ಸಂಧಾನ ವಿಫಲ | ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದ ಕೆ ಎಸ್‌ ಈಶ್ವರಪ್ಪ
x

ಸಂಧಾನ ವಿಫಲ | ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಎಂದ ಕೆ ಎಸ್‌ ಈಶ್ವರಪ್ಪ

ಕೆಲವರು ಸಂಧಾನಕ್ಕೆಂದು ನಮ್ಮ ನಿವಾಸಕ್ಕೆ ಬಂದಿದ್ದರು. ಆದರೆ ಯಾವುದೇ ಕಾರಣಕ್ಕೂ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಎಲ್ಲರೂ ಕರೆ ಮಾಡಿ ನನ್ನ ಸ್ಪರ್ಧೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.


ಶಿವಮೊಗ್ಗ: ತಮ್ಮ ಪುತ್ರನಿಗೆ ಟಿಕೆಟ್‌ ತಪ್ಪಿರುವ ಅಸಮಾಧಾನದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರನ್ನು ಮಲವೊಲಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವ ಬಿಜೆಪಿ ವರಿಷ್ಠರ ನಿರಂತರ ಪ್ರಯತ್ನಗಳು ಫಲ ಕೊಟ್ಟಿಲ್ಲ.

ಸೋಮವಾರ (ಮಾ.18) ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಭಾನುವಾರ ಇಡೀ ದಿನ ರಾಜ್ಯ ಮತ್ತು ಪಕ್ಷದ ಹೈಕಮಾಂಡ್‌ ಮಟ್ಟದ ಹಲವು ನಾಯಕರು ಈಶ್ವರಪ್ಪ ಮನೆಗೆ ಭೇಟಿ ನೀಡಿ ಮನವೊಲಿಸುವ ಯತ್ನ ಮಾಡಿದರು. ರಾಜ್ಯ ಮುಖಂಡ ಆರಗ ಜ್ಞಾನೇಂದ್ರ, ಹೈಕಮಾಂಡ್‌ ಮಟ್ಟದ ಮುಖಂಡರಾದ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್‌ ಅಗರ್‌ ವಾಲ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಸೇರಿದಂತೆ ಹಲವು ಮುಖಂಡರು ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು.

ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್‌ ಅವರಿಗೆ ವಿಧಾನ ಪರಿಷತ್‌ ಸ್ಥಾನ ಸೇರಿದಂತೆ ಹಲವು ಅವಕಾಶಗಳನ್ನು ತಮ್ಮ ಮುಂದಿಟ್ಟಿದ್ದರೂ, ತಾವು ಅದನ್ನು ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳುವುದೂ ಇಲ್ಲ. ಅಲ್ಲದೆ, ಸೋಮವಾರದ ಮೋದಿ ಕಾರ್ಯಕ್ರಮಕ್ಕೂ ತಾವು ಹೋಗುವುದಿಲ್ಲ. ಪಕ್ಷದ ಶುದ್ಧೀಕರಣಕ್ಕಾಗಿ ಈ ಬಾರಿ ತಾವು ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತಸಿದ್ಧ ಎಂದು ಮಾಧ್ಯಮಗಳಿಗೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಆರಗ ಜ್ಞಾನೇಂದ್ರ ಹಾಗೂ ಕೆಲವರು ಸಂಧಾನಕ್ಕೆಂದು ನಮ್ಮ ನಿವಾಸಕ್ಕೆ ಬಂದಿದ್ದರು. ಆದರೆ ಯಾವುದೇ ಕಾರಣಕ್ಕೂ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಎಲ್ಲರೂ ಕರೆ ಮಾಡಿ ನನ್ನ ಸ್ಪರ್ಧೆಗೆ ಬೆಂಬಲ ನೀಡುತ್ತಿದ್ದಾರೆ. ಎಲ್ಲ ಮೋರ್ಚಾದವರು ನನಗೆ ಕರೆ ಮಾಡುತ್ತಿದ್ದಾರೆ. ನೀವು ಚುನಾವಣಾ ನಿವೃತ್ತಿ ತೆಗೆದುಕೊಳ್ಳಬೇಡಿ ಅನ್ನುತ್ತಿದ್ದಾರೆ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಹೇಳಿದ್ದಾರೆ.

