Micro Finance Harassment | ʼಮಾಂಗಲ್ಯ ಸರ ಉಳಿಸಿʼ ಅಭಿಯಾನ ನಡೆಸಿ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಗಟ್ಟಿಗಿತ್ತಿ ಶೈಲಜಾ ಹರನಗಿರಿ
ಸಂತ್ರಸ್ತ ಮಹಿಳೆ ರಾಣೆಬೆನ್ನೂರಿನ ಶೈಲಜಾ ಹರನಗಿರಿ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ್ದಾರೆ. ಸರ್ಕಾರ ಭರವಸೆಯನ್ನು ಕೊಟ್ಟಿದ್ದರೂ ತಮ್ಮ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಿತಿ ಮೀರಿರುವ ಮೈಕ್ರೋ ಫೈನಾನ್ಸ್ ಹಾವಳಿಗೆ ತಡೆ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಪ್ರಯೋಗಿಸಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿರೋಧಿಸಿ ಮಹಿಳೆಯರು ʼಮಾಂಗಲ್ಯ ಸರ ಉಳಿಸಿʼ ಅಭಿಯಾನ ಆರಂಭಿಸಿದ್ದರು.
ಆ ಮಹಿಳೆ ಆರಂಭಿಸಿದ ʼಮಾಂಗಲ್ಯ ಸರ ಉಳಿಸಿ" ಅಭಿಯಾನ ಹಾಗೂ ರಾಜ್ಯಾದ್ಯಂತ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗೆ ತೊಡಗಿದಾಗ ಎಚ್ಚೆತ್ತುಕೊಂಡ ಸರ್ಕಾರ ಮೈಕ್ರೋ ಫೈನಾನ್ಸ್ ಪುಂಡಾಟಕ್ಕೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಮೂಲಕ ಕಾನೂನು ತಿದ್ದುಪಡಿಗೆ ಮುಂದಾಗಿದೆ.
ಇದೇ ವೇಳೆ ಸಂತ್ರಸ್ತ ಮಹಿಳೆ ರಾಣೆಬೆನ್ನೂರಿನ ಶೈಲಜಾ ಹರನಗಿರಿ ಕೂಡಾ ಸಿದ್ದರಾಮಯ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ತಮ್ಮ ಮಾಂಗಲ್ಯ ಸರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆ ಮೂಲಕ ರವಾನೆ ಮಾಡಿ "ಮಾಂಗಲ್ಯ ಸರ ಉಳಿಸಿ, ಮೈಕ್ರೋ ಫೈನಾನ್ಸ್ ಹಾವಳಿ ಅಳಿಸಿ" ಅಭಿಯಾನಕ್ಕೆ ಮುನ್ನುಡಿ ಬರೆದಿದ್ದರು. ಅವರು ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಅಡುಗೆ ಸಿದ್ಧಪಡಿಸುವ ಬಡ ಮಹಿಳೆ.
ಮೈಕ್ರೋ ಫೈನಾನ್ಸ್ ಸಾಲದಿಂದ ಸಮಸ್ಯೆ ಸುಳಿಗೆ ಸಿಲುಕಿ ಪರದಾಟ ನಡೆಸಿದ ಕುಟುಂಬಗಳ ಸಂಕೇತವಾಗಿ ಈ ಮಹಿಳೆ ಸರ್ಕಾರ ದೃಢ ನಿರ್ಧಾರಕ್ಕೆ ಬರಲು ತಾವೂ ಕಾರಣಕರ್ತೃವಾಗಿದ್ದಾರೆ. ಕೊನೆಗೂ ಸರ್ಕಾರ ಉನ್ನತ ಮಟ್ಟದಲ್ಲಿ ಸಭೆ ನಡೆಸಿ ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೊಳಿಸಲು ಶನಿವಾರ ನಿರ್ಧಾರಕ್ಕೆ ಬರುವಂತಾಗಿತ್ತು.
ಸರ್ಕಾರದ ವಿರುದ್ಧ ಸಂತ್ರಸ್ತ ಕುಟುಂಬಗಳ ಮಹಿಳೆಯರೇ ಕೈಗೊಂಡ "ಮಾಂಗಲ್ಯ ಸರ ಉಳಿಸಿ" ಅಭಿಯಾನದಲ್ಲಿ ಶೈಲಜಾ ಹರನಗಿರಿ ಅವರ ಮಾಂಗಲ್ಯ ಹಿಡಿದ ಭಾವಚಿತ್ರವೇ ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧದ ಆಕ್ರೋಶ ಹೆಚ್ಚಾಗಲು ಕಾರಣವಾಗಿತ್ತು. ಆ ಮೂಲಕ ಬಿಜೆಪಿ, ಜೆಡಿಎಸ್ ಪಕ್ಷಗಳಿಗೂ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಅಸ್ತ್ರ ಝಳಪಿಸಲು ಅನುವಾಗಿತ್ತು. ಅವರ ಹಾಗೂ ಅಂತಹ ಅನೇಕ ಮಹಿಳೆಯರ ಕಾರಣದಿಂದ ಹಾವೇರಿ ರೈತಸಂಘವೂ ಬೆಂಬಲಕ್ಕೆ ನಿಂತು ಸರ್ಕಾರ ಗಟ್ಟಿ ನಿರ್ಧಾರವೊಂದನ್ನು ತಳೆಯಲು ಕಾರಣವಾಗಿತ್ತು.
