
ರಿಪೋರ್ಟ್ ಕಾರ್ಡ್ ಹಿಡಿದುಕೊಂಡೇ ಮತ ಕೇಳಲು ಬಂದಿದ್ದೇನೆ: ನರೇಂದ್ರ ಮೋದಿ
ಕರ್ನಾಟಕದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಐದು ದಿನಗಳಿರುವಾಗ, ಪ್ರಧಾನಿ ನರೇಂದ್ರ ಮೋದಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ, ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಪರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾದರು. ಲೋಕತಂತ್ರ ವ್ಯವಸ್ಥೆಯಲ್ಲಿ ರಿಪೋರ್ಟ್ ಕಾರ್ಡ್ ಮೂಲಕ ಮತಯಾಚನೆಗೆ ಬಂದಿದ್ದೇನೆ. ನಿಮ್ಮ ಕನಸುಗಳೇ ಈ ಮೋದಿಯ ಸಂಕಲ್ಪ. 24/7 ಕೆಲಸ ಮಾಡುವ ವಿಶ್ವಾಸದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಹೇಳಿದರು.
ʻʻಚಿಕ್ಕಬಳ್ಳಾಪುರದ ಸಹೋದರ-ಸಹೋದರಿಯರಿಗೆ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಮೋದಿ, ಐತಿಹಾಸಿಕ ಕೈವಾರ ತಾತಯ್ಯ ಅವರನ್ನು ನೆನೆದರು. ಈ ವಯಸ್ಸಿನಲ್ಲೂ ಉತ್ಸಾಹ ತೋರುವ ದೇವೇಗೌಡರಿಗೆ ಗೌರವ ಸಲ್ಲಿಸುತ್ತೇನೆ. ಅವರ ಮಾತುಗಳನ್ನು ಕೇಳಿ ನಮಗೆ ಮತ್ತಷ್ಟು ಉತ್ಸಾಹ ಬಂದಿದೆ. ದೇವೇಗೌಡರು ಯುಪಿಎ ಹಗರಣಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆʼʼ ಎಂದರು.
ʻʻಕೋಲಾರ, ಚಿಕ್ಕಬಳ್ಳಾಪುರದಲ್ಲಿ ಜನ ಮತ್ತೊಮ್ಮೆ ಮೋದಿ ಅಂತ ಸಂದೇಶ ಕೊಟ್ಟಿದ್ದಾರೆ. ಲೋಕತಂತ್ರ ವ್ಯವಸ್ಥೆಯಲ್ಲಿ ರಿಪೋರ್ಟ್ ಕಾರ್ಡ್ ಮೂಲಕ ಮತಯಾಚನೆಗೆ ಬಂದಿದ್ದೇನೆ. ನಿಮ್ಮ ಕನಸುಗಳೇ ಈ ಮೋದಿಯ ಸಂಕಲ್ಪ. 24/7 ಕೆಲಸ ಮಾಡುವ ವಿಶ್ವಾಸದಲ್ಲಿ ನಿಮ್ಮ ಮುಂದೆ ಬಂದಿದ್ದೇನೆʼʼ ಎಂದರು.
ʻʻನಮ್ಮ ಸರ್ಕಾರದ ಅತಿ ದೊಡ್ಡ ಫಲಾನುಭವಿಗಳು ಅಂದರೆ, ಎಸ್‌ಸಿ, ಎಸ್‌ಟಿ, ಓಬಿಸಿಗೆ ಸೇರಿದವರು. ಸ್ಲಂಗಳಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ, ಆದರೆ ನಾನು ಪ್ರಧಾನಿ ಆದ ಮೇಲೆ ಸ್ಲಂಗಳಿಗೂ ಎಲ್ಲಾ ಸೌಲಭ್ಯ ಸಿಗುತ್ತಿದೆ. ನೂರು ಕೋಟಿ ಹೊಸ ಮನೆಗಳನ್ನು ನಿರ್ಮಿಸಿ ಕೊಡುವ ಗ್ಯಾರೆಂಟಿ ನೀಡುತ್ತಿದ್ದೇನೆ. ಎನ್‌ಡಿಎ ಸರ್ಕಾರ ಬಂದ ಬಳಿಕ ಕಟ್ಟಕಡೆಯ ಜನರನ್ನು ಮುಂದೆ ತರಲು ಪ್ರಯತ್ನಿಸಿದೆ. ದಲಿತ ಸಮುದಾಯದ ದ್ರೌಪದಿ ಮುರ್ಮುರನನ್ನು ರಾಷ್ಟ್ರಪತಿ ಮಾಡಿದೆʼʼ ಎಂದು ಹೇಳಿದರು.
ಕುಡಿಯುವ ನೀರಿನ ಭರವಸೆ
ʻʻಯಾವುದೇ ಭದ್ರತೆ ಇಲ್ಲದೆ ಮುದ್ರಾ ಯೋಜನೆ ಸೌಲಭ್ಯ ಪಡೆಯುತ್ತಿದ್ದೀರಿ. ಎನ್‌ಡಿಎ ಸರ್ಕಾರ ನಮೋ ಡ್ರೋನ್ ಯೋಜನೆ ಮೂಲಕ ಮಹಿಳೆಯರಿಗೆ ಡ್ರೋನ್ ಪೈಲೆಟ್ ಟ್ರೈನಿಂಗ್ ಕೊಡುತ್ತಿದೆ. ಮುಂದೆ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮಹಿಳೆಯರು ವ್ಯವಸಾಯದಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲಿದ್ದಾರೆ. ಈ ನೆಲ ಮಾವು, ಹಾಲಿನ ಸುವಾಸನೆಯ ತಾಣ. ನಮ್ಮ ಸರ್ಕಾರ ಹೈನುಗಾರರು, ಮೀನುಗಾರರ ನೆರವಿಗೂ ಬಂದಿದೆ. ಶ್ರೀ ಅನ್ನ ಯೋಜನೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದೆ. ಈ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದೆ. ಇಲ್ಲಿ 2.70 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆʼʼ ಎಂದು ಹೇಳಿದರು.
ʻʻಕಾಂಗ್ರೆಸ್ ಜನರಿಗೆ ಅನ್ಯಾಯ ಮಾಡುತ್ತಿದೆ. ಪಿಎಂ ಕಿಸಾನ್ ಯೋಜನೆಗೆ ಕೇಂದ್ರದ ಹಣದ ಜೊತೆಗೆ ರಾಜ್ಯ ಸರ್ಕಾರವೂ ನಾಲ್ಕು ಸಾವಿರ ಕೊಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಲ್ಕು ಸಾವಿರ ಹಣ ನಿಲ್ಲಿಸಿದೆ. ಇಂತಹ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೀರ ಎಂದು ಭಾವಿಸಿದ್ದೇನೆʼʼ ಎಂದರು.
ʻʻನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಿಂದ ಪ್ರೇರೆಪಣೆ ಪಡೆದು ಬೆಂಗಳೂರು ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು 49ಕ್ಕೆ ಏರಿಕೆ ಮಾಡಲಾಗಿದೆ. ನಂದಿ ಬೆಟ್ಟ, ಕೋಲಾರಮ್ಮ ದೇಗುಲಗಳನ್ನು ಪ್ರಮುಖ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಮುಂದಾಗಿದೆ. ಏಪ್ರಿಲ್ 26 ರಂದು ನಡೆಯುವ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್, ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿಕೊಡಬೇಕುʼʼ ಎಂದು ಮತದಾರರಲ್ಲಿ ಮೋದಿ ಮನವಿ ಮಾಡಿದರು.