ನನ್ನ ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ ಈಶ್ವರಪ್ಪ, “ಪಕ್ಷದಲ್ಲಿ ಅನೇಕ ಹಿಂದುತ್ವವಾದಿಗಳಿಗೆ ಮೋಸವಾಗಿದೆ. ಲಿಂಗಾಯತರೇ ರಾಜ್ಯಾಧ್ಯಕ್ಷರು ಆಗಬೇಕು ಅಂದಿದ್ದರೆ ಯತ್ನಾಳ್ ರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕಿತ್ತು. ಯತ್ನಾಳ್ ಅವರನ್ನು ಯಾಕೆ ಮಾಡಲಿಲ್ಲ? ಲಿಂಗಾಯತರು ಬೆಳೆಯುವುದು ಇಷ್ಟವಿಲ್ಲ ಎಂದಿದ್ದರೆ, ಒಕ್ಕಲಿಗ ನಾಯಕರನ್ನಾದರೂ ಮಾಡಬಹುದಿತ್ತು” ಎಂದು ಬಿಎಸ್‌ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

“ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ನಡೆದರೂ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿಗೆ ಟಿಕೆಟ್ ಯಾಕೆ ಕೊಡಿಸಲಿಲ್ಲ?” ಎಂದು ಪ್ರಶ್ನಿಸಿದ ಅವರು, “ಯಡಿಯೂರಪ್ಪರ ದೊಡ್ಡ ನಾಯಕರು ಎನ್ನುವ ಭ್ರಮೆಯಲ್ಲಿ ವರಿಷ್ಠರು ಇದ್ದಾರೆ. ನನ್ನ ಮಗನಿಗೆ ಟಿಕೆಟ್ ನೀಡಿದೆ ಮೋಸ ಮಾಡಿದ್ದಾರೆ. ತುಂಬಾ ನಾಯಕರಿಗೆ ಮೋಸ ಆಗಿದೆ. ನಾನು ಕೊನೆಯವರೆಗೆ ಪಕ್ಷವನ್ನು ತಾಯಿ ಅಂತಾ ನಂಬಿ, ಪಕ್ಷದ ಸೂಚನೆಯಂತೆ ನಡೆದುಕೊಂಡು ಬಂದಿದ್ದೇನೆ” ಎಂದು ಅಸಮಾಧಾನ ಹೊರ ಹಾಕಿದರು.

ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಮಾಡುವ ಟೀಕೆಯ ಕುರಿತು ಉಲ್ಲೇಖಿಸಿದ ಈಶ್ವರಪ್ಪ, “ನಾವು ದಿನನಿತ್ಯ ಕಾಂಗ್ರೆಸ್ ಅನ್ನು ಟೀಕೆ ಮಾಡುತ್ತಿದ್ದೇವೆ. ಆದರೆ, ರಾಜ್ಯ ಬಿಜೆಪಿ ಯಡಿಯೂರಪ್ಪ ಕುಟುಂಬದ ಕಪಿಮುಷ್ಠಿಯಲ್ಲಿ ಸಿಲುಕಿದೆ. ಹಠ ಹಿಡಿದು ಯಡಿಯೂರಪ್ಪ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದಾರೆ. ಅಪ್ಪ ಮಕ್ಕಳ ಕೈಗೆ ಸಿಕ್ಕು ಪಕ್ಷ ಒದ್ದಾಡುತ್ತಿದೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದಿಂದ ಪಕ್ಷ ಮುಕ್ತವಾಗಬೇಕಿದೆ. ಈ ಉದ್ದೇಶದಿಂದ ಈಗ ನಾನು ಸ್ಪರ್ಧೆ ಮಾಡುತ್ತಿದ್ದೇನೆ” ಎಂದು ಹೇಳಿದರು.

Read More
Next Story