ರೈತ ಸಂಘದ ಸಹಾಯದಿಂದ 'ಮಾಂಗಲ್ಯ ಉಳಿಸಿ, ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ' ಎಂಬ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಮಾಂಗಲ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಣೆಬೆನ್ನೂರಿನ ಶೈಲಜಾ ಹರನಗಿರಿ ಕಳುಹಿಸುವುದಾಗಿ ಹೇಳಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು ಶೈಜಲಾ.
ಅಂತಹ ಗಟ್ಟಿ ಮಹಿಳೆ, ಮೈಕ್ರೋ ಫೈನಾನ್ಸ್ ಶೈಜಲಾ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ..
"ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ಮೈಕ್ರೋ ಫೈನಾನ್ಸ್ ಕಂಪನಿಯವರು ಭರವಸೆ ಕೊಟ್ಟಿದ್ದರು. ಹೀಗಾಗಿ ತಮ್ಮ ವಿಕಲಚೇತನ ಪುತ್ರ ಏಕಾಏಕಿ ಕೋಮಾಕ್ಕೆ ಹೋಗಿದ್ದರಿಂದ ಚಿಕಿತ್ಸೆಗೆ ನಾನು ಸಾಲವನ್ನು ಪಡೆದುಕೊಂಡಿದ್ದೆ," ಎಂದು ಶೈಲಜಾ ಅವರು ತಮ್ಮ ಅನಿವಾರ್ಯತೆಗೆ ಕಾರಣವಾದ ಅಂಶವನ್ನು ಹೇಳಿಕೊಂಡಿದ್ದಾರೆ.
"ಪುತ್ರ ಗುಣಮುಖವಾದ ನಂತರ ಸಾಲ ತೀರಿಸಲು ಸಣ್ಣ ಅಂಗಡಿಯನ್ನು ತಮ್ಮ ಪುತ್ರನಿಗೆ ಮಾಡಿಕೊಟ್ಟಿದ್ದೆ. ಆದರೆ ಸರ್ಕಾರ ಅದಕ್ಕೂ ಅಡ್ಡಗಾಲು ಹಾಕಿ ಅಂಗಡಿಯನ್ನು ಬಂದ್ ಮಾಡಿಸಿದ ಬಳಿಕ ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ಮೈಕ್ರೋ ಫೈನಾನ್ಸ್ನವರು ಮನೆಗೆ ಬಂದು ಕಿರುಕುಳ ಕೊಡಲು ಆರಂಭಿಸಿದ್ದರು," ಎಂದು ಶೈಲಜಾ ವಿವರಿಸಿದ್ದಾರೆ.
ಶೈಲಜಾ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ ವಿವರ ಇಲ್ಲಿದೆ:
"ಈ ವರ್ಷ ಕಂತು ಕಟ್ಟಲು ಆಗಿರಲಿಲ್ಲ. ಅದಕ್ಕೆ ಸಮಯಾವಕಾಶವನ್ನು ಮೈಕ್ರೋ ಫೈನಾನ್ಸ್ ಕಂಪನಿಯರು ಕೊಡಲಿಲ್ಲ. ಇತ್ತೀಚೆಗೆ ತಾಳಿ ಮಾರಾಟ ಮಾಡಿ ಒಂದು ಕಂತನ್ನು ಕಟ್ಟಿದ್ದೇನೆ. ನನ್ನ ಮಗ ದುಡಿಯುವುದಿಲ್ಲ. ನಾನು ಬಿಸಿಯೂಟದ ತಯಾರಿಕೆ ಸಹಾಯಕಿಯಾಗಿ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗಿರುವ ವೇತನ ಕೂಡ ಕಡಿಮೆ. ಆದರೂ ನಾನು ಸ್ವಲ್ಪ ಸಮಯಾವಕಾಶ ಕೇಳಿದ್ದರೂ ಕೊಡದೆ ಕಿರುಕುಳ ಕೊಡುವುದು, ದೌರ್ಜನ್ಯ ಮಾಡುವುದನ್ನು ಫೈನಾನ್ಸ್ ಕಂಪನಿಗಳು ಮಾಡುತ್ತಿದ್ದಾರೆ. ಸರ್ಕಾರವೇ ನನಗೆ ಸಹಾಯ ಮಾಡಬೇಕು," ಎಂದು ಶೈಲಜಾ ಹರನಗಿರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
"4-5 ತಿಂಗಳುಗಳಲ್ಲಿ ನಾನು ಮಾಡಿದ್ದ ಸಾಲ ತೀರುತ್ತಿತ್ತು. ಅದಕ್ಕೆ ಪೈನಾನ್ಸ್ ಕಂಪನಿಯವರು ಅವಕಾಶ ಮಕೊಡಲಿಲ್ಲ. ಮನೆಯ ಬಾಗಿಲು ತೆರೆದರೆ ಸಾಕು ಮನೆಯೊಳಗೆ ಬಂದು ಸಾಲ ಕಟ್ಟಲೇ ಬೇಕು ಎಂದು ದೌರ್ಜನ್ಯ ಮಾಡುತ್ತಿದ್ದಾರೆ," ಎಂದು ಶೈಲಜಾ ಹೇಳಿದ್ದಾರೆ.
