ಬಂಧಿಸುವ ಅವಕಾಶವಿದ್ದರೆ ಬಂಧಿಸುತ್ತಾರೆ, 100 ಜನ ಬೇಕಾಗಿಲ್ಲ: ಹೆಚ್‌ಡಿಕೆಗೆ ಪರಮೇಶ್ವರ ಟಾಂಗ್
ʻʻಕಾನೂನಿನಲ್ಲಿ ಬಂಧಿಸಲು ಅವಕಾಶ ಇದ್ದರೆ ಬಂಧಿಸುತ್ತಾರೆ. ಇದಕ್ಕೆ ನೂರು ಜನರ ಅವಶ್ಯಕತೆ ಇಲ್ಲʼʼ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ.
ಬುಧವಾರ ಅಕ್ರಮ ಗಣಿ ಹಗರಣ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, 100 ಸಿದ್ದರಾಮಯ್ಯ ಬಂದರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ʻʻಈ ವಿಚಾರಕ್ಕೆ ನಾನು ಕಮೆಂಟ್ ಮಾಡುವುದಿಲ್ಲ. ಆದರೆ, ಕಾನೂನಿನಲ್ಲಿ ಬಂಧಿಸಲು ಅವಕಾಶ ಇದ್ದರೆ ಬಂಧಿಸುತ್ತಾರೆ. ಇದಕ್ಕೆ ನೂರು ಜನರ ಅವಶ್ಯಕತೆ ಇಲ್ಲ. ಎಲ್ಲದಕ್ಕೂ ಕಾನೂನಿದೆ. ಕಾನೂನಿನ ಅಡಿಯಲ್ಲಿ ತನಿಖೆ ನಡೆಯಲಿದೆ" ಎಂದು ತಿರುಗೇಟು ನೀಡಿದ್ದಾರೆ.
ʻʻಕುಮಾರಸ್ವಾಮಿ ಅವರು ಕಾನೂನು ಹೋರಾಟ ಮಾಡೋದಕ್ಕೆ ಯಾವುದೇ ತಡೆ ಇಲ್ಲ. ಆರೋಪ ಬಂದಾಗ ಸರ್ಕಾರಿ ತನಿಖಾ ಸಂಸ್ಥೆಗಳು ತನಿಖೆ ಮಾಡಿ ಈ ರೀತಿ ಇದೆ ಎಂದು ಹೇಳಬಹುದು. ಡಾಕ್ಯುಮೆಂಟ್‌ನ ಆಧಾರದ ಮೇಲೆ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು. ಲೋಕಾಯುಕ್ತದವರು ಯಾಕೆ ಪ್ರಾಸಿಕ್ಯೂಷನ್‌ಗೆ ಕೇಳಿದ್ದಾರೆ. ಕುಮಾರಸ್ವಾಮಿ ಅವರು ಕಾನೂನಿಗೆ ವಿರುದ್ಧವಾಗಿದ್ದಾರೆ ಎನ್ನುವ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಹಾಗಾಗಿ ಪ್ರಾಸಿಕ್ಯೂಷನ್‌ಗೆ ಕೇಳಿದ್ದಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕುʼʼ ಎಂದು ತಿಳಿಸಿದರು.
ʻʻಮುಡಾ ನಿವೇಶನ ಹಂಚಿಕೆ ಕಾನೂನು ಬಾಹಿರ ಅಂದರೆ ಹೇಗೆ? ಯಾವುದಕ್ಕೆ ಮುಖ್ಯಮಂತ್ರಿಯನ್ನು ರಕ್ಷಣೆ ಮಾಡಬೇಕು? ಸಿಎಂಗೆ ಯಾವುದೇ ತೊಂದರೆ ಇಲ್ಲ. ನಾವು ಸಭೆ ನಡೆಸಿದರೆ, ಸಿಎಂ ರಕ್ಷಣೆ ಮಾಡಲು ಹೊರಟಿದ್ದಾರೆ ಎನ್ನುತ್ತಾರೆ, ಅದರಲ್ಲಿ ಏನು ತಪ್ಪಿದೆ? ನಾವು ಅವರ ಜೊತೆ ಇದ್ದೇವೆʼʼ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.