
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ: ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ
ರಾಜ್ಯದಲ್ಲಿ ಕೊಲೆ, ಕಳ್ಳತನ, ದರೋಡೆ ಹೆಚ್ಚಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ. ಈ ಹಬ್ಬಕ್ಕೆ ಕಾಂಗ್ರೆಸ್ಸೇ ನೇರ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ʻʻಗೃಹ ಇಲಾಖೆಯು ಡಾ.ಜಿ.ಪರಮೇಶ್ವರ್ ಅವರ ಕೈಯಲ್ಲಿಲ್ಲ. ಇದನ್ನು ಬೇರೆ ಯಾರೋ ಹೈಜಾಕ್ ಮಾಡಿ ನಡೆಸುತ್ತಿದ್ದಾರೆ" ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ ಎಂದು ಅವರು ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ತೀವ್ರ ಟೀಕಾಸ್ತ್ರ ಪ್ರಯೋಗಿಸಿದರು.
ʻʻಇತ್ತೀಚೆಗೆ ಹತ್ಯೆಯಾದ ಹುಬ್ಬಳ್ಳಿಯ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರವೇ ಅಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು. ರಾಜ್ಯದಲ್ಲಿ ಮಳೆ ಸುರಿಯುವುದಕ್ಕಿಂತ ಹೆಚ್ಚಾಗಿ ಕೊಲೆಗಳು ನಡೆಯುತ್ತಿವೆʼʼ ಎಂದು ಹರಿಹಾಯ್ದರು.
ʻʻದೇವರಾಜೇಗೌಡ ಸ್ವತಃ ಹೇಳಿಕೆ ನೀಡಿ, ಡಿ.ಕೆ.ಶಿವಕುಮಾರ್ ಅವರ ಧ್ವನಿಮುದ್ರಣ ಬಿಡುಗಡೆ ಮಾಡಿದ್ದಾರೆ. ನಿಜ ಇರುವುದಕ್ಕೇ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ. ಆದರೆ, ಅದಕ್ಕಾಗಿ ಅವರ ಬಂಧನವಾಗಿದೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಹೀಗೆ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನೂ ತಡೆಯುವ ಉದ್ದೇಶ ಡಿ.ಕೆ.ಶಿವಕುಮಾರ್ ಅವರಿಗಿದೆʼʼ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಅಶೋಕ್ ಆರೋಪ ಮಾಡಿದ್ದಾರೆ.
ʻʻಸುರ್ಜೇವಾಲ, ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಇದೇ ರೀತಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿದೆ. ಆದರೆ ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ. ಇಡೀ ಗೃಹ ಇಲಾಖೆಯರನ್ನು ಬೇರೆ ಯಾರೋ ಹೈಜಾಕ್ ಮಾಡಿ ನಡೆಸುತ್ತಿದ್ದಾರೆ. ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದಂತೆ ಪ್ರಜ್ವಲ್ ಚಾಲಕನನ್ನು ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಾರೆʼʼ ಎಂದರು.
ʻʻಪ್ರಜ್ವಲ್ ರೇವಣ್ಣ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಅದೇ ರೀತಿ ವೀಡಿಯೋ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಆದರೆ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹೀಗೆ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆʼʼ ಎಂದು ಆರೋಪಗಳನ್ನು ಮಾಡಿದ್ದಾರೆ.