
Namma Metro Fare Hike | ಇಳಿಸದಿದ್ದರೆ ದರ- ಪ್ರಯಾಣಿಕರ ಸಮರ; ಮೆಟ್ರೋ ಪ್ರಯಾಣ ಬಾಯ್ಕಾಟ್
ಕಾಟಾಚಾರದ ದರ ಪರಿಷ್ಕರಣೆ ಮಾಡಿ ಕೈ ತೊಳೆದುಕೊಂಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಪ್ರಯಾಣಿಕರ ಆಕ್ರೋಶ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ʼನಮ್ಮ ಮೆಟ್ರೋʼ ಪ್ರಯಾಣ ದರ ಏರಿಕೆ ಮಾಡಿದ ಬಿಎಂಆರ್‌ಸಿಲ್ ವಿರುದ್ಧ ಪ್ರಯಾಣಿಕರ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ರಾಜಕೀಯ ಪಕ್ಷಗಳು, ಸರ್ಕಾರಗಳ ರಾಜಕೀಯ ಕೆಸರೆರಚಾಟದಲ್ಲಿ ದರ ಏರಿಕೆಯ ಹೊರೆ ಹೊರುತ್ತಿರುವ ಪ್ರಯಾಣಿಕರು ಇದೀಗ ಮೆಟ್ರೋ ಪ್ರಯಾಣ ಬಹಿಷ್ಕಾರದ ಅಭಿಯಾನ ಆರಂಭಿಸಿದ್ದಾರೆ. ಕಾಟಾಚಾರದ ದರ ಪರಿಷ್ಕರಣೆ ಮಾಡಿ ಕೈ ತೊಳೆದುಕೊಂಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಪ್ರಯಾಣಿಕರ ಆಕ್ರೋಶ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪ್ರಯಾಣ ದರ ಏರಿಕೆಗೆ ಅಸಮಾಧಾನ ಸೂಚಿಸಿರುವ ಪ್ರಯಾಣಿಕರು ಈಗಾಗಲೇ ಮೆಟ್ರೋದಿಂದ ದೂರು ಸರಿಯುತ್ತಿರುವುದು ದಿನನಿತ್ಯ ಪ್ರಯಾಣಿಕರ ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ಫೆ. 9 ಕ್ಕಿಂತ ಮೊದಲು ಪ್ರತಿ ದಿನ ಸರಾಸರಿ 8.50 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ಗರಿಷ್ಠ 9.20 ಲಕ್ಷ ಜನರ ಸಂಚರಿಸಿ ದಾಖಲೆ ನಿರ್ಮಿಸಿತ್ತು. ಆದರೆ, ಫೆ.9 ರಿಂದ ಈ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ದರ ಏರಿಕೆಯಾಗಿ ಒಂದು ವಾರದ ಬಳಿಕ ಪ್ರಯಾಣಿಕರ ಸಂಖ್ಯೆ 6.80 ಲಕ್ಷಕ್ಕೆ ಕುಸಿದಿದೆ. ದುಬಾರಿ ದರ ಪಾವತಿಸಲು ಒಲ್ಲದ ಪ್ರಯಾಣಿಕರು ಸ್ವಂತ ವಾಹನ, ಬಿಎಂಟಿಸಿ ಬಸ್ ಪ್ರಯಾಣದತ್ತ ಮುಖ ಮಾಡಿದ್ದಾರೆ.
ಹೋರಾಟದ ಅಖಾಡಕ್ಕಿಳಿದ ಪ್ರಯಾಣಿಕರು
ದರ ಇಳಿಸುವ ಕುರಿತ ಸರ್ಕಾರಗಳ ಹಗ್ಗಜಗ್ಗಾಟದಿಂದ ಯಾವುದೇ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಇದೀಗ ಪ್ರಯಾಣಿಕರೇ ಮೆಟ್ರೋ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಭಾನುವಾರ( ಫೆ.23) ರೊಳಗೆ ಸಹಮತದ ಪ್ರಯಾಣ ದರ ಕಾಯ್ದುಕೊಳ್ಳದಿದ್ದರೆ ಮೆಟ್ರೋ ಪ್ರಯಾಣ ಬಹಿಷ್ಕಾರ ನಡೆಸುವುದಾಗಿ ಮೆಟ್ರೋ ಪ್ರಯಾಣಿಕರ ವೇದಿಕೆ ಗಡುವು ನೀಡಿದೆ.
ಬಿಎಂಆರ್‌ಸಿಎಲ್ ವಿರುದ್ಧ ಹೋರಾಟ ತೀವ್ರಗೊಳಿಸುವ ಕುರಿತು ಬುಧವಾರ(ಫೆ.19) ಮಹತ್ವದ ಪತ್ರಿಕಾಗೋಷ್ಠಿ ನಡೆಸಲಿದೆ. ಅಲ್ಲದೇ ಭಾನುವಾರ ಮುಖ್ಯ ಸಮಾವೇಶ ಹಮ್ಮಿಕೊಳ್ಳಲು ವೇದಿಕೆ ನಿರ್ಧರಿಸಿದೆ. ಸಮಾವೇಶದಲ್ಲೇ ಮೆಟ್ರೋ ಪ್ರಯಾಣ ಬಹಿಷ್ಕರಿಸುವ ದಿನಾಂಕ ಘೋಷಣೆಯಾಗಲಿದೆ ಎಂದು ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ಬಡವರು ಹಾಗೂ ಜನಸಾಮಾನ್ಯರಿಗೆ ಮೆಟ್ರೋ ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ. ಕೇಂದ್ರ, ರಾಜ್ಯ ಸರ್ಕಾರಗಳು ದರ ಇಳಿಕೆಯ ಬಗ್ಗೆ ಮೌನಕ್ಕೆ ಶರಣಾಗಿವೆ. ಈಗಾಗಲೇ ನಾವು ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ 10 ಸಾವಿರ ಸಹಿ ಸಂಗ್ರಹ ಮಾಡಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಕೂಡ ಮರುಪರಿಶೀಲನೆಯ ಭರವಸೆ ನೀಡಿದ್ದಾರೆ ಎಂದು ರಾಜೇಶ್ ಭಟ್ ತಿಳಿಸಿದರು.
