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಯಬೇಕಾಗಿದ್ದು, ಅವರ ಸೇವೆ ಕಾಯಂಗೊಳಿಸುವುದು ಈ ನಿಯಮಾವಳಿಗೆ ವಿರುದ್ಧ ಎಂದರು. .
ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಜುಂಜಪ್ಪ ಅವರ ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.