ಹೊಂದಾಣಿಕೆ ರಾಜಕಾರಣಕ್ಕೆ ನಾನೂ ಬಲಿಯಾದವನು: ಸ್ವಪಕ್ಷೀಯರ ವಿರುದ್ಧ ಸಿಟಿ ರವಿ ಆಕ್ರೋಶ
ರಾಜ್ಯದಲ್ಲಿ ಈಗ ಹೊಂದಾಣಿಕೆ ರಾಜಕಾರಣದ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಅದರಲ್ಲೂ ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ಅವರು, ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ್ದು, ʻʻನಾನು ಹೊಂದಾಣಿಕೆ ರಾಜಕಾರಣಕ್ಕೆ, ಬಲಿಪಶುವಾಗಿದ್ದೇನೆʼʼ ಎಂದು ಹೇಳುವ ಮೂಲಕ ಸಿಟಿ ರವಿ ಅವರು ಪಕ್ಷದಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ʻʻಹೊಂದಾಣಿಕ ರಾಜಕಾರಣದಿಂದ ಪಕ್ಷ ಹಾಳಾಗುತ್ತಿದೆ. ಪ್ರಾಮಾಣಿಕವಾಗಿ ಪಕ್ಷ ಎಂದು ಹೊಡೆದಾಡುವವರು ಬಲಿಯಾಗಿದ್ದಾರೆ, ಆದರೆ ಹೊಂದಾಣಿಕೆ ರಾಜಕಾರಣ ಮಾಡುವವರು ಎಲ್ಲ ಕಡೆ ಸಲ್ಲುತ್ತಾರೆ. ಪಕ್ಷಕ್ಕಾಗಿ ದುಡಿಯುವವರನ್ನು ಹೊಂದಾಣಿಕೆ ರಾಜಕಾರಣ ಮಾಡುವವರು ಮುಗಿಸಿ ಬಿಡುತ್ತಾರೆ. ನಾನು ಸಹ ಬಲಿಪಶುವೇ, ನಾನು ರಾಜಿ ಆಗದೇ ಇದ್ದದ್ದಕ್ಕೆ ಎಲ್ಲಾ ಪಕ್ಷದವರೂ ಸೇರಿ ನಮ್ಮವರು ಸೇರಿದಂತೆ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ. ಜನರು ನನ್ನನ್ನು ಸೋಲಿಸಿಲ್ಲ, ಆದರೆ ಪಿತೂರಿ ರಾಜಕಾರಣಕ್ಕೆ ಬಲಿಯಾಗಬೇಕಾಯಿತು, ಈಗ ರಾಜಿ ರಾಜಕಾರಣ ರಾಜ್ಯದ ಬೊಕ್ಕಸಕ್ಕೂ ಹಾನಿ ಉಂಟು ಮಾಡುತ್ತಿದೆ. ರಾಜಕಾರಣ ಎಲ್ಲಾ ಭ್ರಷ್ಟರು ಒಂದಾಗಿ ಬಿಡುತ್ತಾರೆ, ಭ್ರಷ್ಟರು ಪರಿಸ್ಪರ ರಕ್ಷಣೆ ಮಾಡುವ ಕೆಲಸ ಆಗಿದೆ. ಇದು ರಾಜ್ಯದ ಹಿತಕ್ಕೆ ಮಾರಕ, ಈ ಹೊಂದಾಣಿಕೆ ರಾಜಕಾರಣಕ್ಕೆ ಫುಲ್ ಸ್ಟಾಪ್ ಆಗಲೇ ಬೇಕುʼʼ ಎಂದು ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʻʻಈ ಹೊಂದಾಣಿಕೆ ರಾಜಕೀಯ ಕೆಲ ಸಂದರ್ಭಗಳಲ್ಲಿ ಲಾಭ ತಂದುಕೊಡಬಹುದು. ಆದರೆ, ಅಂತಹ ನಡೆ ಎಲ್ಲ ಪಕ್ಷದವರಿಗೂ ತೊಂದರೆ ಮಾಡುತ್ತದೆ. ರಾಜ್ಯದ ಹಿತಕ್ಕೂ ಮಾರಕ. ಸಿದ್ದಾಂತ ರಾಜಕಾರಣ ಮಾಡುವವರು ಸುಲಭವಾಗಿ ಬಲಿಯಾಗುತ್ತಾರೆ. 2023ರ ಚುನಾವಣೆಯಲ್ಲಿ ನನ್ನನ್ನು ಪಿತೂರಿ ಮಾಡಿ ಸೋಲಿಸಿದರು. ಇಂತಹ ರಾಜಕಾರಣಕ್ಕೆ ಮುಕ್ತಿ ಹಾಡಬೇಕುʼʼ ಎಂದರು.
ʻʻಬಿಜೆಪಿ ಭಿನ್ನಮತದ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಪಾದಯಾತ್ರೆ ಯಶಸ್ವಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಬಂದದ್ದು ಅದಕ್ಕೆ ಸಾಕ್ಷಿ. ಬಿಜೆಪಿ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎನ್ನುವ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಏಕೆ ಕೈಕಟ್ಟಿಕೊಂಡು ಕುಳಿತಿದೆ. ಇದೂ ಒಂದು ರೀತಿ ಹೊಂದಾಣಿಕೆ ರಾಜಕೀಯವೇ?ʼʼ ಎಂದು ಪ್ರಶ್ನಿಸಿದರು.