
ಮಂಡ್ಯ ವಿಚಾರ ಅಂತಿಮವಾಗಿಲ್ಲ, ಚಿಕ್ಕಬಳ್ಳಾಪುರಕ್ಕೆ ಹೋಗಲ್ಲ: ಸುಮಲತಾ ಅಂಬರೀಶ್
ಮಂಡ್ಯ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ವಿಚಾರ ಅಂತಿಮವಾಗಿಲ್ಲ ಎಂಬ ಮಾಹಿತಿ ನನಗೆ ಬಂದಿದೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡೋಣ ಎಂದು ಸುಮಲತಾ ಅವರು ಹೇಳಿದ್ದಾರೆ
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿಲ್ಲ, ಮಂಡ್ಯ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ವಿಚಾರ ಅಂತಿಮವಾಗಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಬಂದ ಸುಮಲತಾ ಅವರು, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, “ಮಂಡ್ಯ ಕ್ಷೇತ್ರ ಬಿಟ್ಟು ಬೇರೆ ಎಲ್ಲೂ ರಾಜಕಾರಣ ಮಾಡಲು ನನಗೆ ಆಸಕ್ತಿ ಇಲ್ಲ” ಎಂದು ತಿಳಿಸಿದ್ದಾರೆ.
“ನಾನು ಹಿಂದಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿಲ್ಲ. ಮೊದಲು ಬೆಂಗಳೂರು ಉತ್ತರದಿಂದ ಸುಮಲತಾ ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೇಳಿ ಬಂತು. ಈಗ ಚಿಕ್ಕಬಳ್ಳಾಪುರ ಕ್ಷೇತ್ರದ ವಿಚಾರ ಬಂದಿದೆ. ನಾನು ಏಕೆ ಚಿಕ್ಕಬಳ್ಳಾಪುರಕ್ಕೆ ಹೋಗಲಿ ಎಂದು ಬಿಜೆಪಿ ವರಿಷ್ಠರಿಗೆ ಕೇಳಿದ್ದೇನೆ” ಎಂದು ಅವರು ಹೇಳಿದರು.
“ಮಂಡ್ಯ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ವಿಚಾರ ಅಂತಿಮವಾಗಿಲ್ಲ ಎಂಬ ಮಾಹಿತಿ ನನಗೆ ಬಂದಿದೆ. ನನ್ನ ಬಗ್ಗೆ ಪಕ್ಷದಲ್ಲೂ ಗೌರವ ಇದೆ. ವರಿಷ್ಠರೂ ಸಕರಾತ್ಮಕವಾಗಿ ಮಾತನಾಡಿದ್ದಾರೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡೋಣ” ಎಂದು ಸುಮಲತಾ ಹೇಳಿದ್ದಾರೆ.