ಸಂವಿಧಾನ ಬದಲಾವಣೆ ಹೇಳಿಕೆ ಸಾಬೀತಾದರೆ ರಾಜಕೀಯ ಬಿಡುತ್ತೇನೆ: ಡಿಕೆ ಶಿವಕುಮಾರ್
x

ಡಿ.ಕೆ ಶಿವಕುಮಾರ್‌ 

ಸಂವಿಧಾನ ಬದಲಾವಣೆ ಹೇಳಿಕೆ ಸಾಬೀತಾದರೆ ರಾಜಕೀಯ ಬಿಡುತ್ತೇನೆ: ಡಿಕೆ ಶಿವಕುಮಾರ್

ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿದ್ದು ಬಿಜೆಪಿ ನಾಯಕರೇ. ನಾನು ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ಎಂದಾದರೂ ಹೇಳಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಅವರು ತಿಳಿಸಿದರು.


ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಲು ಸಂವಿಧಾನವನ್ನು ತಿದ್ದುಪಡಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದೇನೆ ಎಂಬ ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಅಂತಹ ಹೇಳಿಕೆಗಳು ನಿಜವೆಂದು ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಸಂದರ್ಶನದಲ್ಲಿನ ಸತ್ಯ ಮತ್ತು ನನ್ನ ರಾಜಕೀಯ ನಿಲುವುಗಳನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ? ನಾನು ಹಾಗೆ ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನವನ್ನು ತಂದವರು ನಾವೇ, ಮತ್ತು ಅದನ್ನು ರಕ್ಷಿಸುತ್ತಿದ್ದೇವೆ. ನಮ್ಮ ನಾಯಕರು ಬುದ್ಧಿವಂತರು. ಇದಲ್ಲದೆ ಸಂದರ್ಶನವನ್ನು ಅವರು ನೋಡಿದ್ದಾರೆ. ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿದ್ದು ಬಿಜೆಪಿ ನಾಯಕರೇ. ನಾನು ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ಎಂದಾದರೂ ಹೇಳಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ" ಎಂದು ಅವರು ತಿಳಿಸಿದರು.

ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ವಿವರಣೆ ಕೇಳಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂದರ್ಶನವನ್ನು ವಿವರವಾಗಿ ಪರಿಶೀಲಿಸಲು ನಾನು ಅವರಿಗೆ ಹೇಳಿದ್ದೇನೆ. ನಾನು ಆ ರೀತಿಯ ಯಾವ ಹೇಳಿಕೆಯನ್ನು ನೀಡಿಲ್ಲ ಎಂಬುವುದನ್ನು ಅವರು ಒಪ್ಪಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಏನಿದು ವಿವಾದ?

ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಶಿವಕುಮಾರ್, ಸಂವಿಧಾನವನ್ನು ಬದಲಾಯಿಸುವ ಮೂಲಕ ಮುಸ್ಲಿಮರಿಗೆ ಕೋಟಾ ಕಲ್ಪಿಸುವ ʻಒಳ್ಳೆಯ ದಿನʼ ಬರಬಹುದು ಎಂದು ಹೇಳಿದ್ದರು. ಆದರೆ ಸೋಮವಾರ ತಮ್ಮ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಎಲ್ಲೂ ಹೇಳಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಈ ಬಗ್ಗೆ ಬಿಜೆಪಿ, ಡಿಕೆ ಶಿವಕುಮಾರ್‌ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ದಾಳಿ ನಡೆಸಿದ್ದು, ಈ ವಿಷಯವನ್ನು ಸಂಸತ್ತಿನಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ, ಮತಗಳಿಗಾಗಿ ಸಂವಿಧಾನವನ್ನು ಬದಲಾಯಿಸುವುದು ಕಾಂಗ್ರೆಸ್‌ನ ಗುಪ್ತ ಕಾರ್ಯಸೂಚಿಯಾಗಿದೆ ಎಂದು ಆರೋಪಿಸಿದ್ದರು.

ಆದರೆ ಡಿ.ಕೆ ಶಿವಕುಮಾರ್, ಕರ್ನಾಟಕ ಮತ್ತು ಕೇಂದ್ರದ ಬಿಜೆಪಿ ನಾಯಕರು ಮತ್ತು ಸಚಿವರು ಕಾಂಗ್ರೆಸ್ ಮತ್ತು ತಮ್ಮ ವಿರುದ್ಧ ತಪ್ಪು ಹೇಳಿಕೆಗಳನ್ನು ನೀಡುವ ಮೂಲಕ ಅಪಖ್ಯಾತಿ ಮೂಡಿಸಲು ಲಜ್ಜೆಗೆಟ್ಟು ಸುಳ್ಳುಗಳನ್ನು ಆಶ್ರಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪ್ರತಿಪಕ್ಷ ಬಿಜೆಪಿಯ ತೀವ್ರ ಪ್ರತಿಭಟನೆಯ ನಡುವೆಯೂ, ಕಳೆದ ವಾರ ರಾಜ್ಯ ವಿಧಾನಸಭೆಯು ಮಾರ್ಚ್ 21 ರಂದು ಮುಸ್ಲಿಮರಿಗೆ ಸಾರ್ವಜನಿಕ ಗುತ್ತಿಗೆಗಳಲ್ಲಿ ಶೇ.4 ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿತ್ತು.

Read More
Next Story