
ಬಿಜೆಪಿಯದ್ದು ಒಡೆದ ಮನೆ, ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ: ಸಚಿವ ಎಂ.ಬಿ ಪಾಟೀಲ್
ನಗರದ ಬಗ್ಗೆ ಕಿರಣ್ ಮಂಜುದಾರ್ ಪದೇ, ಪದೇ ಮಾತಾಡುವ ಉದ್ದೇಶವಾದರೂ ಏನು ? ಉದ್ಯಮಿ ಮೋಹನ್ ದಾಸ್ ಪೈಗೂ ರಾಜ್ಯ ಎಲ್ಲವನ್ನೂ ಕೊಟ್ಟಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಅನಗತ್ಯ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬದಲಾವಣೆ ಮಾಡುವುದಿದ್ದರೂ ಹೈಕಮಾಂಡ್ ಶಾಸಕರ ಅಭಿಪ್ರಾಯ ಪಡೆದು, ವೀಕ್ಷಕರನ್ನು ಕಳುಹಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ನಮ್ಮ ಪಕ್ಷದ ಪದ್ಧತಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದ ಬಗ್ಗೆ ಚಿಂತಿಸಲಿ. ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿ.ವೈ ವಿಜಯೇಂದ್ರ, ಅಶ್ವಥ್ ನಾರಾಯಣ್, ರಮೇಶ್ ಜಾರಕಿಹೊಳಿ ಹೀಗೆ ಅವರ ಪಕ್ಷವೇ ಒಡೆದ ಮನೆಯಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ದೂರವೇ ಉಳಿದಿದ್ದಾರೆ. ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ. ಸಿಎಂ ಔತಣಕೂಟಕ್ಕೆ ಕರೆದಿದ್ದರು, ಊಟ ಮಾಡಿ ಬಂದೆವು ಅಷ್ಟೇ ಎಂದು ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದರು.
ಆರ್‌ಎಸ್‌ಎಸ್‌ಗೆ ಕಾನೂನಾತ್ಮಕ ನಿಯಂತ್ರಣ
"ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ಮುಟ್ಟಿದರೆ ಭಸ್ಮವಾಗುತ್ತೀರಿ" ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, "ಯಾರು ಯಾರನ್ನು ಭಸ್ಮ ಮಾಡುತ್ತಾರೆ? ಭಸ್ಮ ಮಾಡಲು ಇವರು ಯಾರು? ಭಸ್ಮ ಮಾಡುವವನು ಮೇಲೆ ಇದ್ದಾನೆ. ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಲು ಸರ್ಕಾರ ಕಾನೂನಾತ್ಮಕವಾಗಿಯೇ ತೀರ್ಮಾನ ತೆಗೆದುಕೊಳ್ಳಲಿದೆ. ಕೋಮುದ್ವೇಷ ಬಿತ್ತುವ ಯಾವುದೇ ಸಂಘಟನೆಗೆ ಅವಕಾಶ ನೀಡಬಾರದು," ಎಂದು ಹೇಳಿದರು.
ರಸ್ತೆ ಗುಂಡಿ ಮುಚ್ಚಲು 1,000 ಕೋಟಿ ರೂಪಾಯಿ
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, "ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಅವರು ಬಯೋಟೆಕ್ನಾಲಜಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರ 1,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಮಳೆಯಿಂದಾಗಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೂ ಹಾನಿಯಾಗಿದೆ. ಮೂಲಭೂತ ಸೌಕರ್ಯಗಳ ಹಾನಿ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಂಪೂರ್ಣವಾಗಿ ಗುಂಡಿ ಮುಚ್ಚಲು ಸ್ವಲ್ಪ ಸಮಯ ಬೇಕಾಗುತ್ತದೆ," ಎಂದು ತಿಳಿಸಿದರು.
ಉದ್ಯಮಿಗಳು ರಾಜ್ಯ ಬಿಟ್ಟು ಹೋಗಲ್ಲ
ಉದ್ಯಮಿಗಳಾದ ಕಿರಣ್ ಮಜುಂದಾರ್ ಮತ್ತು ಮೋಹನ್‌ದಾಸ್ ಪೈ ಅವರು ಪದೇ ಪದೇ ರಾಜ್ಯದ ಬಗ್ಗೆ ಮಾತನಾಡುವ ಉದ್ದೇಶವೇನು ಎಂದು ಪ್ರಶ್ನಿಸಿದ ಪಾಟೀಲ್, "ರಾಜ್ಯವು ಅವರಿಗೂ ಎಲ್ಲವನ್ನೂ ಕೊಟ್ಟಿದೆ. ಬೇರೆ ರಾಜ್ಯಗಳ ಮಂತ್ರಿಗಳು ಬನ್ನಿ ಎಂದು ಕರೆದರೆ ಯಾರೂ ಹೋಗುವುದಿಲ್ಲ. ಬದಲಿಗೆ, ಬೇರೆ ರಾಜ್ಯಗಳಿಂದ ಉದ್ಯಮಿಗಳು ಬೆಂಗಳೂರಿಗೆ ಬರುತ್ತಿದ್ದಾರೆ. ನಮ್ಮ ರಾಜ್ಯದಿಂದ ಯಾವ ಉದ್ಯಮಿಯೂ ಹೊರಗೆ ಹೋಗುವುದಿಲ್ಲ," ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಮಳೆಗಾಲದಲ್ಲಿ ಡಾಂಬರು ಹಾಕಬಾರದು ಎಂಬ ನಿಯಮವಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಗುಂಡಿ ಮುಚ್ಚಲೇಬೇಕಾಗಿದೆ," ಎಂದು ಅವರು ಹೇಳಿದರು.