ಮೆಟ್ರೋ ವಿರುದ್ಧ ನಾಗರಿಕ ಸಮಾವೇಶ
ಬಿಎಂಆರ್‌ಸಿಎಲ್ ಅಧಿಕಾರಿಗಳು ಮೆಟ್ರೋ ಪ್ರಯಾಣ ದರ ಇಳಿಸದೇ ಹೋದರೆ ಬೆಂಗಳೂರಿನ ನಾಗರಿಕರನ್ನು ಸೇರಿಸಿ ಫೆ.23 ರಂದು ಭಾನುವಾರ ಸಮಾವೇಶ ನಡೆಸುತ್ತೇವೆ. ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಯುವಜನ ಸಂಘಟನೆಗಳು, ಮೆಟ್ರೋ ಪ್ರಯಾಣಿಕರು, ಬುದ್ದಿ ಜೀವಿಗಳು, ನಗರ ಯೋಜನೆ ತಜ್ಞರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಪ್ರಮುಖ ಸಾರ್ವಜನಿಕ ಸ್ಥಳಗಳು, ಐಟಿ ಕಂಪೆನಿಗಳ ಸಮೂಹವಿರುವ ಸ್ಥಳಗಳು, ಐಟಿ ಬಿಟಿ ಕಂಪೆನಿ ಯೂನಿಯನ್ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದೇವೆ. ಮೂರು ವಾಟ್ಸ್ ಆಪ್ ಗುಂಪುಗಳನ್ನು ಮಾಡಿದ್ದು, ಅದರಲ್ಲಿ ಆನ್‌ಲೈನ್ ಸಭೆಗಳನ್ನು ನಡೆಸಲಾಗಿದೆ. ಪ್ರತಿ ಮೆಟ್ರೋ ನಿಲ್ದಾಣದಲ್ಲಿ ವೇದಿಕೆಯ ಸದಸ್ಯರು ಹಾಗೂ ಪ್ರಯಾಣಿಕರು ಕರಪತ್ರ ಹಂಚಲಿದ್ದಾರೆ ಎಂದು ತಿಳಿಸಿದರು.
ಮೂಲಸೌಕರ್ಯ ನೀಡದೇ ದರ ದುಪ್ಪಟ್ಟು
ಬೆಂಗಳೂರಿನಲ್ಲಿರುವ 72 ಕಿ,.ಮೀ ಉದ್ದದ ಮೆಟ್ರೋ ಮಾರ್ಗ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಹಲವು ನಿಲ್ದಾಣಗಳಲ್ಲಿ ಲಿಫ್ಟ್ ಪದೇ ಪದೇ ಕೆಡುತ್ತಿದೆ. ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಒದಗಿಸಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ದುಬಾರಿ ಪ್ರಯಾಣ ದರ ಸುಲಿಗೆ ಮಾಡುತ್ತಿರುವುದು ಅಕ್ಷಮ್ಯ. ಹಾಗಾಗಿ ಪ್ರಯಾಣ ದರ ಇಳಿಕೆಗೆ ಆಗ್ರಹಿಸುತ್ತಿದ್ದೇವೆ.
ಮೆಟ್ರೋ ಸಾರಿಗೆ ಇರುವ ಬೇರೆ ಬೇರೆ ರಾಜ್ಯದಲ್ಲಿ ಸಾರ್ವಜನಿಕರಿಗೆ ಅಗ್ಗದ ಹಾಗೂ ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಲಭ್ಯವಾಗುತ್ತಿದೆ. ಆದರೆ, ನಮ್ಮಮೆಟ್ರೋ ಮಾತ್ರ ದೇಶದಲ್ಲೇ ಅತ್ಯಂತ ದುಬಾರಿ ಪ್ರಯಾಣ ಸೇವೆಯಾಗಿದೆ ಎಂದು ರಾಜೇಶ್ ಭಟ್ ಅಸಮಾಧಾನ ಹೊರಹಾಕಿದರು.
ಈ ಮಧ್ಯೆ ಪ್ರಯಾಣ ದರ ಪರಿಷ್ಕರಣೆಗೆ ಒತ್ತಾಯಿಸಿ ಬೆಂಗಳೂರು ಮೆಟ್ರೋ ಮತ್ತು ಉಪನಗರ ರೈಲು ಪ್ರಯಾಣಿಕರ ಸಂಘದ ಸಂಸ್ಥಾಪಕ ಪ್ರಕಾಶ್ ಮಂಡೋತ್ ಅವರು ಕೂಡ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.