ನನ್ನ ಕಳೆದುಕೊಂಡರೆ ಒಕ್ಕಲಿಗ ಸಮುದಾಯವನ್ನೇ ಕಳೆದುಕೊಂಡಂತೆ: ಡಿಕೆಶಿ
ʻʻಎಚ್‌ಡಿ ಕುಮಾರಸ್ವಾಮಿ ಬಗ್ಗೆ ನನಗೆ ವೈಯುಕ್ತಿಕವಾಗಿ ಬಹಳ ಗೌರವ ಇದೆ. ಈಗಲೂ ಗೌರವ ಇದೆ, ಮುಂದೆಯೂ ಇರುತ್ತದೆ. ಆದರೆ ಬಂಡೆ, ಕಲ್ಲು ,ಚೂರಿ ವಿಷ ಕೊಟ್ರು ಅನ್ನೋದು ಇವೆಲ್ಲಾ ಯಾಕೆ? ನಾವು ಹಿರಿಯರಿಗೆ ಕೊಡುವ ಗೌರವ ಸ್ವೀಕಾರ ಮಾಡಬೇಕು. ನಮ್ಮಂತವರನ್ನ ಕಳೆದುಕೊಳ್ಳೋದು ನನ್ನ ಕಳೆದುಕೊಂಡಂತೆ ಅಲ್ಲ. ಇಡೀ ಸಮುದಾಯವನ್ನ ಕಳೆದುಕೊಂಡಂತೆʼʼ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ʻʻನಾನು ಕುಮಾರಸ್ವಾಮಿ ಅವರಿಗೆ ಗೌರವ ನೀಡುತ್ತಿದ್ದರೂ ಅವರು ಪದೇ ಪದೆ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಆಧಾರರಹಿತ ಟೀಕೆ ಮಾಡುತ್ತಿದ್ದಾರೆ. ನಾನು ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ಅದು ನನ್ನ ಜಮೀನಿನ ಬಂಡೆಯನ್ನು ಕಾನೂನುಬದ್ಧವಾಗಿ ಒಡೆದಿದ್ದೇನೆ. ನಾವು ಹಿರಿಯರಿಗೆ ಗೌರವ ನೀಡುವುದೇ ಅವರಿಂದಲೂ ಅದನ್ನು ಸ್ವೀಕರಿಸಲುʼʼ ಎಂದು ಹೇಳಿದರು.
ʻʻರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದು ನೋಡಿ. ನಮ್ಮಂತಹವರನ್ನು, ಅಂದರೆ ಸಮುದಾಯವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು ಅವರು ಏನೇ ಅಂದರೂ ಸಹಿಸಿಕೊಂಡಿದ್ದೇನೆ. ಅವರು ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಮಾತನಾಡೋಣʼʼ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿಕೆ ಸುರೇಶ್ ಗೆ ಮತ ಹಾಕುವಂತೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಧಮ್ಕಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ʻʻನಾವು ನೀರಿನ ಕಷ್ಟಕಾಲದಲ್ಲೂ ಬೆಂಗಳೂರಿನ ಎಲ್ಲಾ ಜನರಿಗೂ ಕುಡಿಯಲು ನೀರು ಪೂರೈಸುತ್ತಿದ್ದೇವೆ. ಕುಮಾರಸ್ವಾಮಿ ಅವರು ತಮ್ಮ ನುಡಿಮುತ್ತುಗಳನ್ನು ಮರೆ ಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆʼʼ ಎಂದು ಹೇಳಿದರು.