ರೈತ ಸಂಘ ಸಹಾಯ
ಅಭಿಯಾನಕ್ಕೆ ಸಹಾ ಮಾಡಿದ್ದ ರಾಜ್ಯ ರೈತ ಸಂಘದ ರಾಣೆಬೆನ್ನೂರು ತಾಲೂಕಾ ಘಟಕದ ಅಧ್ಯಕ್ಷ ಹನುಮಂತಪ್ಪ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಣೆಬೆನ್ನೂರಿನಲ್ಲಿ ನಾಯಿ ಕೊಡೆಗಳಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ಹುಟ್ಟಿಕೊಂಡಿವೆ. ಹೀಗಾಗಿ ತೊಂದರೆಗೆ ಈಡಾಗಿರುವ ಮಹಿಳೆಯರನ್ನು ಸಂಘಟಿಸಿ ಅವರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದ ಫೆಡರಲ್ ಕರ್ನಾಟಕಕ್ಕೆ ಹೇಳಿದರು.
ಏನೇನು ಕಿರುಕುಳ?
ಮೈಕ್ರೋ ಫೈನಾನ್ಸ್ ಹಾವಳಿಯಿಂದ ರಾಜ್ಯದ ರಾಯಚೂರು, ಬೆಳಗಾವಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿಗೆ ಮೂವರು ಬಲಿಯಾಗಿದ್ದಾರೆ. ಹಲವು ಕಡೆ ಹಲ್ಲೆ, ಮನೆಯಿಂದ ಹೊರಗೆ ಹಾಕಿ ತೊಂದರೆ ಕೊಡುವಂತಹ ಪ್ರಕರಣಗಳೂ ನಡೆದಿವೆ.
ರಾಮನಗರದ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಾಟಕ್ಕೆ ಊರನ್ನು ತೊರೆದಿರುವ ಪ್ರಕರಣ ನಡೆದಿತ್ತು. ಕೆಲವರಂತೂ ತಮ್ಮ ವೃದ್ಧ ತಂದೆ-ತಾಯಿಗಳನ್ನು ಮನೆಯಲ್ಲೇ ಬಿಟ್ಟು ತಲೆಮರೆಸಿಕೊಂಡಿರುವ ಘಟನೆಗಳೂ ನಡೆದಿವೆ. ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿ ಗ್ರಾಮದಲ್ಲಿ ಕಿರುಕುಳಕ್ಕೆ ಬೇಸತ್ತು ಲೀಲಾವತಿ ಎಂಬ 50 ವರ್ಷದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿ ಕೆಲವು ಮಹಿಳೆಯರು ತಮ್ಮ ಮೂತ್ರಪಿಂಡ (ಕಿಡ್ನಿ) ಮಾರಾಟ ಮಾಡಿದ ಬಗ್ಗೆ ದೂರುಗಳು ಕೇಳಿಬಂದಿದ್ದವು
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಲವು ಹಳ್ಳಿಗಳಲ್ಲಿ ಸಾಲ ಪಡೆದವರು ಗ್ರಾಮಗಳನ್ನೇ ತೊರೆದ ಘಟನೆಗಳು ನಡೆದಿವೆ. ಬೆಳಗಾವಿ ಜಿಲ್ಲೆಯ ತಾರಿಹಾಳ ಗ್ರಾಮದಲ್ಲಿ, ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಬಾಣಂತಿಯನ್ನು ಮನೆಯಿಂದ ಹೊರಹಾಕಿ ಮುಟ್ಟುಗೋಲು ಹಾಕಿದ ಘಟನೆ ನಡೆದಿತ್ತು. ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಲದ ಸುಳಿಗೆ ಸಿಲುಕಿ ಹಲವರು ಮನೆ ತೊರೆದ ಘಟನೆಗಳು ನಡೆದಿವೆ.