Karnataka By-Election | ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ಸಾಧ್ಯವಿಲ್ಲ: ಎಚ್‌ಡಿಕೆ
x

Karnataka By-Election | ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ಸಾಧ್ಯವಿಲ್ಲ: ಎಚ್‌ಡಿಕೆ

ಕಾರ್ಯಕರ್ತರ ಭಾವನೆಗಳನ್ನು ಅರಿತಿದ್ದೇನೆ. ಸ್ಥಳೀಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನೂ ಮೂರು ದಿನ ಸಮಯವಿದೆ. ಎಲ್ಲಾ ಬೆಳವಣಿಗೆ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ


"ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ" ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾರ್ಯಕರ್ತರ ಭಾವನೆಗಳನ್ನು ಅರಿತಿದ್ದೇನೆ. ಸ್ಥಳೀಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನೂ ಮೂರು ದಿನ ಸಮಯವಿದೆ. ಎಲ್ಲಾ ಬೆಳವಣಿಗೆ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿ ಹಲವರು ಯೋಗೇಶ್ವರಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದರು. ಆದರೆ, ಇಲ್ಲಿ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಕ್ಯೂ ನಿಂತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೆಳಿಗ್ಗೆಯಿಂದ ಸಿಎಂ, ಡಿಸಿಎಂ ಆದಿಯಾಗಿ ಎಲ್ಲಾ ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತದ ಕುರಿತು ಸಾಲು ಸಾಲಾಗಿ ಹೇಳಿಕೆ ಕೊಡುತ್ತಿದ್ದಾರೆ. ಯೋಗೇಶ್ವರ್ ಅವರು ಮೊದಲು ಯಾವ ಪಕ್ಷದಿಂದಾದರೂ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ ಎಂದು ಹೇಳುತ್ತಿದ್ದರು. ಆ ಮೇಲೆ ವರಸೆ ಬದಲಿಸಿದರು. ಈಗ ಬಿಎಸ್ಪಿಯಿಂದ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ನಾನು ಏನು ಮಾಡೋದು? ಎಂದು ಕುಮಾರಸ್ವಾಮಿ ಕೇಳಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಈ ರಾಜ್ಯದಲ್ಲಿ ನನ್ನಷ್ಟು ಉಪ‌ ಚುನಾವಣೆಗಳನ್ನು ಎದುರಿಸಿದ, ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಎಂತೆಂಥ ಚುನಾವಣೆ, ಅಗ್ನಿ ಪರೀಕ್ಷೆಗಳನ್ನೇ ಎದುರಿಸಿದ್ದೇನೆ. ಇನ್ನು ಚನ್ನಪಟ್ಟಣ ಉಪ ಚುನಾವಣೆ ಎದುರಿಸಲು ಭಯವೇ ಎಂದು ಹೇಳಿದರು.

ಮೋದಿ-ಶಾ ಅವರ ಸಂಬಂಧ ಹಾಳು ಮಾಡಿಕೊಳ್ಳಲಾರೆ. ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲ. ವೈಯಕ್ತಿಕವಾಗಿ ನಾನು ಮಾಡದ ತಪ್ಪಿಗೆ ತಲೆ ಕೊಟ್ಟಿದ್ದೇನೆ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡಬೇಕು ಎಂಬ ಮೋದಿಯವರ ಸಂಕಲ್ಪಕ್ಕೆ ಹೆಗಲಾಗಿ ನಿಂತಿದ್ದೇನೆ ಎಂದರು.

ಕಾರ್ಯಕರ್ತರ ಗದ್ದಲ

ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾಗ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬಾರದು, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ, ಭಾಷಣಕ್ಕೆ ಅಡ್ಡಿಪಡಿಸಿದರು.

ನಮ್ಮನ್ನು ಯೋಗೇಶ್ವರ್ ಹಿಂಸಿಸಿದ್ದಾರೆ. ಶಾಸಕರಾಗಿದ್ದಾಗ ಜೆಡಿಎಸ್ ಕಾರ್ಯಕರ್ತರನ್ನು ನಿತ್ಯ ಪೊಲೀಸ್ ಠಾಣೆಗೆ ಅಲೆಸುತ್ತಿದ್ದರು. ಒಂದು ವೇಳೆ ನಿಖಿಲ್ ಅವರಿಗೆ ಬಿಟ್ಟು ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಿದರೆ ನಮ್ಮ ಆಕ್ರೋಶವನ್ನು ನೀವು ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ನಾಯಕರಿಗೆ ಕಾರ್ಯಕರ್ತರು ಎಚ್ಚರಿಸಿದರು. ಆಗ ಕುಮಾರಸ್ವಾಮಿ ಅವರು ಭಾಷಣ ಮೊಟಕುಗೊಳಿಸಿ ಕುಳಿತರು.

Read More
Next Story